ಹೈದರಾಬಾದ್ (ತೆಲಂಗಾಣ): ಪತ್ನಿ ಲೈಂಗಿಕ ಕ್ರಿಯೆಗೆ ನಿರಾಕರಿಸಿದಳೆಂದು ಕೋಪಗೊಂಡ ಪತಿಯೊಬ್ಬ ಆಕೆಯ ಕತ್ತು ಹಿಸುಕಿ ಕೊಂದು ಹಾಕಿರುವ ದಾರುಣ ಘಟನೆ ಹೈದರಾಬಾದ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತದೇಹದ ಮರಣೋತ್ತರ ವರದಿಯಲ್ಲಿ ಆಘಾತಕಾರಿ ಪ್ರಕರಣ ಬಯಲಾಗಿದೆ. ಮೇ 20 ರ ರಾತ್ರಿ ಘಟನೆ ನಡೆದಿದ್ದರೂ ಪೊಲೀಸರು ಈ ಪ್ರಕರಣವನ್ನು ಬಗೆಹರಿಸಲು ಸುಮಾರು 10 ದಿನ ತೆಗೆದುಕೊಂಡಿದ್ದರು.
ಇಡೀ ಪ್ರಕರಣದ ವಿವರ: ಆರೋಪಿ ಜಟಾವತ್ ತರುಣ್ (24) ಎಂಬಾತ ತನ್ನ ಪತ್ನಿ ಝಾನ್ಸಿ (20) ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದಳು ಎಂದು ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯವರಾದ ಇವರಿಬ್ಬರು 2021 ರಲ್ಲಿ ಪ್ರೇಮ ವಿವಾಹವಾಗಿದ್ದರು. ಆಟೋ ರಿಕ್ಷಾ ಚಾಲಕನಾಗಿದ್ದ ತರುಣ್ ಪತ್ನಿಯೊಂದಿಗೆ ಹೈದರಾಬಾದ್‌ಗೆ ವಲಸೆ ಬಂದಿದ್ದ. ಕುಟುಂಬ ಐಎಸ್ ಸದನ್ ವಿಭಾಗದ ಖಾಜಾ ಬಾಗ್‌ನಲ್ಲಿ ನೆಲೆಸಿತ್ತು. ಸಂತೋಷವಾಗಿಯೇ ಜೀವನ ಸಾಗಿಸುತ್ತಿದ್ದರು. ದಂಪತಿಗೆ ಎರಡು ವರ್ಷದ ಮಗನಿದ್ದಾನೆ. ಏಪ್ರಿಲ್ 16 ರಂದು ಝಾನ್ಸಿ ಹೆಣ್ಣು ಮಗುವಿಗೂ ಜನ್ಮ ನೀಡಿದ್ದರು.
ಮೇ 20 ರ ರಾತ್ರಿ ತರುಣ್ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆಯ ಬಯಕೆ ವ್ಯಕ್ತಪಡಿಸಿದ್ದಾನೆ. ಇದಕ್ಕೆ ಪತ್ನಿ ತನಗೆ ತುಂಬಾ ಸುಸ್ತಾಗಿದೆ ಎಂದು ತಿಳಿಸಿದ್ದಾಳೆ. ಹೀಗಿದ್ದರೂ ಪತ್ನಿಯನ್ನು ಒತ್ತಾಯಿಸಿದ್ದಾನೆ. ಆಕೆ ವೇದನೆಯಿಂದ ಜೋರಾಗಿ ಕೂಗಲು ಪ್ರಾರಂಭಿಸಿದ್ದಾಳೆ. ತರುಣ್ ತನ್ನ ಕೈಯಿಂದ ಆಕೆಯ ಬಾಯಿ ಮತ್ತು ಮೂಗನ್ನು ಗಟ್ಟಿಯಾಗಿ ಮುಚ್ಚಿದ್ದಾನೆ. ಸ್ವಲ್ಪ ಸಮಯದವರೆಗೂ ಝಾನ್ಸಿ ಬಾಯಿ ಮತ್ತು ಮೂಗನ್ನು ತರುಣ್ ತನ್ನ ಕೈಯಿಂದ ನಿರ್ಬಂಧಿಸಿದ್ದರಿಂದ ಉಸಿರಾಟ ಕಡಿತಗೊಂಡಿದೆ. ಝಾನ್ಸಿ ಬಾಯಿಯಲ್ಲಿ ನೊರೆ ಬರಲು ಪ್ರಾರಂಭಿಸಿದೆ. ದುರುಳ ಗಂಡ ಗಾಬರಿಗೊಂಡು ತನ್ನ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾನೆ. ಸಂಬಂಧಿಕರು ಕೂಡಲೇ ಆಕೆಯನ್ನು ಒವೈಸಿ ಆಸ್ಪತ್ರೆಗೆ ದಾಖಲಿಸಿದ್ದು, ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.
ಆಸ್ಪತ್ರೆಯ ವೈದ್ಯಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ರವಾನಿಸಲಾಗಿತ್ತು. ತರುಣ್ ಸಾವಿನ ಕಾರಣದ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ. ಝಾನ್ಸಿಯ ತಂದೆ ನೆನವತ್ ರೆಕಿಯಾ ನೀಡಿದ ದೂರಿನ ಮೇರೆಗೆ ಸೈದಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೇ 30 ರಂದು ನಡೆದ ಶವಪರೀಕ್ಷೆ ವರದಿಯಲ್ಲಿ ಮಹಿಳೆ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಪೊಲೀಸರು ತರುಣ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದರು. ನಂತರ ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿತು. ಈಗ ಆರೋಪಿ ತರುಣ್ ಜೈಲುಪಾಲಾಗಿದ್ದಾನೆ. ಎರಡು ವರ್ಷದ ಮಗ ಮತ್ತು ಒಂದು ತಿಂಗಳ ಹೆಣ್ಮಗು ಅನಾಥವಾಗಿವೆ.!
ಇದನ್ನೂ ಓದಿ: ಚಾಮರಾಜನಗರದಲ್ಲಿ ಲಘು ವಿಮಾನ ಪತನ: ಇಬ್ಬರು ಪೈಲಟ್ಗಳು ಪಾರು