ETV Bharat / bharat

ಮಾಲ್ಡೀವ್ಸ್ ವಿರುದ್ಧ ಕಠಿಣ ನಿಲುವು ತಳೆದ ಭಾರತ; ಮಾಲ್ಡೀವ್ಸ್‌ನ ಹೈಕಮಿಷನರ್‌ಗೆ ಸಮನ್ಸ್

author img

By PTI

Published : Jan 8, 2024, 12:58 PM IST

India-Maldives: ಮಾಲ್ಡೀವ್ಸ್ ವಿರುದ್ಧ ಭಾರತ ಕಠಿಣ ನಿಲುವು ತಳೆದಿದೆ. ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ನಂತರ ಭಾರತ ಮಾಲ್ಡೀವ್ಸ್‌ನ ಹೈಕಮಿಷನರ್‌ಗೆ ಸಮನ್ಸ್ ನೀಡಿದೆ.

India Maldives row  Maldivian envoy  envoy summon  ಹೈಕಮಿಷನರ್‌ಗೆ ಸಮನ್ಸ್  ಕಠಿಣ ನಿಲುವು  ಆಕ್ಷೇಪಾರ್ಹ ಹೇಳಿಕೆ
ಮಾಲ್ಡೀವ್ಸ್ ವಿರುದ್ಧ ಕಠಿಣ ನಿಲುವು ತಳೆದ ಭಾರತ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಆಕ್ಷೇಪಾರ್ಹ ಹೇಳಿಕೆಗಳು ಮಾಲ್ಡೀವ್ಸ್ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಈಗ ಭಾರತ ಸರ್ಕಾರವು ಮಾಲ್ಡೀವ್ಸ್‌ನ ಹೈಕಮಿಷನರ್‌ಗೆ ಸಮನ್ಸ್ ನೀಡಿದೆ. ಭಾರತ ಸರ್ಕಾರದಿಂದ ಸಮನ್ಸ್ ಪಡೆದ ನಂತರ, ಮಾಲ್ಡೀವ್ಸ್ ಹೈ ಕಮಿಷನರ್ ಇಬ್ರಾಹಿಂ ಸಾಹಿಬ್ ಅವರು ಭಾರತೀಯ ವಿದೇಶಾಂಗ ಸಚಿವಾಲಯ ತಲುಪಿದರು. ಸ್ಪಷ್ಟನೆ ನೀಡಿದ ಬಳಿಕ ಅವರು ಇಲ್ಲಿಂದ ನಿರ್ಗಮಿಸಿದರು. ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯ ತೀವ್ರ ಕಳವಳ ವ್ಯಕ್ತಪಡಿಸಿದೆ.

ಮಾಲ್ಡೀವ್ಸ್‌ನ ಮಹಿಳಾ ಸಚಿವೆ ಮರಿಯಮ್ ಶಿಯುನಾ ಅವರು ಪ್ರಧಾನಿ ಮೋದಿಯವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದರು. ಭಾರತವು ಮಾಲ್ಡೀವ್ಸ್‌ನ ಮೊಹಮ್ಮದ್ ಮುಯಿಝೂ ಸರ್ಕಾರದೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿತ್ತು. ಸಚಿವರ ಹೇಳಿಕೆಗೆ ಮಾಲೆಯಲ್ಲಿರುವ ಭಾರತೀಯ ಹೈಕಮಿಷನರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಭಾರತದ ಆಕ್ಷೇಪದ ನಂತರ, ಮಾಲ್ಡೀವ್ಸ್ ಸರ್ಕಾರ ಇದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿಕೆ ನೀಡಿತು.

ನಂತರ, ಭಾರತದ ತೀವ್ರ ಆಕ್ಷೇಪದ ನಂತರ ಕ್ರಮ ಕೈಗೊಂಡ ಮಾಲ್ಡೀವ್ಸ್ ಸರ್ಕಾರವು ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಸಚಿವೆ ಮರ್ಯಾಮ್ ಶಿಯುನಾ, ಮಲ್ಶಾ ಷರೀಫ್ ಮತ್ತು ಮಹಜೂಮ್ ಮಜೀದ್ ಅವರನ್ನು ಅಮಾನತುಗೊಳಿಸಿತು. ಮಾಲ್ಡೀವ್ಸ್ ಸರ್ಕಾರದ ವಕ್ತಾರ ಸಚಿವ ಇಬ್ರಾಹಿಂ ಖಲೀಲ್ ಅವರು ವಿವಾದಾತ್ಮಕ ಕಾಮೆಂಟ್‌ಗಳಿಗೆ ಕಾರಣವಾದ ಮೂವರು ಸಚಿವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅವರ ಸ್ಥಾನದಿಂದ ಅಮಾನತುಗೊಳಿಸಲಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದರು.

ಈ ಇಡೀ ವಿಷಯವು ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಭೇಟಿಯ ನಂತರ ಪ್ರಾರಂಭವಾಯಿತು. ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ, ಈ ದ್ವೀಪಕ್ಕೆ ಭೇಟಿ ನೀಡಲು ಯೋಜಿಸುವಂತೆ ಅವರು ಭಾರತೀಯರಿಗೆ ಮನವಿ ಮಾಡಿದ್ದರು. ಇದರ ನಂತರ, ಮಾಲ್ಡೀವ್ಸ್‌ನ ಯುವ ಸಬಲೀಕರಣದ ಉಪ ಸಚಿವೆ ಮರಿಯಮ್ ಶಿಯುನಾ ಅವರು ಪ್ರಧಾನಿ ಮೋದಿಯವರ ಪೋಸ್ಟ್‌ಗೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದರು. ಆದರೆ, ಟ್ವೀಟ್ ಟೀಕೆಗೆ ಗುರಿಯಾದ ನಂತರ, ಅವರು ಅದನ್ನು ಡಿಲಿಟ್​ ಮಾಡಿದ್ದರು.

ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್‌ಗೆ ಭೇಟಿ ನೀಡುತ್ತಾರೆ. 2018 ರಲ್ಲಿ ಭಾರತದಿಂದ ಅನೇಕ ಪ್ರವಾಸಿಗರು ಮಾಲ್ಡೀವ್ಸ್‌ಗೆ ತಲುಪಿದ್ದರು. ಭಾರತವು ಮಾಲ್ಡೀವ್ಸ್‌ಗೆ ಪ್ರವಾಸಿಗರ ಆಗಮನದ 5 ನೇ ಅತಿದೊಡ್ಡ ಮೂಲವಾಗಿದೆ. ಮಾಹಿತಿಯ ಪ್ರಕಾರ, 14,84,274 ಪ್ರವಾಸಿಗರಲ್ಲಿ ಸುಮಾರು 6.1% (90,474 ಕ್ಕಿಂತ ಹೆಚ್ಚು) ಪ್ರವಾಸಿಗರು ಭಾರತದಿಂದ ಬಂದವರು. 2018 ಕ್ಕೆ ಹೋಲಿಸಿದರೆ 2019ರಲ್ಲಿ ಭಾರತದಿಂದ ಮಾಲ್ಡೀವ್ಸ್‌ಗೆ ಹೋಗುವ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದೆ. 2019 ರಲ್ಲಿ 1,66,030 ಪ್ರವಾಸಿಗರು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು.

ಇದನ್ನೂ ಓದಿ: ನನ್ನ ಮುಂದಿನ ಪ್ರವಾಸ ಲಕ್ಷದ್ವೀಪಕ್ಕೆ ಎಂದ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.