ETV Bharat / bharat

ಫಾರ್ಮಾ ಕಂಪನಿಯಲ್ಲಿ ಭಾರೀ ಸ್ಫೋಟ: ಇಬ್ಬರು ಕಾರ್ಮಿಕರ ಸಾವು, ಮೂವರಿಗೆ ಗಂಭೀರ ಗಾಯ

author img

By

Published : Jan 31, 2023, 5:54 PM IST

ಆಂಧ್ರ ಪ್ರದೇಶದ ಅನಕಾಪಲ್ಲಿ ಜಿಲ್ಲೆಯಲ್ಲಿ ಫಾರ್ಮಾ ಕಂಪನಿಯೊಂದಲ್ಲಿ ದುರಂತ ಸಂಭವಿಸಿದೆ. ಭಾರೀ ಸ್ಫೋಟದಿಂದ ಇಬ್ಬರು ಸಾವಿಗೀಡಾಗಿ, ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ.

massive-explosion-in-pharma-company-in-andhra-pradesh
ಫಾರ್ಮಾ ಕಂಪನಿಯಲ್ಲಿ ಭಾರೀ ಸ್ಫೋಟ: ಇಬ್ಬರು ಕಾರ್ಮಿಕರ ಸಾವು, ಮೂವರಿಗೆ ಗಂಭೀರ ಗಾಯ

ಅನಕಾಪಲ್ಲಿ (ಆಂಧ್ರಪ್ರದೇಶ): ಫಾರ್ಮಾ ಕಂಪನಿಯೊಂದಲ್ಲಿ ಭಾರೀ ಸ್ಫೋಟ ಸಂಭವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಅನಕಾಪಲ್ಲಿ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಇದೇ ಘಟನೆಯಲ್ಲಿ ಇತರ ಮೂವರು ಕಾರ್ಮಿಕರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಲ್ಲಿನ ಅಚ್ಯುತಪುರಂ ವಿಶೇಷ ಆರ್ಥಿಕ ವಲಯ (ಎಸ್​​ಇಝೆಡ್​)ದಲ್ಲಿರುವ ಜಿಎಫ್​ಎಂಎಸ್​ ಫಾರ್ಮಾ ಕಂಪನಿಯಲ್ಲಿ ಇಂದು ಬೆಳಗ್ಗೆ ಈ ದುರಂತ ನಡೆದಿದೆ. ಭಾರೀ ಸ್ಫೋಟ ಸಂಭವಿಸುತ್ತಿದ್ದಂತೆ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರೆಲ್ಲರೂ ಭಯಭೀತರಾಗಿ ಹೊರ ಓಡಿ ಬಂದಿದ್ದಾರೆ. ಆದರೂ, ಕೆಲ ಕಾರ್ಮಿಕರು ಕಾರ್ಖಾನೆಯಿಂದ ಹೊರ ಬರಲಾಗದೇ ಸಿಲುಕಿಕೊಂಡಿದ್ದಾರೆ.

ಇದನ್ನೂ ಓದಿ: ಕಲ್ಲಿದ್ದಲು ಬೂದಿ ಉತ್ಖನನ ವೇಳೆ ಹೊಂಡ ಕುಸಿದು ಮೂವರ ದುರ್ಮರಣ

ಮತ್ತೊಂದೆಡೆ, ಸ್ಫೋಟದಿಂದ ಅಗ್ನಿ ಕಾಣಿಸಿಕೊಂಡ ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಿಯಂತ್ರಿಸಲು ಹರಸಾಹಸ ಪಟ್ಟರು. ಅಲ್ಲದೇ, ಪೊಲೀಸರು ಸಹ ಸ್ಥಳಕ್ಕೆ ಧಾವಿಸಿ ಕಾರ್ಮಿಕರ ರಕ್ಷಣಾ ಕಾರ್ಯ ನಡೆಸಿದರು. ದಟ್ಟವಾದ ಹೊಗೆ ಕಾಣಿಸಿಕೊಂಡ ಪರಿಣಾಮ ಸುತ್ತಮುತ್ತಲಿನ ಗ್ರಾಮಗಳ ಜನರು ಸಹ ಆತಂಕಗೊಂಡಿದ್ದಾರೆ. ಇನ್ನು, ರಿಯಾಕ್ಟರ್​ ಸ್ಫೋಟಗೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದ್ದು, ಮೂವರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಫಾರ್ಮಾ ಕಂಪನಿಗೆ ಜಿಲ್ಲಾಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಸ್ಫೋಟದ ಬಗ್ಗೆ ನಿಖರ ಕಾರಣ ತಿಳಿಯಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ತಿಂಗಳ ಹಿಂದೆ ನಾಲ್ವರ ಸಜೀವ ದಹನ: ಇದೇ ಅನಕಪಲ್ಲಿ ಜಿಲ್ಲೆಯ ಪರವಾಡ ಫಾರ್ಮಾ ಸಿಟಿ ಕಂಪನಿಯಲ್ಲಿ ಕಳೆದ ತಿಂಗಳ ಹಿಂದೆಯಷ್ಟೇ ಭಾರಿ ಅವಘಡ ಸಂಭವಿಸಿತ್ತು. ಲಾರಸ್ ಲ್ಯಾಬ್​ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ನಾಲ್ವರು ಕಾರ್ಮಿಕರು ಸಜೀವ ದಹನವಾಗಿದ್ದರು. ಮತ್ತೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದರು.

ಫಾರ್ಮಾ ಸಿಟಿಯ ಮೂರನೇ ಘಟಕ - 8ರ ಉತ್ಪಾದನಾ ವಿಭಾಗದಲ್ಲಿ ರಿಯಾಕ್ಟರ್ ಮತ್ತು ಡ್ರೈಯರ್‌ಗಳ ಸಮೀಪ ಸ್ಫೋಟ ಸಂಭವಿಸಿ, ಬೆಂಕಿ ಕಾಣಿಸಿಕೊಂಡಿತ್ತು. ಈ ವಿಭಾಗದಲ್ಲಿ ಸೋರಿಕೆ ಸಮಸ್ಯೆಯನ್ನು ಕಾರ್ಮಿಕರು ಸರಿಪಡಿಸಲು ಯತ್ನಿಸುತ್ತಿರುವಾಗಲೇ ಈ ಬೆಂಕಿ ತಗುಲಿತ್ತು. ಏನಾಗುತ್ತಿದೆ ಎಂದು ತಿಳಿಯುಷ್ಟರಲ್ಲೇ ನಾಲ್ವರು ಬೆಂಕಿಗೆ ಆಹುತಿಯಾಗಿದ್ದರು.

ಇದನ್ನೂ ಓದಿ: ಪರವಾಡ ಫಾರ್ಮಾ ಸಿಟಿಯಲ್ಲಿ ಬೆಂಕಿ ಅವಘಡ: ನಾಲ್ವರು ಸಾವು

ಈ ಘಟನೆಗೂ ಮುನ್ನ ಅನಕಾಪಲ್ಲಿ ಜಿಲ್ಲೆಯ ಅಚ್ಯುತಪುರಂನಲ್ಲಿರುವ ಸೀಡ್ಸ್ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ರಾಸಾಯನಿಕ ಅನಿಲ ಸೋರಿಕೆ ಘಟನೆಯು ನಡೆದಿತ್ತು. ಇದರಿಂದ ಸುಮಾರು 150ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು ಅಸ್ವಸ್ಥಗೊಂಡಿದ್ದರು. ಈ ಕಾರ್ಖಾನೆಯಲ್ಲಿ ಸುಮಾರು ನಾಲ್ಕು ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗಲೇ ವಿಷಾನಿಲ ಸೇವನೆಯಿಂದ ಉದ್ಯೋಗಿಗಳು ಸ್ಥಳದಲ್ಲೇ ವಾಂತಿ ಮಾಡಿಕೊಂಡು ಮೂರ್ಛೆ ಹೋಗಿದ್ದರು.

ಇದನ್ನೂ ಓದಿ: ಆಂಧ್ರದ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ: 150ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು ಅಸ್ವಸ್ಥ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.