ETV Bharat / bharat

ಕರ್ನಾಟಕಕ್ಕೆ ₹18 ಸಾವಿರ ಕೋಟಿ ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಖರ್ಗೆ ಒತ್ತಾಯ

author img

By PTI

Published : Dec 6, 2023, 7:53 PM IST

Drought relief fund: ಎನ್​ಡಿಆರ್​ಎಫ್ ನಿಧಿಯಿಂದ ಕರ್ನಾಟಕಕ್ಕೆ 18 ಸಾವಿರ ಕೋಟಿ ಬರ ಪರಿಹಾರ ನೀಡಬೇಕೆಂದು ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Kharge asks Centre to release Rs 18,171 crore for Karnataka drought relief
Kharge asks Centre to release Rs 18,171 crore for Karnataka drought relief

ನವದೆಹಲಿ: ತೀವ್ರ ಬರದಿಂದ ತತ್ತರಿಸಿರುವ ಕರ್ನಾಟಕಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ನಿಧಿಯಿಂದ (ಎನ್​ಡಿಆರ್​ಎಫ್​) 18,171 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ಕೇಂದ್ರ ಸರಕಾರಕ್ಕೆ ಆಗ್ರಹಿಸಿದ್ದಾರೆ. ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ, ಕರ್ನಾಟಕವು 123 ವರ್ಷಗಳಲ್ಲಿಯೇ ಅತ್ಯಂತ ಭೀಕರ ಬರಗಾಲ ಎದುರಿಸುತ್ತಿದೆ ಮತ್ತು ಬೆಳೆಗಳಿಗೆ 35,162 ಕೋಟಿ ರೂ.ಗಿಂತ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಬೆಳೆಹಾನಿ ಪ್ರಮಾಣ ಶೇಕಡಾ 40-90 ರಷ್ಟಿದೆ ಎಂದರು.

ಬರಗಾಲಪೀಡಿತ ಜನರಿಗೆ ಸಹಾಯ ಮಾಡಲು ರಾಜ್ಯ ಸರ್ಕಾರ ಎನ್​ಡಿಆರ್​ಎಫ್​ನಿಂದ 18,171 ಕೋಟಿ ರೂ.ಗಳನ್ನು ಕೋರಿದೆ. ಇನ್ಪುಟ್ ಸಬ್ಸಿಡಿ ಪಾವತಿಗೆ, ಸೂಕ್ತ ಪರಿಹಾರ ನೀಡಲು ಮತ್ತು ಕಡಿಮೆ ಮಳೆಯಿಂದಾಗಿ ಕರ್ನಾಟಕದಲ್ಲಿ ತಕ್ಷಣದ ಪರಿಹಾರ ಕಾರ್ಯಾಚರಣೆಗಳಿಗಾಗಿ ಹಣಕಾಸು ಸಹಾಯ ಬಹಳ ಅಗತ್ಯವಾಗಿದೆ. ವಿವಿಧ ಜಲಾಶಯಗಳಲ್ಲಿನ ನೀರಿನ ಮಟ್ಟ ತೀರಾ ಕುಸಿದಿದೆ ಮತ್ತು ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಬಹುದು ಎಂದು ಅವರು ಒತ್ತಿ ಹೇಳಿದರು.

ಚೆನ್ನೈ ಸೇರಿದಂತೆ ತಮಿಳುನಾಡಿನ ಕೆಲವು ಭಾಗಗಳಲ್ಲಿನ ಪ್ರವಾಹ ಪರಿಸ್ಥಿತಿಗಳ ಬಗ್ಗೆಯೂ ಖರ್ಗೆ ಮಾತನಾಡಿದರು. ಬಿಜೆಪಿ ಚುನಾವಣೆಯಲ್ಲಿ ಗೆದ್ದಿರುವುದರಿಂದ ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಅವರು ಆರೋಪಿಸಿದರು.

ಕಲಾಪದಲ್ಲಿ ಮಾತನಾಡಿದ ಕಾಂಗ್ರೆಸ್​ನ ಅಮೀ ಯಾಜ್ನಿಕ್, ಮಹಿಳಾ ಸುರಕ್ಷತೆಯ ವಿಷಯದಲ್ಲಿ ಎಲ್ಲ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಹಿಂಸಾಚಾರವು ರಾಷ್ಟ್ರ ಮತ್ತು ಅದರ ಆರ್ಥಿಕತೆಯ ಬೆಳವಣಿಗೆಯ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

ರಾಜ್ಯಸಭಾ ಬಿಜೆಪಿ ಸದಸ್ಯ ಅಶೋಕ್ ಬಾಜಪೇಯಿ ಮಾತನಾಡಿ, ಕರ್ತವ್ಯದಲ್ಲಿರುವ ವೈದ್ಯರ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸದನದ ಮುಂದಿಟ್ಟರು. ಆರೋಗ್ಯವು ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದ್ದರೂ, ಕೇಂದ್ರವು ಮಾದರಿ ಕಾನೂನು ಜಾರಿಗೆ ತರಬಹುದು ಮತ್ತು ಪ್ರಕರಣಗಳನ್ನು ಎದುರಿಸುತ್ತಿರುವ ವೈದ್ಯರಿಗೆ ಸಹಾಯ ಮಾಡಲು ವೈದ್ಯಕೀಯ ನ್ಯಾಯಮಂಡಳಿಗಳನ್ನು ಸ್ಥಾಪಿಸಬಹುದು ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ ಮಾತನಾಡಿ, ದೇಶದ ಜೈಲುಗಳಲ್ಲಿನ ವಿಚಾರಣಾಧೀನ ಕೈದಿಗಳ ದುಃಸ್ಥಿತಿಯ ಬಗ್ಗೆ ಪ್ರಸ್ತಾಪಿಸಿದರು. ಈ ವಿಷಯವನ್ನು ನಿಭಾಯಿಸಲು ನ್ಯಾಯಾಂಗ ಸುಧಾರಣೆಗಾಗಿ ಅವರು ಒತ್ತಾಯಿಸಿದರು. ಕಾಂಗ್ರೆಸ್​ನ ಮತ್ತೋರ್ವ ಸದಸ್ಯ ಇಮ್ರಾನ್ ಪ್ರತಾಪ್ ಗರ್ಹಿ ಮಾತನಾಡಿ, ರೈಲುಗಳಲ್ಲಿನ ಸೌಲಭ್ಯಗಳನ್ನು ಸುಧಾರಿಸಲು ಸರ್ಕಾರ ಗಮನ ಹರಿಸಬೇಕು ಎಂದರು.

ಇದನ್ನೂ ಓದಿ: I.N.D.I.A ಮೈತ್ರಿಕೂಟದ ಸೀಟು ಹಂಚಿಕೆ ಶೀಘ್ರ ಅಂತಿಮವಾಗಲಿ: ಸಿಎಂ ನಿತೀಶ್ ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.