ETV Bharat / bharat

ಹಳಿ ದಾಟಲು ತುರ್ತು ಗುಂಡಿ ಒತ್ತಿದ ಸಿಬ್ಬಂದಿ, ವಂದೇ ಭಾರತ್​ ರೈಲಿನಿಂದ ಕೆಳಗೆ ಬಿದ್ದು ವ್ಯಕ್ತಿ ಸಾವು

author img

By ETV Bharat Karnataka Team

Published : Sep 30, 2023, 5:16 PM IST

ಒಂದು ಹಳಿಯಿಂದ ಇನ್ನೊಂದು ಹಳಿಗೆ ಹೋಗಲು ರೈಲ್ವೆ ಸಿಬ್ಬಂದಿ ತುರ್ತು ಗುಂಡಿ ಒತ್ತಿದ್ದರಿಂದ ವಂದೇ ಭಾರತ್​ ರೈಲಿನಿಂದ ಪ್ರಯಾಣಿಕರೊಬ್ಬರು ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.

ವಂದೇ ಭಾರತ್​ ರೈಲಿನಿಂದ ಕೆಳಗೆ ಬಿದ್ದು ವ್ಯಕ್ತಿ ಸಾವು
ವಂದೇ ಭಾರತ್​ ರೈಲಿನಿಂದ ಕೆಳಗೆ ಬಿದ್ದು ವ್ಯಕ್ತಿ ಸಾವು

ಸೇಲಂ (ತಮಿಳುನಾಡು) : ಅತ್ಯಾಧುನಿಕ ಮಾದರಿಯಲ್ಲಿ ನಿರ್ಮಿಸಲಾಗಿರುವ ವಂದೇ ಭಾರತ್ ರೈಲಿನ ಅವಘಡಗಳ ಸರಣಿ ಮುಂದುವರಿಯುತ್ತಲೇ ಇದೆ. ಅತಿ ವೇಗದ ಎಕ್ಸ್​ಪ್ರೆಸ್​ ರೈಲಿಗೆ ಸಿಲುಕಿ ಈಗಾಗಲೇ ಹಲವು ಎಮ್ಮೆಗಳು, ವ್ಯಕ್ತಿಗಳಿಬ್ಬರು ಸಾವನ್ನಪ್ಪಿದ್ದು ವರದಿಯಾಗಿವೆ. ಈಗ ಮತ್ತೊಂದು ಅಚಾತುರ್ಯದಲ್ಲಿ ವ್ಯಕ್ತಿಯೊಬ್ಬ ನಿಂತ ರೈಲಿನಿಂದ ಕೆಳಗೆ ಬಿದ್ದು ತಲೆ ಒಡೆದು ಪ್ರಾಣ ಕಳೆದುಕೊಂಡಿದ್ದಾನೆ.

ಚೆನ್ನೈ ಮತ್ತು ಕೊಯಮತ್ತೂರು ನಡುವಿನ ವಂದೇ ಭಾರತ್ ರೈಲಿನಲ್ಲಿ ಸೆ.26 ರಂದು ಈ ಅವಘಡ ಸಂಭವಿಸಿದೆ. ಚೆನ್ನೈನ ತಿರುವಳ್ಳುವರ್​ನ ನಿವೃತ್ತ ಸಂಚಾರ ನಿರೀಕ್ಷಕ 70 ವರ್ಷದ ಪೌಲೇಶ್ ಮೃತ ದುರ್ದೈವಿ. ಪೌಲೇಶ್​ ಅವರು ಪತ್ನಿಯ ಜೊತೆಗೆ ರೈಲಿನ ಸಿ3 ಕಂಪಾರ್ಟ್‌ಮೆಂಟ್‌ನಲ್ಲಿ ಈರೋಡ್‌ಗೆ ಪ್ರಯಾಣಿಸುತ್ತಿದ್ದರು.

ಸಂಜೆ 6.05ಕ್ಕೆ ಸೇಲಂನ 4ನೇ ಪ್ಲಾಟ್ ಫಾರಂನಲ್ಲಿ ರೈಲು ಬಂದು ನಿಂತಿದೆ. ಪೌಲೇಶ್ ಅವರು ಸೀಟಿನಿಂದ ಎದ್ದು ರೈಲಿನ ದ್ವಾರದ ಬಳಿ ನಿಂತಿದ್ದಾರೆ. ಇದ್ದಕ್ಕಿದ್ದಂತೆ ಬಾಗಿಲು ತೆರೆದು ಅವರು ಇನ್ನೊಂದು ಬದಿಯ 5 ನೇ ಪ್ಲಾಟ್‌ಫಾರ್ಮ್‌ನ ಹಳಿ ಮೇಲೆ ರೊಪ್ಪನೆ ಬಿದ್ದಿದ್ದಾರೆ. ಸುಮಾರು 6 ಅಡಿ ಎತ್ತರದಿಂದ ಪೌಲೇಶ್​ ಅವರು ಬಿದ್ದಿದ್ದರಿಂದ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬಾಗಿಲು ಗುಂಡಿ ಒತ್ತಿದ್ದೇ ಕಾರಣ: ರೈಲು ಸೇಲಂ ಸ್ಟೇಶನ್​ನಲ್ಲಿ ನಿಂತಿದ್ದಾಗ ಬಾಗಿಲು ತೆರೆದಿರಲಿಲ್ಲ. ಆ ವೇಳೆ, ಪೌಲೇಶ್​ ಅವರು ಬಾಗಿಲು ಬಳಿ ನಿಂತಿದ್ದಾಗ ಯಾರೋ ಗುಂಡಿ (ಬಟನ್​) ಅದುಮಿದ್ದಾರೆ. ತಕ್ಷಣವೇ ಬಾಗಿಲು ತೆರೆದುಕೊಂಡಿದ್ದು, ದುರ್ಘಟನೆಗೆ ಕಾರಣ. ತುರ್ತು ಬಾಗಿಲು ತೆಗೆದಿದ್ದು ಯಾರು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಸೇಲಂ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಪಂಕಜಕುಮಾರ್ ಸಿನ್ಹಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಂತರ ಕೊಯಮತ್ತೂರಿಗೆ ತೆರಳಿ ಅಪಘಾತ ನಡೆದ ವಂದೇ ಭಾರತ್ ರೈಲಿನ ಸಿ3 ಕಂಪಾರ್ಟ್​ಮೆಂಟ್​ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ದೃಶ್ಯದಲ್ಲಿ ಕಾಣುವಂತೆ ವಂದೇ ಭಾರತ್ ರೈಲು ಸೇಲಂ ರೈಲು ನಿಲ್ದಾಣದ 4ನೇ ಪ್ಲಾಟ್‌ಫಾರ್ಮ್‌ಗೆ ಆಗಮಿಸಿದೆ. ಆಗ 5ನೇ ಪ್ಲಾಟ್ ಫಾರಂನಲ್ಲಿದ್ದ ಇಬ್ಬರು ರೈಲ್ವೆ ನೌಕರರು ಹಳಿ ಮೂಲಕ ಕೆಳಗಿಳಿದು ವಂದೇ ಭಾರತ್ ರೈಲಿನ ತುರ್ತು ಬಾಗಿಲಿನ ಗುಂಡಿ ಒತ್ತಿದ್ದಾರೆ. ನಂತರ ರೈಲು ಹತ್ತಿ ಇನ್ನೊಂದು ತುದಿಯ 4 ನೇ ಪ್ಲಾಟ್‌ಫಾರ್ಮ್‌ನಲ್ಲಿ ಇಳಿದಿದ್ದಾರೆ. ಇದೇ ವೇಳೆ, ಪೌಲೇಶ್​ ಅವರು ಎಮರ್ಜೆನ್ಸಿ ಡೋರ್​ನಿಂದ ಕೆಳಗೆ ಬಿದ್ದು ಮೃತಪಟ್ಟಿರುವುದು ಕಂಡು ಬಂದಿದೆ.

ಇಬ್ಬರು ರೈಲ್ವೆ ನೌಕರರ ಅಮಾನತು: ವ್ಯಕ್ತಿಯೊಬ್ಬರ ಸಾವಿಗೆ ಪರೋಕ್ಷವಾಗಿ ಕಾರಣವಾದ ಇಬ್ಬರು ರೈಲ್ವೆ ನೌಕರರನ್ನು ಅಮಾನತು ಮಾಡಲಾಗಿದೆ. ವಿಭಾಗೀಯ ವ್ಯವಸ್ಥಾಪಕ ಪಂಕಜ್​ಕುಮಾರ್​ ಅವರು, ಸಿಸಿಟಿವಿ ಪರಿಶೀಲನೆ ಬಳಿಕ ಸಿಬ್ಬಂದಿಯದ್ದೇ ತಪ್ಪು ಎಂಬುದನ್ನು ಗುರುತಿಸಿದ್ದಾರೆ. ರೈಲಿನ ತುರ್ತು ಬಾಗಿಲು ತೆರೆದ ನೌಕರರನ್ನು ವಿಚಾರಣೆ ನಡೆಸುತ್ತಿದ್ದಾರೆ. ಸೇಲಂ ರೈಲು ನಿಲ್ದಾಣದಲ್ಲಿ ಪಾಯಿಂಟ್ ಮೆನ್ ಆಗಿ ಕೆಲಸ ಮಾಡುತ್ತಿದ್ದ ತಾಮರೈಚೆಲ್ವನ್ ಮತ್ತು ವೈಎಸ್ ಮೀನಾರನ್ನು ಕೆಲಸದಿಂದ ಅಮಾನತು ಮಾಡಿ ಆದೇಶಿಸಿದ್ದಾರೆ. ಬಳಿಕ ಇಬ್ಬರ ವಿರುದ್ಧವೂ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

ಇದನ್ನೂ ಓದಿ: 9 ವಂದೇ ಭಾರತ್ ಎಕ್ಸ್​ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ; ತ್ವರಿತ ಪ್ರಯಾಣವೇ ನಮ್ಮ ಗುರಿ ಎಂದ ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.