ETV Bharat / bharat

ಸಿಎಂ ಜತೆ ಮಾತುಕತೆ.. ತಾತ್ಕಾಲಿಕವಾಗಿ ಅದಾನಿ ಬಂದರು ವಿರೋಧಿ ಪ್ರತಿಭಟನೆ ಸ್ಥಗಿತ

author img

By

Published : Dec 7, 2022, 12:47 PM IST

ಕರಾವಳಿ ಮಣ್ಣಿನ ಸವಕಳಿ ಅಧ್ಯಯನ ಸೇರಿದಂತೆ ಮೀನುಗಾರರ ಕೆಲವು ಬೇಡಿಕೆಗಳನ್ನು ಸರ್ಕಾರ ಅಂಗೀಕರಿಸಿದ ನಂತರ ಕೇರಳದ ವಿಝಿಂಜಂನಲ್ಲಿ ಉದ್ದೇಶಿತ ಅದಾನಿ ಬಂದರಿನ ವಿರುದ್ಧದ ಪ್ರತಿಭಟನೆ ಮಂಗಳವಾರ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ.

Vizhinjam port protests
ಅದಾನಿ ಬಂದರು ವಿರೋಧಿ ಪ್ರತಿಭಟನೆ ತಾತ್ಕಾಲಿಕವಾಗಿ ಸ್ಥಗಿತ

ತಿರುವನಂತಪುರಂ(ಕೇರಳ): ವಿಝಿಂಜಂನಲ್ಲಿ ಅದಾನಿ ಬಂದರು ನಿರ್ಮಾಣ ವಿರೋಧಿಸಿ ಲ್ಯಾಟಿನ್ ಡಯಾಸಿಸ್ ನೇತೃತ್ವದಲ್ಲಿ ಮೀನುಗಾರರು ನಡೆಸುತ್ತಿದ್ದ ಪ್ರತಿಭಟನೆ ತಾತ್ಕಾಲಿಕವಾಗಿ ಅಂತ್ಯವಾಗಿದೆ. ಪ್ರತಿಭಟನಾ ನಿರತ ಮುಖಂಡರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿ ಸರ್ಕಾರ ನೀಡಿದ ಭರವಸೆ ಮೇರೆಗೆ ಮುಷ್ಕರ ಹಿಂಪಡೆಯಲು ನಿರ್ಧರಿಸಿದರು ಎಂದು ತಿಳಿದುಬಂದಿದೆ.

ಪ್ರತಿಭಟನೆಯ ನೇತೃತ್ವ ವಹಿಸಿರುವ ವಿಕಾರ್ ಜನರಲ್ ಯುಜೀನ್ ಪಿರೇರಾ ಅವರು ಪ್ರತಿಭಟನೆ ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪಿರೇರಾ, ಸರ್ಕಾರದ ಭರವಸೆಗಳು ತೃಪ್ತಿಕರವಾಗಿರುವ ಕಾರಣದಿಂದ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಅಗತ್ಯ ಕಂಡುಬಂದಲ್ಲಿ ಮತ್ತೆ ಪ್ರತಿಭಟನೆ ಆರಂಭಿಸಲಾಗುವುದು. ಸರ್ಕಾರ ಕೆಲವು ಬೇಡಿಕೆಗಳಿಗೆ ಒಪ್ಪಿಗೆ ನೀಡಿದೆ. ಬಂದರು ಅಭಿವೃದ್ಧಿಯ ಭಾಗವಾಗಿ ಸಂಭವಿಸಬಹುದಾದ ಮಣ್ಣಿನ ಸವೆತದ ಬಗ್ಗೆ ತಜ್ಞರ ಸಮಿತಿಯು ಪ್ರತಿಭಟನಾ ಸಮಿತಿಯೊಂದಿಗೆ ಸಮಾಲೋಚನೆ ನಡೆಸುತ್ತದೆ. ಬಂದರು ಅಭಿವೃದ್ಧಿಯ ಭಾಗವಾಗಿ ಸ್ಥಳಾಂತರಿಸಬೇಕಾದ ಮೀನುಗಾರರ ಸಂಪೂರ್ಣ ವಸತಿ ಶುಲ್ಕವನ್ನು ಪಾವತಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಪುನರ್ವಸತಿ ಪೂರ್ಣಗೊಳ್ಳುವವರೆಗೆ ಬಾಡಿಗೆಯನ್ನು ಸಹ ಭರಿಸಲಿದೆ ಎಂದು ಅವರು ಹೇಳಿದರು.

ಪ್ರಸ್ತಾವಿತ ವಿಝಿಂಜಂ ಬಂದರಿನ ವಿರುದ್ಧ 100ಕ್ಕೂ ಹೆಚ್ಚು ದಿನಗಳಿಂದ ಪ್ರತಿಭಟನೆ ನಡೆಯುತ್ತಿವೆ. ಕಳೆದ ನವೆಂಬರ್‌ನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಲಾಗಿತ್ತು. ಘಟನೆಯಲ್ಲಿ 35 ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ಬಳಿಕ 3,000 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ: ಬಂದರು ಯೋಜನೆ ವಿರೋಧಿಸಿ ಪ್ರತಿಭಟನೆ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, 3000 ಮಂದಿ ವಿರುದ್ಧ ಪ್ರಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.