ETV Bharat / bharat

Mekedatu Project: ಮೇಕೆದಾಟು ಯೋಜನೆ: ಕಾಂಗ್ರೆಸ್, ಡಿಎಂಕೆ​ ವಿರುದ್ಧ ಪಳನಿಸ್ವಾಮಿ ವಾಗ್ದಾಳಿ

author img

By

Published : Jul 3, 2023, 8:22 AM IST

ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಪ್ರಯತ್ನವನ್ನು ಡಿಎಂಕೆ ಹಾಗೂ ಅದರ ಮಿತ್ರಪಕ್ಷಗಳು ಪ್ರತಿಭಟಿಸುತ್ತಿಲ್ಲ ಎಂದು ಎಡಪ್ಪಾಡಿ ಪಳನಿಸ್ವಾಮಿ ಟೀಕಿಸಿದ್ದಾರೆ.

Palaniswami and Stalin
ಪಳನಿಸ್ವಾಮಿ ಹಾಗೂ ಸ್ಟಾಲಿನ್​

ಚೆನ್ನೈ: ವಿವಾದಿತ ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಕರ್ನಾಟಕ ನಿರ್ಧರಿಸಿದೆ. ಸಿಎಂ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ತಮಿಳುನಾಡಿನ ಜನರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಇದಕ್ಕೆ ಯಾವುದೇ ಪ್ರತಿರೋಧ ತೋರುತ್ತಿಲ್ಲ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಟೀಕಿಸಿದ್ದಾರೆ. ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಮತ್ತು ತಮಿಳುನಾಡಿನ ಡಿಎಂಕೆ ವಿರುದ್ಧ ಅವರು ಭಾನುವಾರ ವಾಗ್ದಾಳಿ ನಡೆಸಿದರು.

ವಿಶೇಷವಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಪಳನಿಸ್ವಾಮಿ, "ನೆರೆ ರಾಜ್ಯ ಕರ್ನಾಟಕ ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಜಲಾಶಯ ನಿರ್ಮಿಸುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರತಿಪಾದನೆಯನ್ನು ತೀವ್ರವಾಗಿ ವಿರೋಧಿಸಲಿಲ್ಲ" ಎಂದು ದೂರಿದ್ದಾರೆ.

"ಅಂದು ಕರ್ನಾಟಕ ಸರ್ಕಾರದ ವಿರುದ್ಧ ನಾನೇ ತೀವ್ರ ಟೀಕೆ ಮಾಡಿದ್ದೆ. ಮೇ ತಿಂಗಳಲ್ಲಿ ಡಿ.ಕೆ. ಶಿವಕುಮಾರ್​ ಈ ವಿಷಯವನ್ನು ಪ್ರಸ್ತಾಪಿಸಿದಾಗ ಡಿಎಂಕೆ ಸರ್ಕಾರದ ಕೈಗೊಂಬೆ ಮುಖ್ಯಮಂತ್ರಿ ಆಗಿರುವ ಸ್ಟಾಲಿನ್ ತಕ್ಕ ಉತ್ತರ ನೀಡಬೇಕಿತ್ತು" ಎಂದರು.

"ಮೇಕೆದಾಟು ಯೋಜನೆಗೆ ತಮಿಳುನಾಡಿನ ಒಪ್ಪಿಗೆ ಅಗತ್ಯ. ಕಾವೇರಿ ನದಿ ಪಾತ್ರದಲ್ಲಿ ಜಲಾಶಯ ನಿರ್ಮಿಸಲು ಉದ್ದೇಶಿಸಿರುವುದರಿಂದ ತಮಿಳುನಾಡು ಇದರಲ್ಲಿ ಮಧ್ಯಪ್ರವೇಶ ಮಾಡುತ್ತದೆ ಎಂದು ಕಾವೇರಿ ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಈ ವರ್ಷದ ಮೇ ವರೆಗೆ ಮೇಕೆದಾಟು ಸಮಸ್ಯೆ ಶಾಂತವಾಗಿತ್ತು. ಇದೀಗ ಕರ್ನಾಟಕದಲ್ಲಿ ಕಾಂಗ್ರೆಸ್​ ಸರ್ಕಾರ ಆಡಳಿತಕ್ಕೆ ಬಂದಿದ್ದು, ಡಿ.ಕೆ. ಶಿವಕುಮಾರ್​ ಅವರು, ಕಾಂಗ್ರೆಸ್​ ಆಡಳಿತಕ್ಕೆ ಬಂದ ನಂತರ ಖಂಡಿತವಾಗಿಯೂ ಅಣೆಕಟ್ಟು ನಿರ್ಮಿಸಲಾಗುತ್ತದೆ" ಎಂದು ಹೇಳಿದ್ದಾರೆ.

"ಅದರಂತೆ, ಕರ್ನಾಟಕದಲ್ಲಿ ಸರ್ಕಾರ ರಚಿಸಿದ ಕೂಡಲೇ ಡಿಕೆಶಿ​ ಅವರು ತಮ್ಮ ಅಧಿಕಾರಿಗಳಿಗೆ ಮೇಕೆದಾಟು ಯೋಜನೆ ಕೆಲಸಗಳನ್ನು ತ್ವರಿತಗೊಳಿಸುವಂತೆ ಸೂಚನೆ ನೀಡಿದ್ದರು. ಇತ್ತೀಚೆಗೆ ಕೇಂದ್ರ ಜಲಶಕ್ತಿ ಸಚಿವರಿಗೂ ಈ ಕುರಿತು ಪತ್ರ ಬರೆದಿದ್ದರು. ರಾಜ್ಯದ ಭವಿಷ್ಯಕ್ಕೆ ಧಕ್ಕೆಯಾಗಲಿದೆ ಎಂದು ಹೇಳಿ, ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪಳನಿಸ್ವಾಮಿ, 2018ರಲ್ಲಿ ತಮ್ಮ ಆಡಳಿತದ ಸರ್ಕಾರವಿದ್ದಾಗ ಮೇಕೆದಾಟು ಯೋಜನೆ ವಿಷಯ ಕಾವೇರಿ ನಿರ್ವಹಣಾ ಪ್ರಾಧಿಕಾರದ (ಸಿಎಂಎ) ಸಭೆಗಳಲ್ಲಿ ಎಂದಿಗೂ ಚರ್ಚೆಯಾಗಲಿಲ್ಲ. ಅದು ಚರ್ಚೆಯಾಗದಂತೆ ನಾವು ನೋಡಿಕೊಂಡಿದ್ದೆವು" ಎಂದು ಅವರು ಹೇಳಿದರು.

ಕಾವೇರಿ ವಿಚಾರದಲ್ಲಿ ಮೌನವಹಿಸಿದ್ದಕ್ಕಾಗಿ ಸ್ಟಾಲಿನ್ ಅವರನ್ನು ಟೀಕಿಸಿದ ಅವರು, "ಕರ್ನಾಟಕ ಮೇಕೆದಾಟು ಯೋಜನೆ ಬಗ್ಗೆ ಮುಂದುವರಿಯುವುದನ್ನು ತಡೆಯಲು ಡಿಎಂಕೆ ನೇತೃತ್ವದ ಒಕ್ಕೂಟಕ್ಕೆ ಸೇರಿದ 38 ಲೋಕಸಭಾ ಸಂಸದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವಂತೆ ಒತ್ತಾಯಿಸಿದ್ದಾರೆ. ತಮಿಳುನಾಡು ಮರುಭೂಮಿ ಆಗುವುದನ್ನು ತಡೆಯಲು ಎಐಎಡಿಎಂಕೆ ಅಗತ್ಯ ಹೋರಾಟಗಳನ್ನು ನಡೆಸಲಿದೆ" ಎಂದು ಮಾಜಿ ಮುಖ್ಯಮಂತ್ರಿ ತಿಳಿಸಿದರು.

ಇದನ್ನೂ ಓದಿ: Mekedatu Project: ಮೇಕೆದಾಟು ಯೋಜನೆಗೆ ತಕರಾರು ತೆಗೆಯುತ್ತಿರುವ ತಮಿಳುನಾಡಿಗೆ ಸರಿಯಾಗಿ ಉತ್ತರ ಕೊಡಿ: ಸಂಸದ ಪ್ರತಾಪ್​ ಸಿಂಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.