ETV Bharat / bharat

ಭಾರತೀಯರಿದ್ದ ಲೈಬೀರಿಯನ್ ಹಡಗು ಹೈಜಾಕ್​ಗೆ ಯತ್ನ; ನೆರವಿಗೆ ಧಾವಿಸಿದ ಐಎನ್​ಎಸ್​ ಯುದ್ಧನೌಕೆ

author img

By ETV Bharat Karnataka Team

Published : Jan 5, 2024, 12:50 PM IST

ಸೊಮಾಲಿಯಾ ಕರಾವಳಿಯ ಬಳಿ ಲೈಬೀರಿಯನ್ ಹಡಗನ್ನು ಅಪಹರಿಸುವ ಯತ್ನವನ್ನು ಭಾರತೀಯ ನೌಕಾಪಡೆ ವಿಫಲಗೊಳಿಸಿದೆ. ಅದರಲ್ಲಿ 15 ಭಾರತೀಯ ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದೆ.

Indian Navy  Liberian flagged  hijacked vessel  ಯುದ್ಧನೌಕೆ INS  ಲೈಬೀರಿಯನ್ ಧ್ವಜದ ಹಡಗು  ಹಡಗು ಹೈಜಾಕ್​ಗೆ ಯತ್ನ
ನೆರವಿಗೆ ತೆರಳಿದ ಯುದ್ಧನೌಕೆ INS

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಲೈಬೀರಿಯನ್ ಧ್ವಜ ಹೊಂದಿದ್ದ ಹಡಗನ್ನು ಅಪಹರಿಸುವ ಯತ್ನವನ್ನು ಭಾರತೀಯ ನೌಕಾಪಡೆ ವಿಫಲಗೊಳಿಸಿದೆ. ಲೈಬೀರಿಯನ್ ಧ್ವಜವಿದ್ದ ಹಡಗು UKMTO ಪೋರ್ಟಲ್‌ಗೆ ಈ ಬಗ್ಗೆ ಸಂದೇಶ ಕಳಿಸಿದ್ದು, ಜನವರಿ 04ರ ಸಂಜೆ ಸುಮಾರು 6 ಮಂದಿ ಅಪರಿಚಿತ ಶಸ್ತ್ರಸಜ್ಜಿತ ಸಿಬ್ಬಂದಿ ಹಡಗಿನಲ್ಲಿದ್ದರು ಎಂದು ಸಂದೇಶದಲ್ಲಿ ತಿಳಿಸಲಾಗಿತ್ತು. ಈ ಮಾಹಿತಿ ಆಧರಿಸಿ ನೌಕಾಪಡೆಯು ಕಾರ್ಯಾಚರಣೆ ಕೈಗೊಂಡಿತ್ತು.

ನೌಕಾಪಡೆ ವಿಮಾನಗಳ ಚಟುವಟಿಕೆ ಬಗ್ಗೆ ಕಣ್ಣಿಟ್ಟಿವೆ. ಪರಿಸ್ಥಿತಿ ಮೇಲ್ವಿಚಾರಣೆಗೆ ಮತ್ತು ಸಿಬ್ಬಂದಿಯ ಸುರಕ್ಷತೆ ನಿಟ್ಟಿನಲ್ಲಿ ಯುದ್ಧನೌಕೆ ಐಎನ್​ಎಸ್​ ಚೆನ್ನೈ ಅನ್ನು ನಿಯೋಜಿಸಲಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ. ಲೈಬೀರಿಯನ್ ಧ್ವಜದ ಹಡಗನ್ನು ಸೊಮಾಲಿಯಾದಿಂದ ಅಪಹರಿಸುವ ಯತ್ನ ನಡೆದಿದೆ. ಹಡಗಿನ ಹೆಸರು 'ಎಂವಿ ಲೀಲಾ ನಾರ್ಫೋಕ್' ಎಂದು ಹೇಳಲಾಗಿದ್ದು, ಅದರಲ್ಲಿ 15 ಭಾರತೀಯ ಸಿಬ್ಬಂದಿಯೂ ಇದ್ದರು. ಸದ್ಯ, ಭಾರತೀಯ ನೌಕಾಪಡೆಯು ಹಡಗಿನ ಮೇಲೆ ತೀವ್ರ ನಿಗಾ ಇರಿಸಿದ್ದು, ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದೆ.

ನೌಕಾಪಡೆಯು ಸಿಬ್ಬಂದಿಯೊಂದಿಗೆ ಸಂವಹನ ಸಾಧಿಸಿದ್ದು, ಅವರು ಸುರಕ್ಷಿತವಾಗಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್​ಎಸ್ ಚೆನ್ನೈ ಅನ್ನು ಅಪಹರಣಕ್ಕೊಳಗಾದ ಹಡಗಿನ ಕಡೆಗೆ ರವಾನಿಸಲಾಗಿದೆ. ಹಡಗಿನ ಮೇಲೆ ವಿಮಾನಗಳಿಂದಲೂ ನಿಗಾ ಇಡಲಾಗಿದೆ. ನೌಕಾಪಡೆಗೆ ಜನವರಿ 4 ರ ಸಂಜೆ ಹಡಗಿನಿಂದ ಸಂದೇಶ ಲಭಿಸಿತ್ತು. ಕೆಲ ಅಪರಿಚಿತ ಶಸ್ತ್ರಸಜ್ಜಿತ ಸಿಬ್ಬಂದಿ ಹಡಗಿನಲ್ಲಿ ಕಂಡುಬಂದ ಬಗ್ಗೆ ಮಾಹಿತಿ ಲಭ್ಯವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಡಗಿನ ನೆರವಿಗೆ ಐಎನ್‌ಎಸ್ ಚೆನ್ನೈ ಆಗಮಿಸುತ್ತಿದೆ. ಅಲ್ಲದೆ, ಇತರ ಏಜೆನ್ಸಿಗಳು/ಎಂಎನ್‌ಎಫ್‌ ಜೊತೆ ಸೇರಿಕೊಂಡು ಒಟ್ಟಾರೆ ಪರಿಸ್ಥಿತಿಯ ಬಗ್ಗೆ ನಿಕಟ ಮೇಲ್ವಿಚಾರಣೆ ನಡೆದಿದೆ. ಭಾರತೀಯ ನೌಕಾಪಡೆಯು ಅಂತಾರಾಷ್ಟ್ರೀಯ ಪಾಲುದಾರರು ಮತ್ತು ಸ್ನೇಹಪರ ವಿದೇಶಿ ದೇಶಗಳೊಂದಿಗೆ ಈ ಪ್ರದೇಶದಲ್ಲಿ ಮರ್ಚೆಂಟ್ ಶಿಪ್ಪಿಂಗ್‌ನ ಸುರಕ್ಷತೆ ಬಗ್ಗೆ ಬದ್ಧವಾಗಿದೆ ಎಂದು ನೌಕಾಪಡೆ ತಿಳಿಸಿದೆ.

ಅಮೆರಿಕನ್ ನೌಕಾಪಡೆಯ ಸೆಂಟ್ರಲ್ ಕಮಾಂಡ್ ಪ್ರಕಾರ, ನವೆಂಬರ್‌ನಿಂದ ಕೆಂಪು ಸಮುದ್ರದ ಪ್ರದೇಶದಲ್ಲಿ ಸುಮಾರು ಎರಡು ಡಜನ್ ವ್ಯಾಪಾರಿ ಹಡಗುಗಳ ಮೇಲೆ ದಾಳಿ ಮಾಡಲಾಗಿದೆ. ಇದರಲ್ಲಿ ಹಡಗು ವಿರೋಧಿ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನೂ ಬಳಸಲಾಗುತ್ತಿದೆ. ಈ ದಾಳಿಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ನೌಕಾಪಡೆಯು ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯಲ್ಲಿ ಸುರಕ್ಷತಾ ಕ್ರಮ ಹೆಚ್ಚಿಸಿದೆ. ನೌಕಾಪಡೆಯ ಕಣ್ಗಾವಲು ವಿಮಾನಗಳು ಈ ಪ್ರದೇಶದಲ್ಲಿ ನಿರಂತರವಾಗಿ ನಿಗಾ ಇರಿಸಿವೆ. ಇದರೊಂದಿಗೆ, ಯುದ್ಧನೌಕೆಗಳಲ್ಲಿ ನಿಯೋಜನೆಗೊಂಡಿರುವ ಮೆರೈನ್ ಕಮಾಂಡೋಗಳು ಸಹ ಗಲ್ಫ್ ಆಫ್ ಅಡೆನ್ ಬಳಿ ಹಡಗುಗಳನ್ನು ನಿಲ್ಲಿಸಿ ತಪಾಸಣೆ ಮುಂದುವರೆಸಿದ್ದಾರೆ.

ಓದಿ: ಹೌತಿ ಬಂಡುಕೋರರು 'ಗ್ಯಾಲಕ್ಸಿ ಲೀಡರ್‌ಶಿಪ್' ಹಡಗು​​ ಹೈಜಾಕ್ ಮಾಡಿದ್ದು ಹೇಗೆ? ಭಯಾನಕ ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.