ETV Bharat / bharat

ವೈದ್ಯಕೀಯ ಪವಾಡ: ಗರ್ಭದಲ್ಲೇ ಅವಳಿ ಮಕ್ಕಳ ಮೊದಲ ಭ್ರೂಣ ಸಾವು, 125 ದಿನದ ಬಳಿಕ ಜನಿಸಿದ ಎರಡನೇ ಶಿಶು

author img

By ETV Bharat Karnataka Team

Published : Nov 18, 2023, 9:34 AM IST

Rare Delivery in Burdwan Medical college hospital: ಬರ್ಧಮಾನ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅಪರೂಪದ ಹೆರಿಗೆ ಮಾಡಿಸಲಾಗಿದೆ. ತಾಯಿಯ ಗರ್ಭದಲ್ಲಿ ಅವಳಿ ಮಕ್ಕಳ ಮೊದಲ ಭ್ರೂಣ ಸಾವನ್ನಪ್ಪಿದ 125 ದಿನಗಳ ನಂತರ ಎರಡನೇ ಮಗುವಿಗೆ ಮಹಿಳೆ ಜನ್ಮ ನೀಡಿದ್ದಾಳೆ.

Medical miracle in Bardhaman
ವೈದ್ಯಕೀಯ ಪವಾಡ

ಬರ್ಧಮಾನ್ (ಪಶ್ಚಿಮ ಬಂಗಾಳ) : ಕಳೆದ ನಾಲ್ಕು ತಿಂಗಳ ಹಿಂದೆ ಅವಳಿ ಮಕ್ಕಳನ್ನು ಹೊಂದಿದ್ದ ಮಹಿಳೆಯ ಗರ್ಭದಲ್ಲಿ ಭ್ರೂಣವೊಂದು ಸಾವನ್ನಪ್ಪಿತ್ತು. ಇದರಿಂದ ಮೃತ ಭ್ರೂಣವನ್ನು ಹೆರಿಗೆ ಮಾಡಿ ಹೊರ ತೆಗೆದ ಬಳಿಕ ಹೊಕ್ಕುಳಬಳ್ಳಿ ಕಟ್ಟಿಕೊಂಡು ಎರಡನೇ ಮಗುವಿನ ಹೆರಿಗೆ ಮಾಡಿಸುವುದು ವೈದ್ಯರಿಗೆ ಸವಾಲಾಗಿತ್ತು. ಯಾವುದೇ ಕ್ಷಣದಲ್ಲಿ ತಾಯಿ ಮತ್ತು ಮಗುವಿನ ನಡುವೆ ಸೋಂಕು ಹರಡುವ ಸಾಧ್ಯತೆ ಇತ್ತು. ಆದರೆ, ಬರ್ಧಮಾನ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರು ಗರ್ಭಿಣಿಯನ್ನು 125 ದಿನಗಳ ಕಾಲ ತಮ್ಮ ವಶದಲ್ಲಿಟ್ಟುಕೊಂಡು ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.

ಬರ್ಧಮಾನ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಉಪ ಪ್ರಾಂಶುಪಾಲ ಡಾ. ತಪಸ್ ಘೋಷ್ ಮಾತನಾಡಿ, "ಇದೊಂದು ಅಪರೂಪದ ಪ್ರಕರಣ. 1996ರಲ್ಲಿ ಬಾಲ್ಟಿಮೋರ್‌ನಲ್ಲಿ 90 ದಿನಗಳ ಕಾಲ ಗರ್ಭದಲ್ಲಿ ಮಗುವನ್ನು ಇರಿಸಲಾಗಿತ್ತು. ಆದರೆ 125 ದಿನಗಳ ಕಾಲ ಮಗುವನ್ನು ಇಟ್ಟುಕೊಂಡಿರುವ ದಾಖಲೆ ಇಲ್ಲ" ಎಂದು ಹೇಳಿದರು.

ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಕಾರ, ಕಳೆದ ಜುಲೈನಲ್ಲಿ 41 ವರ್ಷದ ಮಹಿಳೆಯೊಬ್ಬರು ಆಸ್ಪತ್ರೆಗೆ ಬಂದಿದ್ದರು. ವೈದ್ಯರು ತಪಾಸಣೆ ನಡೆಸಿದಾಗ ಆಕೆಯ ಗರ್ಭದಲ್ಲಿ ಅವಳಿ ಮಕ್ಕಳಿರುವುದು ಪತ್ತೆಯಾಗಿತ್ತು. ಅದರಲ್ಲಿ ಒಂದು ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿದೆ. ವೈದ್ಯರು ಮೃತ ಭ್ರೂಣವನ್ನು ಹೆರಿಗೆ ಮಾಡಿಸಿ ಹೊಕ್ಕುಳಬಳ್ಳಿಯನ್ನು ಕಟ್ಟಿ ಗರ್ಭಾಶಯಕ್ಕೆ ಹಿಂತಿರುಗಿಸಿದ್ದರು. ಪರಿಣಾಮ, ಎರಡನೇ ಮಗುವನ್ನು ಆರೋಗ್ಯಕರವಾಗಿ ಮತ್ತು ನೈಸರ್ಗಿಕವಾಗಿ ಹೆರಿಗೆ ಮಾಡಿಸುವಾಗ ಸೋಂಕು ತಗುಲುವ ಸಾಧ್ಯತೆ ಇತ್ತು ಮತ್ತು ಇದು ವೈದ್ಯರಿಗೆ ಸವಾಲಾಗಿತ್ತು. ಆ ಕಾರಣಕ್ಕೆ ಅಪಾಯ ತಪ್ಪಿಸಲು ತಜ್ಞ ವೈದ್ಯಕೀಯ ತಂಡ ರಚಿಸಿ ಆಸ್ಪತ್ರೆಯಲ್ಲಿ ಗರ್ಭಿಣಿಯನ್ನು ಇರಿಸಲಾಗಿತ್ತು.

125 ದಿನಗಳ ಕಾಲ ಆಸ್ಪತ್ರೆಯಲ್ಲಿ ಗರ್ಭಿಣಿ ಮೇಲೆ ನಿಗಾ ಇರಿಸಿ, ಚಿಕಿತ್ಸೆ ಮುಂದುವರೆಸಲಾಗಿತ್ತು. ನಂತರ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯಂದು ಸಿಸೇರಿಯನ್ ಮೂಲಕ ಎರಡನೇ ಮಗುವಿಗೆ ಜನ್ಮ ನೀಡಲಾಯಿತು. ಮಗುವಿನ ತೂಕ 2 ಕೆಜಿ 900 ಗ್ರಾಂ ಇದ್ದು, ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ.

ಇದನ್ನೂ ಓದಿ : ನಯನತಾರಾ - ವಿಘ್ನೇಶ್​ ಶಿವನ್​​​ ಅವಳಿ ಮಕ್ಕಳ ಮೊದಲ ವರ್ಷದ ಜನ್ಮದಿನ : ಫೋಟೋ ಹಂಚಿಕೊಂಡ ಸ್ಟಾರ್ ಕಪಲ್

ಈ ಬಗ್ಗೆ ಮಾತನಾಡಿದ ಮಗುವಿನ ತಂದೆ ಅನುಪ್ ಪ್ರಮಾಣಿಕ್, ನಾಲ್ಕು ತಿಂಗಳಲ್ಲೇ ಮೊದಲ ಮಗು ಕಳೆದುಕೊಂಡೆ. ಈ ವೇಳೆ ತುಂಬಾ ಚಿಂತಿತನಾಗಿದ್ದೆ, ನಂತರ ನನ್ನ ಹೆಂಡತಿಯನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಿದೆ. ವೈದ್ಯರು ಸಹಾನುಭೂತಿಯಿಂದ ಸಹಾಯ ಹಸ್ತ ಚಾಚಿದರು, ಅವರು ಐದು ತಿಂಗಳು ಆಸ್ಪತ್ರೆಯಲ್ಲೇ ಬಿಟ್ಟುಕೊಂಡು ನನ್ನ ಹೆಂಡತಿಗೆ ಚಿಕಿತ್ಸೆ ನೀಡಿದರು, ಬಹುಶಃ ನಾನು ಅವಳನ್ನು ಮನೆಗೆ ಕರೆತಂದಿದ್ದರೆ ಅಪಾಯ ಸಂಭವಿಸುತ್ತಿತ್ತು, ವೈದ್ಯರೇ ನನಗೆ ದೇವರು." ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಅವಳಿ ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ ನಟಿ ಅಮೂಲ್ಯ; ಫೋಟೋಸ್​ ನೋಡಿ...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.