ETV Bharat / bharat

ಸಂತ್ರಸ್ತೆಯ ಕೈ ಹಿಡಿದ ಆರೋಪಿ.. ಪೋಕ್ಸೋ ಕ್ರಿಮಿನಲ್​ ಕೇಸ್​ ರದ್ದು ಮಾಡಿದ ಹೈಕೋರ್ಟ್​

author img

By

Published : Aug 24, 2022, 12:22 PM IST

Updated : Aug 24, 2022, 12:34 PM IST

ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಯುವಕ ಸಂತ್ರಸ್ತೆಯನ್ನು ವಿವಾಹವಾಗಿದ್ದು, ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾದ ಕ್ರಿಮಿನಲ್​ ಕೇಸ್​ ಅನ್ನು ರದ್ದು ಮಾಡಿ ಹೈಕೋರ್ಟ್​ ಆದೇಶ ಹೊರಡಿಸಿದೆ.

high-court-quashes-pocso-rape-charges
ಪೋಕ್ಸೋ ಕ್ರಿಮಿನಲ್​ ಕೇಸ್​ ರದ್ದು ಮಾಡಿದ ಹೈಕೋರ್ಟ್​

ಬೆಂಗಳೂರು: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಅತ್ಯಾಚಾರ ಆರೋಪ ಎದುರಿಸುತ್ತಿದ್ದ 23 ವರ್ಷದ ಯುವಕನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಹೈಕೋರ್ಟ್ ರದ್ದು ಮಾಡಿದೆ. 17 ವರ್ಷದ ಸಂತ್ರಸ್ತೆಯಾಗಿದ್ದ ಆಕೆ 18ನೇ ವಯಸ್ಸಿಗೆ ಬಂದಾಗ ಇಬ್ಬರೂ ಮದುವೆಯಾಗಿದ್ದು, ಈಗ ದಂಪತಿಗೆ ಒಂದು ಮಗುವಿದೆ. ಹೀಗಾಗಿ ಸೆಷನ್ಸ್ ಕೋರ್ಟ್‌ನಲ್ಲಿರುವ ಪ್ರಕರಣವನ್ನು ನ್ಯಾಯಾಲಯ ಬರ್ಖಾಸ್ತುಗೊಳಿಸಿದೆ.

ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧದ ಆರೋಪವನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಲು ಸಾಧ್ಯವಿಲ್ಲ. ಆರೋಪಿತನ ಕೈ ಹಿಡಿದಿರುವ ಸಂತ್ರಸ್ತೆ ವಿಚಾರಣೆಯಲ್ಲಿ ಪ್ರತಿಕೂಲ ಹೇಳಿಕೆಗಳನ್ನು ನೀಡಿದಲ್ಲಿ ಆರೋಪಿ ಎಲ್ಲಾ ಅಪರಾಧಗಳಿಂದ ಖುಲಾಸೆಗೊಳ್ಳುವ ಸಾಧ್ಯತೆ ಇದೆ. ಇದು ಯಾವುದೇ ಅಂತಿಮ ಫಲಿತಾಂಶಕ್ಕೆ ಒಳಪಡುವುದಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಆರೋಪಿಯ ವಿರುದ್ಧದ ಪ್ರಾಸಿಕ್ಯೂಷನ್‌ನ ಹೇಳಿಕೆಗಳನ್ನು ನಿರಾಕರಿಸಿದ ಕೋರ್ಟ್​, ಕಕ್ಷಿದಾರರ ನಡುವಿನ ಸಹಮತವನ್ನು ಒಪ್ಪಿ ಪ್ರಕರಣವನ್ನು ಇಲ್ಲಿಗೆ ಕೊನೆಗೊಳಿಸುವುದು ಸೂಕ್ತವಾಗಿದೆ. ಅವರೀಗಾಗಲೇ ವಿವಾಹ ಬಂಧನಕ್ಕೆ ಒಳಪಟ್ಟು ಮಗುವನ್ನೂ ಪಡೆದಿದ್ದಾರೆ. ಆರೋಪಿಯ ವಿರುದ್ಧ ಶಿಕ್ಷೆ ವಿಧಿಸುವ ಮೂಲಕ ಇಬ್ಬರ ವೈವಾಹಿಕ ಜೀವನವನ್ನು ಬೇರ್ಪಡಿಸುವುದು ನ್ಯಾಯೋಚಿತವಲ್ಲ. ಇದು ತಪ್ಪಿನ ಹಾದಿಯಾಗಿದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?: ಇದು 2019 ರಲ್ಲಿ ನಡೆದ ಘಟನೆಯಾಗಿದ್ದು, ತನ್ನ ಅಪ್ರಾಪ್ತ ಮಗಳು ಕಾಣೆಯಾಗಿದ್ದಾಳೆ ಎಂದು ತಂದೆಯೊಬ್ಬರು ದೂರು ನೀಡಿದ್ದರು. ತನಿಖೆಯ ವೇಳೆ ಆರೋಪಿಯೊಂದಿಗೆ ಬಾಲಕಿ ಪತ್ತೆಯಾಗಿದ್ದಳು. ಇಬ್ಬರೂ ಒಮ್ಮತದಿಂದ ನಡೆದುಕೊಂಡಿದ್ದಾಗಿ ಹೇಳಿದಾಗ್ಯೂ ಯುವಕನ ವಿರುದ್ಧ ಬಾಲಕಿಯ ಕುಟುಂಬಸ್ಥರು ಅತ್ಯಾಚಾರ ಆರೋಪ ಹೊರಿಸಿದ್ದರು.

ಇದಲ್ಲದೇ, ಬಾಲಕಿಗೆ 17 ವರ್ಷವಾಗಿದ್ದ ಕಾರಣ ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. 18 ತಿಂಗಳ ಕಾಲ ಜೈಲು ಶಿಕ್ಷೆಯ ಬಳಿಕ ಆತನಿಗೆ ಜಾಮೀನು ನೀಡಲಾಗಿತ್ತು. ಬಿಡುಗಡೆಯ ನಂತರ ಇಬ್ಬರೂ 2020ರ ನವೆಂಬರ್​ನಲ್ಲಿ ವಿವಾಹವಾಗಿದ್ದು, ಅವರಿಗೆ ಹೆಣ್ಣು ಮಗುವಿದೆ.

ಈ ಹಿಂದೆಯೂ ಕೂಡ ಹಲವಾರು ನ್ಯಾಯಪೀಠಗಳು ಸಂತ್ರಸ್ತೆ ಮತ್ತು ಆರೋಪಿಗಳು ವಿವಾಹವಾದ ಬಳಿಕ ವಿಚಾರಣೆ ಬಾಕಿಯಿರುವ ಸಮಯದಲ್ಲಿ ಪ್ರಕರಣವನ್ನು ಇತ್ಯರ್ಥ ಮಾಡಿದ್ದನ್ನು ಹೈಕೋರ್ಟ್ ಉಲ್ಲೇಖಿಸಿದೆ.

ಓದಿ: ರೈಲ್ವೆ ಸೇತುವೆ ಮೇಲೆ ರೀಲ್ಸ್​ ಮಾಡಿದ ನಕಲಿ ಸಲ್ಮಾನ್​ ವಿರುದ್ಧ ಕೇಸ್​

Last Updated : Aug 24, 2022, 12:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.