ನಂದೂರಬಾರ್ (ಮಹಾರಾಷ್ಟ್ರ) : ನಂದೂರಬಾರ್ ರೈಲು ನಿಲ್ದಾಣದಲ್ಲಿ ಮಾನಸಿಕ ರೋಗಿಯೊಬ್ಬ ವಿದ್ಯುತ್ ಕಂಬ ಏರಿದ್ದರಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರ ಸುಮಾರು ಒಂದು ಗಂಟೆಯ ನಂತರ ಸುಗಮವಾಗಿ ಆರಂಭವಾಯಿತು. ರೈಲ್ವೆ ನಿಲ್ದಾಣದ ವಿದ್ಯುತ್ ಕಂಬದ ಮೇಲೆ ಮಾನಸಿಕ ಅಸ್ವಸ್ಥ ವ್ಯಕ್ತಿ ಹತ್ತಿದ್ದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ವಿದ್ಯುತ್ ವ್ಯತ್ಯಯದಿಂದ ರೈಲು ಸಂಚಾರ ಸ್ಥಗಿತಗೊಂಡಿತ್ತು.
ಇದೇ ವೇಳೆ ಮುಂಬೈ ದಾನಪುರ್ ಎಕ್ಸ್ಪ್ರೆಸ್ ಹಾಗೂ ನವಜೀವನ್ ಎಕ್ಸ್ ಪ್ರೆಸ್ ರೈಲುಗಳನ್ನು ಸುಮಾರು ಎರಡು ಗಂಟೆಗಳ ಕಾಲ ನಿಲ್ಲಿಸಲಾಯಿತು. ರೈಲು ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ಸಾವಿರಾರು ಪ್ರಯಾಣಿಕರು ಪರದಾಡಿದರು. ಹಲವು ಪ್ರಯತ್ನಗಳ ನಂತರ, ರೈಲ್ವೆ ಆಡಳಿತವು ಮಾನಸಿಕ ರೋಗಿಯನ್ನು ಮಧ್ಯಾಹ್ನ ಹನ್ನೆರಡು ಗಂಟೆಗೆ ವಿದ್ಯುತ್ ಲೈನ್ ಕಂಬದಿಂದ ಕೆಳಗಿಳಿಸಿದೆ.
ಒಂದು ಗಂಟೆಯ ನಂತರ ರೈಲು ಸೇವೆಯನ್ನು ಪುನಾರಂಭಿಸಲಾಗಿದೆ. ಆದರೆ ಆರಂಭದಲ್ಲಿ ಮಾನಸಿಕ ರೋಗಿ ರೈಲ್ವೆ ಸಿಬ್ಬಂದಿಯ ಮಾತಿಗೆ ಕಿವಿಗೊಡುವ ಮನಸ್ಥಿತಿಯಲ್ಲಿ ಇಲ್ಲದ ಕಾರಣ ಕೆಲಕಾಲ ಆಡಳಿತ ವ್ಯವಸ್ಥೆಗೆ ತೊಂದರೆಯಾಗಿರುವುದು ಕಂಡು ಬಂತು. ಕೊನೆಗೂ ಡೀಸೆಲ್ ಎಂಜಿನ್ ಸಹಾಯದಿಂದ ಮಾನಸಿಕ ರೋಗಿಯನ್ನು ಕೆಳಗಿಳಿಸುವಲ್ಲಿ ರೈಲ್ವೆ ಆಡಳಿತ ಯಶಸ್ವಿಯಾಗಿದೆ.
ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ್ದ ಮಾನಸಿಕ ಅಸ್ವಸ್ಥ : ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಕೊಳ್ನಾಡುವಿನಲ್ಲಿ (ಸೆಪ್ಟೆಂಬರ್ 30-2023) ಬೆಳಗ್ಗೆ ನಡೆದಿತ್ತು. ಈ ವ್ಯಕ್ತಿಯನ್ನು ವಿಜಯಪುರದ ಸತೀಶ್ ಎಂದು ಗುರುತಿಸಲಾಗಿತ್ತು. ವ್ಯಕ್ತಿಯು ಮಾನಸಿಕ ಅಸ್ವಸ್ಥನಾಗಿದ್ದು, ಈ ಕೃತ್ಯದ ಹಿಂದೆ ಯಾವುದೇ ದುರುದ್ದೇಶ ಇಲ್ಲ ಎಂದು ಪೊಲೀಸರು ತಿಳಿಸಿದ್ದರು.
ಅಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಮುಲ್ಕಿಯ ಕೊಳ್ಳಾಡುವಿನಲ್ಲಿರುವ ಮೊಬೈಲ್ ಟವರ್ವೊಂದಕ್ಕೆ ವ್ಯಕ್ತಿಯೊಬ್ಬ ಹತ್ತಿದ್ದ. ಮೊಬೈಲ್ ಟವರ್ನ ತುತ್ತ ತುದಿಗೆ ಹತ್ತಿದ್ದ ವ್ಯಕ್ತಿ ಮೇಲೆ ಕುಳಿತು ಕೆಲಕಾಲ ಆತಂಕ ಸೃಷ್ಟಿಸಿದ್ದ. ಈ ಬಗ್ಗೆ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು. ಬಳಿಕ 12 ಗಂಟೆಯ ಸುಮಾರಿಗೆ ವ್ಯಕ್ತಿಯು ಟವರ್ನಿಂದ ಕೆಳಗೆ ಇಳಿದು ಬಂದಿದ್ದ. ಈ ವ್ಯಕ್ತಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು. ಈ ದೃಶ್ಯವು ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ : ಮಂಗಳೂರು : ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ ಮಾನಸಿಕ ಅಸ್ವಸ್ಥ