ETV Bharat / bharat

ವಿಶಾಖಪಟ್ಟಣದ ನೌಕಾನೆಲೆಯಲ್ಲಿ ಮಾನವಸಹಿತ ಗಗನಯಾನ ಮಿಷನ್​ನ ಪ್ರಾಯೋಗಿಕ ಪರೀಕ್ಷೆ: ಇಸ್ರೋ

author img

By

Published : Jul 22, 2023, 5:25 PM IST

ವಿಶಾಖಪಟ್ಟಣದ ನೌಕಾನೆಲೆಯಲ್ಲಿ ಮಾನವ ಸಹಿತ ಗಗನಯಾನ ಮಿಷನ್​ನ ಬಂದರು ಪ್ರಯೋಗ ನಡೆಸಲಾಗಿದೆ ಎಂದು ಇಸ್ರೋ ತಿಳಿಸಿದೆ.

isro-navy-conduct-harbour-recovery-trials-for-gaganyaaan-human-spaceflight-mission
ವಿಶಾಖಪಟ್ಟಣದ ನೌಕಾನೆಲೆಯಲ್ಲಿ ಮಾನವಸಹಿತ ಗಗನಯಾನ ಮಿಷನ್​ನ ಪ್ರಾಯೋಗಿಕ ಪರೀಕ್ಷೆ: ಇಸ್ರೋ

ಬೆಂಗಳೂರು: ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ ಯೋಜನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಾಯೋಗಿಕ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಗಗನಯಾನ ಮಿಷನ್‌ನ ನೌಕೆಯನ್ನು ಭೂಮಿಗೆ ವಾಪಸ್ ಕರೆತರುವ ಪ್ರಾಯೋಗಿಕ ಕಾರ್ಯಾಚರಣೆಗಳು ಎರಡನೇ ಹಂತಕ್ಕೆ ಪ್ರವೇಶಿಸಿವೆ ಎಂದು ಇಸ್ರೋ ತಿಳಿಸಿದೆ.

ಗಗನಯಾನ ಯೋಜನೆಯು ಬಾಹ್ಯಾಕಾಶ ನೌಕೆಯ ಮೂಲಕ ಮೂವರು ಗಗನಯಾತ್ರಿಗಳನ್ನು ಮೂರು ದಿನಗಳ ಕಾರ್ಯಾಚರಣೆಗಾಗಿ 400 ಕಿಮೀ ದೂರದ ಕಕ್ಷೆಗೆ ಉಡಾವಣೆ ಮಾಡಿ, ಅವರನ್ನು ಸುರಕ್ಷಿತವಾಗಿ ಭೂಮಿಗೆ ಮರಳಿ ತರುವ ಮೂಲಕ ಮಾನವಸಹಿತ ಬಾಹ್ಯಾಕಾಶ ಯಾನ ಕೈಗೊಳ್ಳುವುದಾಗಿದೆ. ಆಂಧ್ರ ಪ್ರದೇಶದ ವಿಶಾಖಪಟ್ಟಣದ ಭಾರತೀಯ ನೌಕಾದಳದ ನೌಕಾನೆಲೆಯಲ್ಲಿ ಗಗನಯಾನ ಮಿಷನ್​ನ ಬಂದರಿನ ಪ್ರಯೋಗಗಳ ಪ್ರಾರಂಭಿಸಲಾಗಿದೆ. ಇದರಿಂದ ಪ್ರಾಯೋಗಿಕ ಕಾರ್ಯಾಚರಣೆಗಳು ಎರಡನೇ ಹಂತಕ್ಕೆ ತಲುಪಿವೆ ಎಂದು ಇಸ್ರೋದ ಬೆಂಗಳೂರಿನ ಪ್ರಧಾನ ಕಚೇರಿ ಹೇಳಿದೆ.

ಇದನ್ನೂ ಓದಿ: Chandrayaan 3: ಚಂದ್ರಯಾನ 3 ಗಗನನೌಕೆಯ ಕಕ್ಷೆ ಬದಲಾವಣೆಯ ನಾಲ್ಕನೇ ಪ್ರಕ್ರಿಯೆ ಯಶಸ್ವಿ

ಇಸ್ರೋ ಮತ್ತು ಭಾರತೀಯ ನೌಕಾಪಡೆ ಜಂಟಿಯಾಗಿ ಜುಲೈ 20ರಂದು ನಡೆಸಿದ ಪ್ರಯೋಗದಲ್ಲಿ ಪರೀಕ್ಷಾ ವಾಹನದ ಮೊದಲ ಅಭಿವೃದ್ಧಿ ಕಾರ್ಯಾಚರಣೆಗಳಿಗಾಗಿ ಹಡಗನ್ನು ಗುರುತಿಸಲಾಯಿತು. ಪೂರ್ವ ನೌಕಾ ಕಮಾಂಡ್‌ನಲ್ಲಿ ಸಿಮ್ಯುಲೇಟೆಡ್ ಕ್ರ್ಯೂ ಮಾಡ್ಯೂಲ್ ಮೋಕ್‌ಅಪ್ಅನ್ನು ಬಳಸಿಕೊಂಡು ಪ್ರಯೋಗ ನಡೆಸಲಾಯಿತು. ಈ ಪ್ರಯೋಗ ಪ್ರಕ್ರಿಯೆಯಲ್ಲಿ ಈ ಮೋಕ್ಅಪ್ ನಿರ್ಣಾಯಕ ಅಂಶವಾಗಿದೆ. ಇದರಿಂದ ನೌಕೆಯನ್ನು ಭೂಮಿಗೆ ವಾಪಸ್ ಕರೆತರುವ ಕಾರ್ಯವಿಧಾನ ಪರಿಸ್ಥಿತಿಗಳನ್ನು ನಿಖರವಾಗಿ ಅನುಕರಿಸುತ್ತದೆ ಎಂದು ಖಚಿತಪಡಿಸಿಕೊಳ್ಳಬಹುದು ಎಂದು ಇಸ್ರೋ ಮಾಹಿತಿ ನೀಡಿದೆ.

ಇದನ್ನೂ ಓದಿ: ಚಂದ್ರನ ಮೇಲೆ ಮಾನವ ವಾಸಸ್ಥಾನದ ಸಾಧ್ಯತೆಗಳ ಬಗ್ಗೆ ಚಂದ್ರಯಾನ 3 ಅನ್ವೇಷಿಸಲಿದೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್

ಈ ಪ್ರಯೋಗದ ಸಮಯದಲ್ಲಿ ರಿಕವರಿ ಬೋಯ್‌ ಜೋಡಿಸುವುದು ಮತ್ತು ಮಾಡ್ಯೂಲ್​ಅನ್ನು ಹಡಗಿನ ಡೆಕ್‌ಗೆ ಎತ್ತುವುದು ಸೇರಿದಂತೆ ವಿವಿಧ ಹಂತಗಳನ್ನು ಪರೀಕ್ಷಿಸಲಾಗಿದೆ. ಅಲ್ಲದೇ, ತಡೆರಹಿತ ಮತ್ತು ಸುರಕ್ಷಿತವಾಗಿ ಭೂಮಿಗೆ ವಾಪಸ್ ಕರೆತರುವ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಕೊಚ್ಚಿಯಲ್ಲಿನ ವಾಟರ್ ಸರ್ವೈವಲ್ ಟ್ರೈನಿಂಗ್ ಫೆಸಿಲಿಟಿಯಲ್ಲಿ ಹಂತ-1 ಪ್ರಯೋಗಗಳ ಅನುಭವಗಳ ಆಧಾರದ ಮೇಲೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ಗಳನ್ನು ಉತ್ತಮಗೊಳಿಸಲಾಗಿದೆ ಎಂದು ಹೇಳಿದೆ.

ಎರಡು ದಿನಗಳ ಹಿಂದೆ ಮಹೇಂದ್ರಗಿರಿಯ ಐಪಿಆರ್​ಸಿಯಲ್ಲಿ ಗಗನಯಾನ ಸರ್ವಿಸ್ ಮಾಡ್ಯೂಲ್ ಪ್ರೊಪಲ್ಷನ್ ಸಿಸ್ಟಮ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಇದು ಆರ್ಬಿಟಲ್ ಮಾಡ್ಯೂಲ್‌ನ ಅವಶ್ಯಕತೆಗಳನ್ನು ಪೂರೈಸುತ್ತದೆ ಎಂದು ಇಸ್ರೋ ತಿಳಿಸಿತ್ತು. ಇದೇ ವರ್ಷ ಗಗನಯಾನ ಮಿಷನ್​ ಕೈಗೊಳ್ಳಲು ಇಸ್ರೋ ಯೋಜಿಸಿದೆ. ಇತ್ತೀಚೆಗೆ ಚಂದ್ರಯಾನ 3 ಮಿಷನ್​ ಗಗನ ನೌಕೆಯನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿದ ಬೆನ್ನಲ್ಲೇ ಗಗನಯಾನ ಮಿಷನ್​ಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಸಿದ್ಧತೆ ಆರಂಭಿಸಿದೆ.

ಇದನ್ನೂ ಓದಿ: Gaganyaan mission 2023: ಸರ್ವಿಸ್ ಮಾಡ್ಯೂಲ್ ಪ್ರೊಪಲ್ಷನ್ ಸಿಸ್ಟಮ್ ಪರೀಕ್ಷೆ ಯಶಸ್ವಿ.. ಮಾಹಿತಿ ಹಂಚಿಕೊಂಡ ಇಸ್ರೋ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.