ETV Bharat / bharat

ಕಾಂಗ್ರೆಸ್​ ಪಿಚ್​ನಲ್ಲಿ ಬಿಜೆಪಿ ಆಡುವುದು ಅನಿವಾರ್ಯ: ಜೈರಾಮ್ ರಮೇಶ್

author img

By

Published : Dec 18, 2022, 12:38 PM IST

Updated : Dec 18, 2022, 1:22 PM IST

ಭಾರತ್ ಜೋಡೋ ಯಾತ್ರೆಯ ಮೂಲಕ ರಾಹುಲ್ ಗಾಂಧಿ ದೇಶದ ರಾಜಕೀಯ ಚರ್ಚೆಗೆ ಹೊಸ ದಿಕ್ಕನ್ನು ನೀಡಿದ್ದಾರೆ ಮತ್ತು ಕಾಂಗ್ರೆಸ್ ಕಳೆದ 100 ದಿನಗಳಲ್ಲಿ ರಾಜಕೀಯದ ದಿಕ್ಕನ್ನು ನಿರ್ಧರಿಸಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಇನ್ನು ಕಾಂಗ್ರೆಸ್​ ತಯಾರಿಸಿದ ಪಿಚ್​ನಲ್ಲಿ ಬಿಜೆಪಿ ಆಡುವುದು ಅನಿವಾರ್ಯ: ಜೈರಾಮ್ ರಮೇಶ್
Will force BJP to play on Congress made pitch Jairam Ramesh

ದೌಸಾ(ರಾಜಸ್ಥಾನ್): ದೇಶದಲ್ಲಿ ರಾಜಕೀಯದ ನಿರೂಪಣೆಯನ್ನು ಈಗ ಕಾಂಗ್ರೆಸ್ ಸಿದ್ಧಪಡಿಸುತ್ತಿದೆ ಮತ್ತು ಕಾಂಗ್ರೆಸ್​ ಸಿದ್ಧಪಡಿಸಿದ ರಾಜಕೀಯದಾಟದ ಪಿಚ್‌ನಲ್ಲಿ ಆಡುವಂತೆ ಭಾರತ್ ಜೋಡೋ ಯಾತ್ರೆ ಬಿಜೆಪಿಗೆ ಅನಿವಾರ್ಯವಾಗಿಸಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಭಾನುವಾರ ಹೇಳಿದ್ದಾರೆ. ಭಾರತ್ ಜೋಡೊ ಯಾತ್ರೆ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ನ ಸೈದ್ಧಾಂತಿಕ ನೆಲೆಯನ್ನು ಬಲಿಷ್ಠ ಪ್ರಯತ್ನಿಸುತ್ತಿದ್ದಾರೆ ಮತ್ತು ಪಕ್ಷದ ಚುನಾಯಿತ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಮುಂದಿನ ವರ್ಷ ಪಕ್ಷ ಇಂಥ ಮತ್ತೊಂದು ಯಾತ್ರೆ ನಡೆಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ನಾನು ಖಂಡಿತವಾಗಿಯೂ ಪೋರಬಂದರ್ (ಗುಜರಾತ್) ನಿಂದ ಪರಶುರಾಮ್ ಕುಂಡ್ (ಅರುಣಾಚಲ ಪ್ರದೇಶ) ವರೆಗಿನ ಯಾತ್ರೆಯಲ್ಲಿ ಭಾಗವಹಿಸಲು ಇಷ್ಟಪಡುತ್ತೇನೆ. ಆದರೆ ಮುಂದಿನ ವರ್ಷ ನಮಗೆ ಅದನ್ನು ಮಾಡಲಾಗುತ್ತದೆಯೇ ಅಥವಾ ಮಾಡಿದರೂ ಅದನ್ನು ಯಾವ ರೀತಿಯಲ್ಲಿ ಮಾಡಬಹುದು ಎಂಬುದನ್ನು ಪಕ್ಷದ ಸೂಕ್ತ ವೇದಿಕೆಗಳಲ್ಲಿ ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದರು.

ಭಾರತ್ ಜೋಡೋ ಯಾತ್ರೆಯ ಮೂಲಕ ರಾಹುಲ್ ಗಾಂಧಿ ದೇಶದ ರಾಜಕೀಯ ಚರ್ಚೆಗೆ ಹೊಸ ದಿಕ್ಕು ನೀಡಿದ್ದಾರೆ ಮತ್ತು ಕಾಂಗ್ರೆಸ್ ಕಳೆದ 100 ದಿನಗಳಲ್ಲಿ ರಾಜಕೀಯದ ದಿಕ್ಕನ್ನು ನಿರ್ಧರಿಸಿದೆ. ಕಾಂಗ್ರೆಸ್ ಪಕ್ಷವನ್ನು ಶ್ಲಾಘಿಸಲಾಗಿದೆ, ಟೀಕಿಸಲಾಗಿದೆ, ಹೊಗಳಲಾಗಿದೆ, ನಿಂದಿಸಲಾಗಿದೆ. ನಾವು ರಕ್ಷಣಾತ್ಮಕವಾಗಿದ್ದೇವೆ ಎಂಬುದೇ ಇದರ ಅರ್ಥ. ಬಿಜೆಪಿ ಏನು ಹೇಳುತ್ತಿದೆ ಅಥವಾ ಏನು ಮಾಡುತ್ತಿದೆ ಎಂಬುದಕ್ಕೆ ನಾವು ಯಾವಾಗಲೂ ಪ್ರತಿಕ್ರಿಯಿಸುತ್ತಿದ್ದೇವೆ. ಆದರೆ ಭಾರತ್ ಜೋಡೋ ಯಾತ್ರೆಯ ಮೂಲಕ ರಾಜಕೀಯ ಭಾಷಣದಲ್ಲಿ ಚರ್ಚೆಯ ವಿಷಯಗಳು ಮತ್ತು ನಿರೂಪಣೆಯನ್ನು ಸೆಟ್ ಮಾಡುವಲ್ಲಿ ನಾವು ಬಹಳ ದೊಡ್ಡ ಪ್ರಮಾಣದಲ್ಲಿ ಯಶಸ್ವಿಯಾಗಿದ್ದೇವೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು.

ಯಾತ್ರೆಯು ಪಕ್ಷದಲ್ಲಿ ಆಂತರಿಕವಾಗಿ ತೀವ್ರವಾದ ಪರಿಣಾಮ ಬೀರಿದೆ. ಅಲ್ಲದೆ ಇದು ಭಾರತದ ಬಾಹ್ಯ ರಾಜಕೀಯದ ಮೇಲೂ ಪರಿಣಾಮ ಬೀರಿದೆ. ಯಾತ್ರೆಯ ಕಾರಣದಿಂದ ಬಿಜೆಪಿಗೆ ಹಿನ್ನಡೆಯಾಗಿದ್ದು, ಅದು ಹತಾಶ ಹಾಗೂ ಗೊಂದಲದ ಮನಸ್ಥಿತಿಯಲ್ಲಿದೆ. ಚರ್ಚೆಯ ನಿಯಮಗಳನ್ನು ಬದಲಾಯಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ನಾನು ಭಾವಿಸುತ್ತೇನೆ. ಈಗ ರಾಜಕೀಯ ನಿರೂಪಣೆಯ ಆಟ ಈಗ ನಮ್ಮ ಪರವಾಗಿದೆ. ನಾವೇ ತಯಾರಿಸಿದ ಪಿಚ್​ನಲ್ಲಿ ನಾವು ಬಿಜೆಪಿಯೊಂದಿಗೆ ಕ್ರಿಕೆಟ್ ಆಡುತ್ತಿದ್ದೇವೆ. ಈಗ ಅವರು ತಯಾರಿಸಿದ ಪಿಚ್​ನಲ್ಲಿ ನಾವು ಆಡುತ್ತಿಲ್ಲ ಎಂದು ಜೈರಾಮ್ ರಮೇಶ್ ನುಡಿದರು.

ಇದನ್ನೂ ಓದಿ: ರಾಜಸ್ಥಾನದಲ್ಲಿ ಭಾರತ್​ ಜೋಡೋ ನಡಿಗೆ: ಮಕ್ಕಳೊಂದಿಗೆ ಸಂವಾದ ಮಾಡಿದ ರಾಹುಲ್​ ಗಾಂಧಿ

Last Updated : Dec 18, 2022, 1:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.