ETV Bharat / bharat

ಶ್ರೀ ಸಮ್ಮೇದ್ ಶಿಖರ್ಜಿಗಾಗಿ ಜಾರ್ಖಂಡ್ ಸರ್ಕಾರದ ವಿರುದ್ಧ ಉಪವಾಸ ಕುಳಿತ ಜೈನ ಸನ್ಯಾಸಿ ನಿಧನ

author img

By

Published : Jan 4, 2023, 7:08 AM IST

ಜಾರ್ಖಂಡ್‌ ರಾಜ್ಯದ ಗಿರಿಡ್ ಜಿಲ್ಲೆಯ ಪಾರಸ್ನಾಥ್ ಬೆಟ್ಟಗಳಲ್ಲಿರುವ ಪವಿತ್ರ ಜೈನ ಯಾತ್ರಾ ಕೇಂದ್ರ ಶ್ರೀ ಸಮ್ಮೇದ್ ಶಿಖರ್ಜಿಯನ್ನು ಜಾರ್ಖಂಡ್ ಸರ್ಕಾರ ಪ್ರವಾಸಿ ತಾಣವನ್ನಾಗಿ ಮಾಡಲು ನಿರ್ಧರಿಸಿರುವ ಕ್ರಮ ಖಂಡಿಸಿ ಜೈಪುರ ನಗರದ ಸಂಗನೇರ್ ಪ್ರದೇಶದ ಸಾಂಘಿಜಿ ದೇವಸ್ಥಾನದಲ್ಲಿ ಉಪವಾಸ ಕುಳಿತ ಜೈನ ಸನ್ಯಾಸಿಯೊಬ್ಬರು ನಿನ್ನೆ ನಿಧನರಾಗಿದ್ದಾರೆ.

Jain monk
ಜೈನ ಸನ್ಯಾಸಿ ನಿಧನ

ಜೈಪುರ (ರಾಜಸ್ಥಾನ): ಜೈನರ ಅತ್ಯಂತ ಪವಿತ್ರ ಶ್ರದ್ಧಾಕೇಂದ್ರ ಶ್ರೀ ಸಮ್ಮೇದ್ ಶಿಖರ್ಜಿಯನ್ನು ಪ್ರವಾಸಿ ಸ್ಥಳವೆಂದು ಘೋಷಿಸಿರುವ ಜಾರ್ಖಂಡ್ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ 72 ವರ್ಷದ ಜೈನ ಸನ್ಯಾಸಿಯೊಬ್ಬರು ಜೈಪುರದಲ್ಲಿ ಮಂಗಳವಾರ ನಿಧನರಾಗಿದ್ದಾರೆ ಎಂದು ಸಮುದಾಯದ ಮುಖಂಡರು ತಿಳಿಸಿದ್ದಾರೆ. ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯವರಾದ ಸುಗ್ಯೆಸಾಗರ್ ಮಹಾರಾಜ್ ಅವರು ಸರ್ಕಾರದ ನಿರ್ಧಾರದ ವಿರುದ್ಧ ಜೈಪುರದಲ್ಲಿ ನಡೆದ ಶಾಂತಿ ಮೆರವಣಿಗೆಯಲ್ಲಿ ಭಾಗವಹಿಸಿದ ಬಳಿಕ ನಗರದ ಸಂಗನೇರ್ ಪ್ರದೇಶದ ಸಾಂಘಿಜಿ ದೇಗುಲದಲ್ಲಿ ಉಪವಾಸ ಕುಳಿತಿದ್ದರು. ಡಿಸೆಂಬರ್ 25 ರಿಂದ ಅಮರಣಾಂತ ವ್ರತದಲ್ಲಿದ್ದ ಇವರು ನಿನ್ನೆ ಬೆಳಗ್ಗೆ ನಿಧನರಾಗಿದ್ದು, ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿದೆ ಎಂದು ಮಾಲ್ಪುರ ಗೇಟ್ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ಸತೀಶ್ ಚಂದ್ ಮಾಹಿತಿ ನೀಡಿದರು.

ದೇಶಾದ್ಯಂತ ಜೈನ ಸಮಾಜದಿಂದ ಪ್ರತಿಭಟನೆ: ಜಾರ್ಖಂಡ್ ಸರ್ಕಾರವು ಸಮ್ಮೇದ್ ಶಿಖರ್ಜಿಯನ್ನು ಪ್ರವಾಸಿ ತಾಣವೆಂದು ಅಧಿಸೂಚನೆ ಹೊರಡಿಸಿದ ಬಳಿಕ ದೇಶದ ವಿವಿಧ ಭಾಗಗಳಲ್ಲಿ ಜೈನ ಧರ್ಮೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ಈ ನಿರ್ಧಾರವು ನಮ್ಮ ಧರ್ಮದ ಪಾವಿತ್ರ್ಯತೆಗೆ ಧಕ್ಕೆ ತರುತ್ತದೆ. ಜೈನ ಧರ್ಮವು ಅಹಿಂಸೆಯನ್ನು ನಂಬುತ್ತದೆ. ಅಲ್ಲಿನ ಸರ್ಕಾರದ ನಿರ್ಧಾರದಿಂದಾಗಿ ಮಾಂಸಾಹಾರಿ ಹೋಟೆಲ್‌, ಬಾರ್‌ಗಳು ತಲೆ ಎತ್ತಲಿವೆ. ಕಾನೂನು ಬಾಹಿರ ಚಟುವಟಿಕೆಗಳು ನಡೆಯಲು ಕಾರಣವಾಗಲಿದೆ. ಜಾರ್ಖಂಡ್ ಸರ್ಕಾರ ಕೂಡಲೇ ತನ್ನ ನಿರ್ಧಾರ ಹಿಂಪಡೆಯಬೇಕೆಂದು ಆಗ್ರಹಿಸಿ ನವದೆಹಲಿ, ಸಹಮದಾಬಾದ್​, ಕರ್ನಾಟಕ ರಾಜ್ಯದ ಬೆಂಗಳೂರು, ತುಮಕೂರು, ಮಂಗಳೂರು, ಉಡುಪಿ, ದಾವಣಗೆರೆ ಸೇರಿದಂತೆ ಅನೇಕ ಕಡೆಗಳಲ್ಲಿ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ.

ಇದನ್ನೂ ಓದಿ: ಸಮ್ಮೇದ ಶಿಖರ್ಜಿ ಉಳಿಸಿ ಆಂದೋಲನ: ಜಾರ್ಖಂಡ್​ ಸರ್ಕಾರದ ವಿರುದ್ಧ ಜೈನ ಸಮುದಾಯ ಪ್ರತಿಭಟನೆ

ದಾದಾ ಆದಿನಾಥ ಚರಣ ಪಾದುಕೆಗಳಿಗೆ ಹಾನಿ: ಇನ್ನೊಂದೆಡೆ, ಕಳೆದ ನವೆಂಬರ್ 25, 2022 ರಂದು ಕೆಲವು ಸಮಾಜ ವಿರೋಧಿ ಶಕ್ತಿಗಳು ಜೈನರ ಪವಿತ್ರ ಸ್ಥಳವಾದ ಶತ್ರುಂಜಯ್ ಬೆಟ್ಟದ ಬಳಿ ಇರುವ ಗುಜರಾತ್‌ನ ಪಾಲಿಟಾನಾದ ರೋಹಿಶಾಲಾ ಗ್ರಾಮದ ಪವಿತ್ರ ದೇಗುಲದಲ್ಲಿ ಇರಿಸಲಾದ ಆದಿನಾಥ ದಾದಾ ಅವರ ಪಾದುಕೆಗಳನ್ನು ಹಾನಿಗೊಳಿಸಿದ್ದರು. ಇದಕ್ಕೆ ಜೈನ ಸಮುದಾಯದ ವಿವಿಧ ಗುಂಪುಗಳು ನವೆಂಬರ್ 27, 29 ಮತ್ತು 30 ರಂದು ದೂರುಗಳನ್ನು ಸಲ್ಲಿಸಿವೆ.

ಇದನ್ನೂ ಓದಿ: ಪವಿತ್ರ ಕ್ಷೇತ್ರಗಳ ರಕ್ಷಣೆಗೆ ಆಗ್ರಹ: ಜೈನ ಸಮುದಾಯದಿಂದ ಬೃಹತ್​ ರ್ಯಾಲಿ

ಸಮ್ಮೇದ್ ಶಿಖರ್ಜಿ ಇತಿಹಾಸವೇನು?: ಶ್ರೀ ಸಮ್ಮೇದ್ ಶಿಖರ್ಜಿ ಜಾರ್ಖಂಡ್‌ನ ಪಾರಸ್ನಾಥ್ ಬೆಟ್ಟಗಳಲ್ಲಿರುವ ಜೈನರ ಅತ್ಯಂತ ಪವಿತ್ರ ಯಾತ್ರಾ ಕೇಂದ್ರ. ಜಾರ್ಖಂಡ್ ರಾಜ್ಯದ ಗಿರಿಡ್ ಜಿಲ್ಲೆಯಲ್ಲಿರುವ ಸಮ್ಮೇದ್‌ ಶಿಖರ್ಜಿ ಪಾರ್ಶ್ವನಾಥ(ಪಾರಸ್‌ನಾಥ್‌) ಬೆಟ್ಟಗಳಲ್ಲಿ 24 ತೀರ್ಥಂಕರರ ಪೈಕಿ 20 ತೀರ್ಥಂಕರರು ಮೋಕ್ಷ ಹೊಂದಿದ್ದಾರೆ. ಈ ಪವಿತ್ರ ಸ್ಥಳವನ್ನು ಜಾರ್ಖಂಡ್ ಸರ್ಕಾರ ಪ್ರವಾಸಿ ತಾಣವನ್ನಾಗಿ ಮಾಡಲು ಮುಂದಾಗಿದೆ. ಇದಕ್ಕೆ ಜೈನ ಸಮುದಾಯದವರು ಭಾರಿ ಆಕ್ಷೇಪ ವ್ಯಕ್ತಪಡಿಸಿದರೂ ಕೂಡ ಜಾರ್ಖಂಡ್ ಸರ್ಕಾರ ಜೈನರ ತೀರ್ಥ ಕ್ಷೇತ್ರವನ್ನು ಅತಿಕ್ರಮಣ ಮಾಡಲು ಮುಂದಾಗಿದೆ ಎಂದು ಜೈನ ಸಮುದಾಯದ ಮುಖಂಡರು ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.