ETV Bharat / bharat

ಪೊಲೀಸ್ ಠಾಣೆಯ ಸ್ಟೋರ್ ರೂಂನಲ್ಲಿಟ್ಟಿದ್ದ 60 ಮದ್ಯದ ಬಾಟಲಿ ಇಲಿಗಳ ಪಾಲು: ಪೊಲೀಸರ ಹೇಳಿಕೆ!

author img

By ETV Bharat Karnataka Team

Published : Nov 6, 2023, 3:05 PM IST

Rats Wine Party: ಪೊಲೀಸ್ ಠಾಣೆಗೆ ನುಗ್ಗಿದ ಇಲಿಗಳು ಸ್ಟೋರ್ ರೂಂನಲ್ಲಿಟ್ಟಿದ್ದ ಮದ್ಯದ 60 ಬಾಟಲಿಗಳನ್ನು ಕುಡಿದು ಖಾಲಿ ಮಾಡಿವೆ.

Chhindwara rat drinking party on police thana
Chhindwara rat drinking party on police thana

ಛಿಂದ್ವಾರಾ (ಮಧ್ಯಪ್ರದೇಶ): ಸ್ಟೋರ್ ರೂಂನಲ್ಲಿ ಸಂಗ್ರಹಿಸಿಡಲಾಗಿದ್ದ ಅಪಾರ ಪ್ರಮಾಣದ ಮದ್ಯವನ್ನು ಇಲಿಗಳು ಕುಡಿದು ಖಾಲಿ ಮಾಡಿವೆಯಂತೆ. ಹೀಗೊಂದು ವಿಚಿತ್ರ ಪ್ರಕಣ ಛಿಂದ್ವಾರಾ ನಗರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ನಡೆದಿದೆ ಅನ್ನೋದು ಪೊಲೀಸರ ಹೇಳಿಕೆ.

ದಂಡು ಕಟ್ಟಿಕೊಂಡು ದಾಳಿ ಮಾಡಿರುವ ಮೂಷಿಕಗಳು ಸ್ಟೋರ್ ರೂಂನಲ್ಲಿಟ್ಟಿದ್ದ 60 ಬಾಟಲಿಗಳಲ್ಲಿನ ಮದ್ಯ ಕುಡಿದು ಖಾಲಿ ಮಾಡಿವೆ. ಇದಕ್ಕೆ ಸಂಬಂಧಿಸಿದಂತೆ ಒಂದು ಇಲಿಯನ್ನು ಬೋನಿಗೆ ಕೆಡವಿದ್ದಾರೆ. ಉಳಿದ ಇಲಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ನೆಲದ ಮೇಲೆ ಬಿದ್ದ ಮದ್ಯವನ್ನು ಸಹ ನಾಲಿಗೆಯಿಂದ ನೆಕ್ಕಿ ಸಾಕ್ಷಿ ನಾಶಪಡಿಸಲು ಪ್ರಯತ್ನಿಸಿವೆ ಎನ್ನುತ್ತಾರೆ ಪೊಲೀಸ್​ ಸಿಬ್ಬಂದಿ.

ಇಲಿಗಳಿಗಾಗಿ ಹುಡುಕಾಟ: ಆರೋಪಿಗಳ ಹಾಗೂ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ವಶಪಡಿಸಿಕೊಂಡ ಅಬಕಾರಿ ಪೊಲೀಸರು, ಠಾಣೆಯ ಕೊಠಡಿಯೊಂದರಲ್ಲಿ ಸಂಗ್ರಹಿಸಿ ಇಡುತ್ತಿದ್ದರು. ಎಂದಿನಂತೆ ಸ್ಟೋರ್ ರೂಂನಲ್ಲಿ ಮದ್ಯದ ಜೊತೆ ಇತರೆ ಪ್ರಮುಖ ದಾಖಲೆಗಳನ್ನು ಸಹ ಇರಿಸಿದ್ದಾರೆ. ಆದರೆ, ಅದ್ಹೇಗೋ ಮದ್ಯದ ಬಾಟಲಿಗಳ ರುಚಿ ನೋಡಿದ ಇಲಿಗಳ ದಂಡು 60 ಬಾಟಲಿಗಳನ್ನು ಕುಡಿದು ಖಾಲಿ ಮಾಡಿವೆ. ಈ ಘಟನೆ ಗೊತ್ತಾದ ಬಳಿಕ ಮತ್ತು ಇಲಿಗಳ ಕಾಟ ತಡೆಯಲಾರದ ಪೊಲೀಸ್​ ಸಿಬ್ಬಂದಿ ಅವುಗಳನ್ನು ಹಿಡಿಯಲು ಬೋನುಗಳನ್ನು ಅಳವಡಿಸಿದ್ದಾರೆ. ಸದ್ಯ ಒಂದು ಇಲಿ ಬೋನಿಗೆ ಬಿದ್ದಿದ್ದು ಉಳಿದು ಇಲಿಗಳಿಗಾಗಿ ಹುಡುಕಾಟದಲ್ಲಿದ್ದಾರೆ.

ದಾಖಲೆಗಳು ಸಹ ಚಿಂದಿ: ಮದ್ಯದ ಬಾಟಲಿಗಳು ಮಾತ್ರವಲ್ಲದೆ ಪ್ರಮುಖ ಲೆಕ್ಕಪತ್ರ ಹಾಗೂ ದಾಖಲೆಗಳನ್ನು ಸಹ ತಿಂದು ಹಾನಿಗೊಳಿಸಿವೆ. ಈ ಘಟನೆಯಿಂದ ನ್ಯಾಯಾಲಯ ಮತ್ತು ಇಲಾಖೆಗೆ ಸಲ್ಲಿಸಬೇಕಾಗಿದ್ದ ದಾಖಲೆ ಮತ್ತು ಲೆಕ್ಕಪತ್ರಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿದೆ. ಇಲಿಗಳು ದಾಳಿ ಮಾಡಿ ಉಳಿಸಿದ ಬಾಟಲಿಗಳನ್ನು ಮಾತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇಲಿಗಳ ಕಾಟದ ಬಗ್ಗೆ ಎಸ್ಪಿ ಹೇಳಿಕೆ: ಕೊತ್ವಾಲಿ ಪೊಲೀಸ್ ಠಾಣೆಯು ಹಳೆಯ ಕಟ್ಟಡವಾಗಿದ್ದರಿಂದ ಇಲ್ಲಿ ಇಲಿಗಳ ಕಾಟ ಹೆಚ್ಚಾಗಿದೆ. ಗುದ್ದು (ಬಿಲ) ತೋಡಿ ಹೊರಗಿನಿಂದ ಬರುತ್ತವೆ. ಹೊರಗೆ ಮಾರುಕಟ್ಟೆ ಇದೆ. ಅಪರಾಧಿಗಳಿಂದ ವಶಪಡಿಸಿಕೊಂಡ ಸರಕುಗಳನ್ನು ಗೋದಾಮಿನಲ್ಲಿ ಇರಿಸಲಾಗುತ್ತದೆ. ಅದರಂತೆ ಮದ್ಯದ ಬಾಟಲಿಗಳನ್ನು ಇಲ್ಲಿ ಇಡಲಾಗಿತ್ತು. ಸದ್ಯ ಮದ್ಯ ಸೇರಿ ಇಲಿಗಳು ಅನೇಕ ಮಹತ್ವದ ವಸ್ತುಗಳನ್ನು ಹಾನಿಗೊಳಿಸುತ್ತವೆ. ಇವುಗಳ ಕಾಟ ತಪ್ಪಿಸಲು ಬೋನುಗಳನ್ನು ಅಳವಡಿಲಾಗಿದೆ. ಸದ್ಯ ಎಷ್ಟು ಪ್ರಮಾಣದ ಹಾನಿಯಾಗಿದೆ ಎಂಬ ಬಗ್ಗೆ ಪೊಲೀಸ್ ಠಾಣೆ ಮಟ್ಟದಲ್ಲಿ ಮಾಹಿತಿ ತೆಗೆದುಕೊಳ್ಳಲಾಗುವುದು ಎಂದು ಇಲಿಗಳ ಕಾಟದ ಕುರಿತು ಎಸ್ಪಿ ವಿನಾಯಕ ವರ್ಮಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ಇಲಿ ಭೀತಿ: ಕೊತ್ವಾಲಿ ಪೊಲೀಸ್ ಠಾಣೆ ಮಾತ್ರವಲ್ಲದೆ ಇಲಿಗಳ ಭೀತಿ ಹಲವೆಡೆಯೂ ಇದೆ. ಜಿಲ್ಲಾಸ್ಪತ್ರೆ, ಶಿಕ್ಷಣ ಇಲಾಖೆ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಹೊರತುಪಡಿಸಿ ಬಹುತೇಕ ಎಲ್ಲ ಇಲಾಖೆಗಳು ಇಲಿಗಳ ಕಾಟದಿಂದ ಬೇಸತ್ತಿವೆ. ಕೆಲವು ಇಲಾಖೆಗಳಲ್ಲಿ ಪ್ರಮುಖ ಫೈಲ್‌ಗಳನ್ನು ತಿಂದು ಹಾನಿಗೊಳಿಸಿವೆ. ಛಿಂದ್ವಾರ್​ ಜಿಲ್ಲಾಸ್ಪತ್ರೆ ಇಲಿ ಹಿಡಿಯಲು ಪ್ರತಿ ವರ್ಷ ಲಕ್ಷಗಟ್ಟಲೆ ಹಣ ಖರ್ಚು ಮಾಡುತ್ತಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ.

ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆ ಶವಗಾರದಲ್ಲಿ ಇರಿಸಿದ್ದ ಮೃತ ದೇಹವನ್ನು ಕಚ್ಚಿದ ಇಲಿ: ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.