ETV Bharat / bharat

ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ ಇಲ್ಲ, ಜನವರಿಯಲ್ಲಿ ಯುವನಿಧಿ ಜಾರಿ: ತೆಲಂಗಾಣದಲ್ಲಿ ಸಿದ್ದರಾಮಯ್ಯ ಹೇಳಿಕೆ

author img

By ETV Bharat Karnataka Team

Published : Nov 26, 2023, 10:57 PM IST

Karnataka CM Siddaramaiah on Congress guarantees: ಕರ್ನಾಟಕದಲ್ಲಿ ಕಾಂಗ್ರೆಸ್​ ಘೋಷಿಸಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಕರ್ನಾಟಕಕ್ಕೆ ಬಂದು ನಮ್ಮೊಂದಿಗೆ ಚರ್ಚಿಸಿ ದಾಖಲೆಗಳನ್ನು ಪರಿಶೀಲಿಸುವಂತೆ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರಿಗೆ ಬಹಿರಂಗ ಆಹ್ವಾನ ನೀಡಿದ್ದೆ. ಆದರೆ, ಅವರು ಬಂದಿಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Karnataka CM Siddaramaiah invites KCR to his state to see Congress guarantees being implemented
ನಮ್ಮ ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ ಇಲ್ಲ, ಜನವರಿಯಲ್ಲಿ ಯುವನಿಧಿ ಜಾರಿ: ತೆಲಂಗಾಣದಲ್ಲಿ ಸಿದ್ದರಾಮಯ್ಯ ಹೇಳಿಕೆ

ಹೈದರಾಬಾದ್​ (ತೆಲಂಗಾಣ): ಕರ್ನಾಟಕದಲ್ಲಿ ಕಾಂಗ್ರೆಸ್​ ಘೋಷಿಸಿರುವ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಈ ಯೋಜನೆಗಳಿಗೆ ಯಾವುದೇ ಅನುದಾನದ ಕೊರತೆ ಇಲ್ಲ. ಜನವರಿಯಲ್ಲಿ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಅನುಷ್ಠಾನ ಮಾಡಲಾಗುತ್ತದೆ. ಈಗಲೂ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಕರ್ನಾಟಕಕ್ಕೆ ಬಂದು ಯೋಜನೆಗಳ ಅನುಷ್ಠಾನ ಬಗ್ಗೆ ನೋಡಿಕೊಂಡು ಹೋಗಲಿ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ನವೆಂಬರ್​ 30ರಂದು ಚುನಾವಣೆ ನಡೆಯಲಿದೆ. ಬಹಿರಂಗ ಪ್ರಚಾರಕ್ಕೆ ಎರಡೇ ದಿನಗಳು ಬಾಕಿ ಉಳಿದಿದ್ದು, ಕಾಂಗ್ರೆಸ್​ ಅಬ್ಬರದ ಪ್ರಚಾರದಲ್ಲಿ ತೊಡಗಿದೆ. ಪಕ್ಷದ ಅಗ್ರ ನಾಯಕರ ಜೊತೆಗೆ ಬೇರೆ ರಾಜ್ಯಗಳ ನಾಯಕರು ಬಿಡುವಿಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತೆಲಂಗಾಣ ಪ್ರವಾಸದಲ್ಲಿದ್ದು, ಮಾಧ್ಯಮದವರೊಂದಿಗೆ ಮಾತನಾಡಿ, ಕರ್ನಾಟಕದ ಕಾಂಗ್ರೆಸ್​ ಗ್ಯಾರಂಟಿ ಯೋಜನೆಗಳ ಬಗ್ಗೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್, ಅವರ ಪುತ್ರ ಕೆಟಿ ರಾಮರಾವ್ ಮತ್ತು ಕೆಲವು ಬಿಜೆಪಿ ನಾಯಕರು ಮಾಡಿರುವ ಆರೋಪದ ಬಗ್ಗೆ ಮಾಧ್ಯಮಗಳ ವರದಿಗಳನ್ನು ನೋಡಿದ್ದೇನೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿ ಮಾಡಲು ತರಲು ಸಾಧ್ಯವಾಗಿಲ್ಲ ಎಂದು ಬಿಆರ್‌ಎಸ್ ಮತ್ತು ಚಂದ್ರಶೇಖರ್ ರಾವ್​ ಸುಳ್ಳು ಹೇಳುತ್ತಿದ್ದಾರೆ. ಏಕೆಂದರೆ, ಅವರು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಅವರಿಗೆ ಗೊತ್ತಾಗಿದೆ ಎಂದು ಕುಟುಕಿದರು.

ಚುನಾವಣೆ ಉದ್ದೇಶಕ್ಕಾಗಿ ಅನಗತ್ಯ ಆರೋಪ ಬೇಡ: ನಾನು ಮೊನ್ನೆ ಚುನಾವಣಾ ಪ್ರಚಾರದ ಭಾಗವಾಗಿ ತೆಲಂಗಾಣಕ್ಕೆ ಬಂದಾಗ ಚಂದ್ರಶೇಖರ್ ರಾವ್ ಅವರಿಗೆ ಆಹ್ವಾನ ಕೊಟ್ಟಿದ್ದೆ. ಕರ್ನಾಟಕಕ್ಕೆ ಬಂದು ನಮ್ಮೊಂದಿಗೆ ಚರ್ಚಿಸಿ ದಾಖಲೆಗಳನ್ನು ಪರಿಶೀಲಿಸುವಂತೆ ಬಹಿರಂಗ ಆಹ್ವಾನ ನೀಡಿದ್ದೆ. ಆದರೆ, ಚಂದ್ರಶೇಖರ್ ರಾವ್ ಬಂದಿಲ್ಲ. ಇಂದಿಗೂ ನಾನು ಚಂದ್ರಶೇಖರ್ ರಾವ್ ಅವರನ್ನು ಕೇಳುತ್ತೇನೆ. ದಯವಿಟ್ಟು ಕರ್ನಾಟಕಕ್ಕೆ ಬಂದು ಪರಿಶೀಲನೆ ಮಾಡಿ ಹಾಗೂ ಚುನಾವಣೆ ಉದ್ದೇಶಕ್ಕಾಗಿ ಅನಗತ್ಯ ಆರೋಪ ಮಾಡಬೇಡಿ ಎಂದು ಸಿದ್ದರಾಮಯ್ಯ ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುವ ಮೊದಲ ಗ್ಯಾರಂಟಿ 'ಶಕ್ತಿ' ಯೋಜನೆಯನ್ನು ಜೂನ್‌ನಲ್ಲಿ ಜಾರಿಗೊಳಿಸಲಾಗಿದೆ. ಇದು ಇತ್ತೀಚೆಗೆ 100 ಕೋಟಿ ಪ್ರಯಾಣಗಳನ್ನು ಪೂರೈಸಿದೆ. 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವ 'ಅನ್ನಭಾಗ್ಯ' ಯೋಜನೆಗೆ ಕೇಂದ್ರದ ಒತ್ತಡದ ಅಡಿಯಲ್ಲಿ ಹೆಚ್ಚುವರಿ ಐದು ಕೆಜಿ ಅಕ್ಕಿಯನ್ನು ನೀಡಲು ಭಾರತೀಯ ಆಹಾರ ನಿಗಮ ನಿರಾಕರಿಸಿದೆ. ಆದ್ದರಿಂದ ಐದು ಕೆಜಿ ಅಕ್ಕಿ ಹಣವನ್ನು ಜುಲೈನಿಂದ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಪ್ರತಿ ಫಲಾನುಭವಿಗೆ ನೀಡಲಾಗಿದೆ. ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಭರವಸೆ ನೀಡುವ 'ಗೃಹ ಜ್ಯೋತಿ' ಯೋಜನೆ ಜುಲೈನಲ್ಲಿ ಪ್ರಾರಂಭವಾಗಿದೆ ಎಂದರು.

ಕುಟುಂಬದ ಜಯಮಾನಿಗೆ ಮಾಸಿಕ 2,000 ರೂ.ಗಳನ್ನು ಒದಗಿಸುವ 'ಗೃಹ ಲಕ್ಷ್ಮಿ' ಯೋಜನೆ ಆಗಸ್ಟ್‌ನಲ್ಲಿ ಪ್ರಾರಂಭಗೊಂಡಿದೆ. ಇದುವರೆಗೆ 1.14 ಕೋಟಿ ಫಲಾನುಭವಿಗಳು ಇದರ ಲಾಭ ಪಡೆದಿದ್ದಾರೆ. ಪದವೀಧರ ಯುವಕರಿಗೆ ಪ್ರತಿ ತಿಂಗಳು 3,000 ರೂ. ಮತ್ತು ಡಿಪ್ಲೊಮಾ ಹೊಂದಿರುವವರಿಗೆ 1,500 ರೂ. ನಿರುದ್ಯೋಗ ಭತ್ಯೆ ನೀಡುವ ಐದನೇ ಗ್ಯಾರಂಟಿ 'ಯುವ ನಿಧಿ' ಯೋಜನೆ 2024ರ ಜನವರಿಯಲ್ಲಿ ಪ್ರಾರಂಭವಾಗಲಿದೆ. ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ ಇಲ್ಲ. ಒಟ್ಟು 38 ಸಾವಿರ ಕೋಟಿ ರೂ.ಗಳ ಬಜೆಟ್‌ ಕೂಡ ಮೀಸಲಿಡಲಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ ಸೋಲಿಸಲು ಬಿಆರ್‌ಎಸ್​, ಬಿಜೆಪಿ, ಎಐಎಂಐಎಂ ಒಟ್ಟಾಗಿ ಕುತಂತ್ರ ನಡೆಸಿವೆ: ರಾಹುಲ್​ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.