ನವದೆಹಲಿ: ದೇಶದ ಆರ್ಥಿಕತೆಯನ್ನು ಹೇಗೆ ನಿಭಾಯಿಸಬೇಕೆಂದು ನಮ್ಮ ಸರ್ಕಾರಕ್ಕೆ ಚೆನ್ನಾಗಿ ಗೊತ್ತಿದೆ. ಹಣಕಾಸಿನ ಸ್ಥಿತಿಗತಿಯ ಬಗ್ಗೆ ಅಂಕಿಅಂಶಸಹಿತ ಹೇಳುವೆ ಕೇಳಿ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಯಲ್ಲಿ ಗುಡುಗಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ಹಾವಳಿ ನಡುವೆಯೂ ನಾವು ತೆರಿಗೆ ಹೆಚ್ಚಳ ಮಾಡಿಲ್ಲ. ಆದರೆ, ಜಗತ್ತಿನ 32 ರಾಷ್ಟ್ರಗಳು ತೆರಿಗೆ ಹೆಚ್ಚಿಸಿವೆ. ಆರ್ಥಿಕತೆಯನ್ನು ಹೇಗೆ ನಿಭಾಯಿಸಬೇಕೆಂಬುವುದು ಸರ್ಕಾರಕ್ಕೆ ಗೊತ್ತಿದೆ. ನಾನು ಆ ಎಲ್ಲ ಅಂಕಿ-ಅಂಶಗಳನ್ನು ಹೇಳಲು ಇಚ್ಛಿಸುವೆ ಎಂದು ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಪ್ರಯತ್ನಿಸಿದರು. ಇದೇ ವೇಳೆ, ಕೇಂದ್ರ ಸರ್ಕಾರವು ಆರ್ಥಿಕಾಭಿವೃದ್ಧಿಗೆ ಒತ್ತು ಕೊಡುವುದರ ಜೊತೆಗೆ ಹಣದುಬ್ಬರದಿಂದ ಹೊರಬರಲು ಸಕಲ ರೀತಿಯಲ್ಲೂ ಪ್ರಯತ್ನಿಸುತ್ತಿದೆ ಎಂದರು.
ದೇಶದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಹೆಚ್ಚಳವಾಗಿದೆ. ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ ಒಟ್ಟಾರೆ 500.5 ಬಿಲಿಯನ್ ಡಾಲರ್ ಹೂಡಿಕೆಯಾಗುವ ಮೂಲಕ ಶೇ.65ರಷ್ಟು ಹೆಚ್ಚಳವಾಗಿದೆ. 2021ರ ಆರ್ಥಿಕ ವರ್ಷದಲ್ಲಿ 81.72 ಬಿಲಿಯನ್ ಡಾಲರ್‌ನಷ್ಟು ಎಫ್ಡಿಐ ದೇಶಕ್ಕೆ ಹರಿದು ಬಂದಿದೆ. ಇದರ ಹಿಂದಿನ ವರ್ಷ 74 ಬಿಲಿಯನ್ ಡಾಲರ್ ಎಫ್ಡಿಐ ಇತ್ತು. ಎಫ್ಡಿಐ ಸ್ವೀಕರಿಸುವ ವಿಶ್ವದ ಐದು ಅಗ್ರ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದು ನಿರ್ಮಲಾ ಸೀತಾರಾಮನ್ ವಿವರಿಸಿದರು.
ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರಕ್ಕಾಗಿಯೇ 15 ಸಾವಿರ ಕೋಟಿ ರೂ.ಗಳ ತುರ್ತು ಅನುದಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಎರಡನೇ ಹಂತದಲ್ಲಿ ಇದೇ ಆರೋಗ್ಯ ವಲಯಕ್ಕೆ 23 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಈಗ ಉಕ್ರೇನ್ ಯುದ್ಧ ಕೂಡ ಸಾಂಕ್ರಾಮಿಕದ ರೀತಿಯಲ್ಲಿ ಎಲ್ಲ ದೇಶಗಳ ಮೇಲೆ ದುಷ್ಪರಿಣಾಮ ಬೀರಿದೆ. ಪೂರೈಕೆ ವ್ಯವಸ್ಥೆಯನ್ನೇ ಈ ಯುದ್ಧ ಕಡಿದು ಹಾಕಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ದುಬೈ ಬಳಿಕ ಚಿನ್ನ ಕಳ್ಳಸಾಗಣೆಗೆ ಹೊಸ ಮಾರ್ಗ: ದೆಹಲಿಗೆ ಬಂದಿಳಿದ ಕೀನ್ಯಾ ಪ್ರಜೆಗಳಲ್ಲಿತ್ತು 15 ಕೆಜಿ ಬಂಗಾರ!