ETV Bharat / bharat

ಹೈದರಾಬಾದಿನ ಕೊನೆಯ ನಿಜಾಮ್ ಮುಕರಮ್ ಜಾಹ್ ಟರ್ಕಿಯಲ್ಲಿ ನಿಧನ: ಬುಧವಾರ ಭಾರತದಲ್ಲಿ ಅಂತ್ಯಕ್ರಿಯೆ

author img

By

Published : Jan 17, 2023, 12:58 PM IST

ನವಾಬ್ ಮೀರ್ ಬರ್ಕತ್ ಅಲಿ ಖಾನ್ ವಲಶನ್ ಮುಕರಮ್ ಜಾಹ್ ಬಹದ್ದೂರ್ ಅವರ ಅಂತ್ಯಕ್ರಿಯೆ ಹೈದರಾಬಾದ್‌ನಲ್ಲಿ ನಡೆಯಲಿದೆ.

Hyderabads Nizamate comes to an end the mystery shrouding a chequered saga continues
Hyderabads Nizamate comes to an end the mystery shrouding a chequered saga continues

ಹೈದರಾಬಾದ್: ಹೈದರಾಬಾದ್‌ನ ಎಂಟನೇ ನಿಜಾಮ್ ನವಾಬ್ ಮೀರ್ ಬರ್ಕತ್ ಅಲಿ ಖಾನ್ ವಲಶನ್ ಮುಕರಮ್ ಜಾಹ್ ಬಹದ್ದೂರ್ ಅವರು ಶನಿವಾರ ಟರ್ಕಿಯಲ್ಲಿ ನಿಧನರಾಗಿದ್ದಾರೆ. ಭಾರತದಿಂದ ದೂರವಿದ್ದು, ಶ್ರೀಮಂತ ಜೀವನ ಬದುಕಿದ ಹೈದರಾಬಾದಿನ ಕೊನೆಯ ನಿಜಾಮ್​ ಅವರ ಅಂತ್ಯಕ್ರಿಯೆ ಬುಧವಾರ ಭಾರತದಲ್ಲಿ ನಡೆಯಲಿದೆ. ಇವರ ಸಾವಿನೊಂದಿಗೆ ಹಲವಾರು ಪ್ರಶ್ನೆಗಳು ಕೇವಲ ಪ್ರಶ್ನೆಗಳಾಗಿಯೇ ಉಳಿದಿವೆ. ನಿಜಾಮ್ ಅವರ ಸದ್ಯದ ಜೀವನದ ಬಗ್ಗೆ ನೋಡುವುದಾದರೆ, 'ಭವ್ಯವಾದ ಆನುವಂಶಿಕ ರಾಜಪ್ರಭುತ್ವದ ಅವನತಿಯ ಕಥೆ' ಎಂದು ಕೆಲವರು ವಿವರಿಸುತ್ತಾರೆ.

ರಾಜಕುಮಾರ ಮುಕರಮ್ ಜಾಹ್ ಅವರನ್ನು 1954 ರಲ್ಲಿ ಉತ್ತರಾಧಿಕಾರಿಯಾಗಿ ಅವರ ತಾತ ಮತ್ತು ಹಿಂದಿನ ಹೈದರಾಬಾದ್ ರಾಜಪ್ರಭುತ್ವದ ಏಳನೇ ನಿಜಾಮ್ ಮೀರ್ ಒಸ್ಮಾನ್ ಅಲಿ ಖಾನ್ ಅವರು ಘೋಷಿಸಿದ್ದರು. ಅಂದಿನಿಂದ ಅವರನ್ನು ಹೈದರಾಬಾದ್‌ನ ಎಂಟನೇ ಮತ್ತು ಕೊನೆಯ ನಿಜಾಮ್ ಎಂದು ಗುರುತಿಸಲಾಗಿದೆ. ವರ್ಷಗಳ ಕಾಲ ನಾನು ಮುಸ್ಲಿಂ ರಾಜ್ಯದ ವಿಲಕ್ಷಣ ಆಡಳಿತಗಾರನೊಬ್ಬನ ಕಥೆಗಳನ್ನು ಓದಿದ್ದೇನೆ. ಅವನು ತನ್ನಲ್ಲಿನ ವಜ್ರಗಳನ್ನು ಕಿಲೋ ಲೆಕ್ಕದಲ್ಲಿ ತೂಗುತ್ತಿದ್ದ, ಮುತ್ತುಗಳನ್ನು ಎಕರೆ ಲೆಕ್ಕದಲ್ಲಿ ಅಳೆಯುತ್ತಿದ್ದ, ತನ್ನಲ್ಲಿನ ಚಿನ್ನದ ಗಟ್ಟಿಗಳನ್ನು ಟನ್ ಲೆಕ್ಕದಲ್ಲಿ ಅಳೆಯುತ್ತಿದ್ದ. ಆದರೆ ಸ್ನಾನ ಮಾಡಿದ ನಂತರ ಬಟ್ಟೆಗಳ ಲಾಂಡ್ರಿ ಬಿಲ್ ಉಳಿಸಲು ಚೌಕಾಸಿ ಮಾಡುತ್ತಿದ್ದ ಎಂದು ಎಂದು ಜಾನ್ ಝುಬ್ರಿಜಿಕಿ ಮುಕರಮ್ ಜಾಹ್ ಬಗ್ಗೆ ಬರೆದಿದ್ದಾರೆ. ಜಾನ್ ಝುಬ್ರಿಜಿಕಿ ಇವರು ದಿ ಲಾಸ್ಟ್ ನಿಜಾಮ್: ದಿ ರೈಸ್ ಅಂಡ್ ಫಾಲ್ ಆಫ್ ಇಂಡಿಯಾಸ್ ಗ್ರೇಟೆಸ್ಟ್ ಪ್ರಿನ್ಸಲಿ ಸ್ಟೇಟ್ ಎಂಬ ಕೃತಿಯ ಲೇಖಕರಾಗಿದ್ದಾರೆ.

ಮುಕರಮ್ ಜಾಹ್ 1933 ರಲ್ಲಿ ಫ್ರಾನ್ಸ್‌ನಲ್ಲಿ ಜನಿಸಿದರು. ಅವರ ತಾಯಿ ರಾಜಕುಮಾರಿ ದುರ್ರು ಶೆವಾರ್ ಟರ್ಕಿಯ ಕೊನೆಯ ಸುಲ್ತಾನ (ಒಟ್ಟೋಮನ್ ಸಾಮ್ರಾಜ್ಯ) ಸುಲ್ತಾನ್ ಅಬ್ದುಲ್ ಮೆಜಿದ್ II ಇವರ ಮಗಳು. 1971 ರಲ್ಲಿ ಸರ್ಕಾರವು ಬಿರುದುಗಳು ಮತ್ತು ಖಾಸಗಿ ಖರ್ಚು ವೆಚ್ಚಗಳನ್ನು ರದ್ದುಪಡಿಸುವವರೆಗೂ ಪ್ರಿನ್ಸ್ ಮುಕರಮ್ ಜಾಹ್ ಅವರನ್ನು ಅಧಿಕೃತವಾಗಿ ಹೈದರಾಬಾದ್ ರಾಜಕುಮಾರ ಎಂದು ಕರೆಯಲಾಗುತ್ತಿತ್ತು ಎಂದು ಹಿರಿಯ ಪತ್ರಕರ್ತ ಮತ್ತು ಹೈದರಾಬಾದ್‌ನ ಸಂಸ್ಕೃತಿ ಮತ್ತು ಅದರ ಪರಂಪರೆಯ ಬಗ್ಗೆ ಅಧ್ಯಯನ ಮಾಡಿರುವ ಮೀರ್ ಅಯೂಬ್ ಅಲಿ ಖಾನ್ ಹೇಳುತ್ತಾರೆ.

ಏಳನೇ ನಿಜಾಮನು ತನ್ನ ಮೊದಲ ಮಗ ರಾಜಕುಮಾರ ಆಜಮ್ ಜಾಹ್ ಬಹದ್ದೂರ್ ಬದಲಿಗೆ ಮೊಮ್ಮಗನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡಿದನು. ಹೀಗಾಗಿ 1967 ರಲ್ಲಿ ಹೈದರಾಬಾದ್‌ನ ಕೊನೆಯ ಮಾಜಿ ಆಡಳಿತಗಾರ ನಿಧನರಾದ ನಂತರ ಮುಕರಮ್ ಜಾ ಎಂಟನೇ ನಿಜಾಮ್ ಆಗಿ ಆಡಳಿತ ವಹಿಸಿಕೊಂಡರು. ಆರಂಭದಲ್ಲಿ ಪ್ರಿನ್ಸ್​ ಮುಕರಮ್ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದರು. ನಂತರ ಅವರ ಜೀವನದ ಬಹುಪಾಲು ಅವಧಿಯನ್ನು ಅವರು ಟರ್ಕಿಯಲ್ಲಿ ಕಳೆದರು.

ಆಸ್ಟ್ರೇಲಿಯದ ಮರುಭೂಮಿಯಲ್ಲಿನ ದರ್ಬಾರ್ ಕಥೆಗಳನ್ನು ನಾನು ಕೇಳಿದ್ದೇನೆ. ಅಲ್ಲಿ ಭಾರತೀಯ ರಾಜಕುಮಾರನೊಬ್ಬ ಡೀಸೆಲ್​​ನಿಂದ ಓಡುವ ಬುಲ್ಡೋಜರ್‌ಗಳನ್ನು ಓಡಿಸಲು ಇಷ್ಟಪಡುತ್ತಿದ್ದ. ನಾಜೂಕಾಗಿ ಕ್ಯಾಪರೀಸನ್ ಆನೆಯ ಹೌಡಾದಲ್ಲಿ ಸವಾರಿ ಮಾಡುತ್ತಿದ್ದ. ಆದರೆ ಆತ ಟರ್ಕಿಯಲ್ಲಿ ಏಕಾಂತವಾಸಿಯಾಗಿ ವಾಸಿಸುತ್ತಿದ್ದ ವದಂತಿಗಳನ್ನು ನಾನು ಕೇಳಿದ್ದೇನೆ. ಆತ ಎರಡು ಸೂಟ್‌ಕೇಸ್‌ಗಳು ಮತ್ತು ಛಿದ್ರಗೊಂಡ ಕನಸುಗಳ ಭಾರವನ್ನು ಹೊತ್ತುಕೊಂಡು ಟರ್ಕಿಗೆ ಬಂದಿದ್ದ ಎಂದು ಲೇಖಕ ಜಾನ್ ಝುಬ್ರಿಜಿಕಿ ಬರೆದಿದ್ದಾರೆ. ಟರ್ಕಿಯ ರಾಜಕುಮಾರನ ಎರಡು ಬೆಡ್​ರೂಮ್ ಮನೆಯಲ್ಲಿ ಅವರನ್ನು ಭೇಟಿ ಮಾಡಿದ ಬಗ್ಗೆ ಜಾನ್ ಝುಬ್ರಿಜಿಕಿ ಬರೆದಿದ್ದಾರೆ.

ಜಾಹ್ ಅವರ ಪಾರ್ಥಿವ ಶರೀರವನ್ನು ಜನರು ಅಂತಿಮ ನಮನ ಸಲ್ಲಿಸಲು ಜನವರಿ 18 ರಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ಖಿಲ್ವತ್ ಅರಮನೆಯಲ್ಲಿ ಇರಿಸಲಾಗುವುದು. ಇಲ್ಲಿನ ಅಸಫ್ ಜಾಹಿ ಕುಟುಂಬದ ಸಮಾಧಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಪ್ರಿನ್ಸ್ ಮುಕರಮ್ ಜಾ ಅವರ ಕಚೇರಿ ಪ್ರಕಟಣೆ ತಿಳಿಸಿದೆ. ಭಾರತದಲ್ಲಿ ಅಂತ್ಯಕ್ರಿಯೆ ಮಾಡುವ ಅವರ ಬಯಕೆಯಂತೆ, ಅವರ ಮಕ್ಕಳು ಜನವರಿ 17 ರಂದು ದಿವಂಗತ ನಿಜಾಮರ ಪಾರ್ಥಿವ ಶರೀರವನ್ನು ಹೈದರಾಬಾದ್‌ಗೆ ತೆಗೆದುಕೊಂಡು ಬರಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಬುಧವಾರದಂದು ಹೈದರಾಬಾದಿನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ಯುವರಾಜ ಮುಕರಮ್ ಜಾ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ನಿಜಾಮರ ಉತ್ತರಾಧಿಕಾರಿಯಾಗಿ ಬಡವರಿಗೆ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸಾಮಾಜಿಕ ಸೇವೆಯನ್ನು ಸ್ಮರಿಸಿದ್ದಾರೆ. ಅವರ ಅಂತಿಮ ಸಂಸ್ಕಾರವನ್ನು ಅತ್ಯುನ್ನತ ಸರ್ಕಾರಿ ಗೌರವಗಳೊಂದಿಗೆ ನಡೆಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.

ಇದನ್ನೂ ಓದಿ: ನಿಜಾಮರ 308 ಕೋಟಿ ರೂ. ಯಾರಿಗೆ ಸೇರಿದ್ದು... ಭಾರತ ಅಥವಾ ಪಾಕಿಸ್ತಾನಕ್ಕಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.