ದೇಶಾದ್ಯಂತ 74ನೇ ಗಣರಾಜ್ಯೋತ್ಸವ ಸಡಗರ: ಎಲ್ಲರ ಚಿತ್ತ ದೆಹಲಿಯ ಕರ್ತವ್ಯ ಪಥದತ್ತ..

author img

By

Published : Jan 26, 2023, 8:36 AM IST

Updated : Jan 26, 2023, 9:21 AM IST

republic day

ದೇಶವು ಇಂದು ತನ್ನ 74 ನೇ ಗಣರಾಜ್ಯೋತ್ಸವವನ್ನು ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದಲ್ಲಿ ಅತ್ಯಂತ ವೈಭವದಿಂದ ಆಚರಿಸಲಿದೆ. ಈಜಿಪ್ಟ್ ಅಧ್ಯಕ್ಷರು ಈ ವರ್ಷದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದಾರೆ.

ನವದೆಹಲಿ: ಇಂದು ಭಾರತಕ್ಕೆ 74 ನೇ ಗಣರಾಜ್ಯೋತ್ಸವದ ಸಂಭ್ರಮ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಿಸಿದಂತೆ ಜನರ ಸಹಭಾಗಿತ್ವದಲ್ಲಿ ಉತ್ಸವ ಕಳೆಗಟ್ಟಲಿದೆ. ಗಣತಂತ್ರ ಆಚರಣೆಗೆ ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ತವ್ಯ ಪಥದಲ್ಲಿ ಬುಡಕಟ್ಟು ಜನಾಂಗದ ಮೊದಲ ಮತ್ತು ಭಾರತದ ಎರಡನೇ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡುವರು.

ಕಾರ್ಯಕ್ರಮ ಹೀಗಿರಲಿದೆ..: ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಈಜಿಪ್ಟ್‌​ನ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಬುಧವಾರವೇ ಭಾರತಕ್ಕೆ ಆಗಮಿಸಿದ್ದು, ಅವರಿಗೆ ಪ್ರಧಾನಿ ಮೋದಿ ಆತ್ಮೀಯ ಸ್ವಾಗತ ನೀಡಿದ್ದರು. ಇಂದು ಬೆಳಗ್ಗೆ 10.30ಕ್ಕೆ ಗಣರಾಜ್ಯೋತ್ಸವ ಪೆರೇಡ್​ ಆರಂಭವಾಗಲಿದೆ. ದೇಶದ ಸೇನೆಯ ಸಾಮರ್ಥ್ಯ ಪ್ರದರ್ಶನ ಮತ್ತು ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ಜರುಗಲಿದೆ. ಇದಕ್ಕೂ ಮುನ್ನ ಪ್ರಧಾನಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ದೇಶಕ್ಕಾಗಿ ಮಡಿದ ವೀರಯೋಧರಿಗೆ ಮಾಲಾರ್ಪಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಇದಾದ ಬಳಿಕ ಪ್ರಧಾನಿ ಸೇರಿದಂತೆ ಇತರೆ ಗಣ್ಯರು ಪರೇಡ್‌ ವೀಕ್ಷಿಸಲು ಕರ್ತವ್ಯ ಪಥ್​ ಮೂಲಕ ಮುಖ್ಯ ವೇದಿಕೆಗೆ ತೆರಳಲಿದ್ದಾರೆ.

ನಿಯಮದಂತೆ, ರಾಷ್ಟಗೀತೆಯ ನಂತರ ವಿಜೃಂಭಣೆಯ 21 ಗನ್​ ಸೆಲ್ಯೂಟ್​ನೊಂದಿಗೆ ರಾಷ್ಟ್ರಧ್ವಜಾರೋಹಣ ನಡೆಯಲಿದೆ. ರಾಷ್ಟ್ರಪತಿ ಗೌರವ ವಂದನೆ ಸ್ವೀಕರಿಸುವುದರೊಂದಿಗೆ ಪರೇಡ್​ ಆರಂಭವಾಗುತ್ತದೆ. ಅತಿ ವಿಶಿಷ್ಟ ಸೇವಾ ಪದಕ ಪಡೆದ ಪರೇಡ್​ ಕಮಾಂಡರ್​, ಲೆಫ್ಟಿನೆಂಟ್​ ಜನರಲ್ ಧೀರಜ್​ ಸೇಠ್​ ನೇತೃತ್ವದಲ್ಲಿ ಪರೇಡ್​ ನಡೆಯಲಿದೆ. ​ಮೇಜರ್​ ಜನರಲ್​ ಭವನೀಶ್​ ಕುಮಾರ್​ ಪೆರೇಡ್​ನ ಸೆಕೆಂಡ್​ ಇನ್​ ಕಮಾಂಡ್​ ಆಗಿರುತ್ತಾರೆ. ಅತ್ಯುನ್ನತ ಶೌರ್ಯ ಪ್ರಶಸ್ತಿ ಸೇರಿದಂತೆ ಪರಮವೀರ ಚಕ್ರ ಮತ್ತು ಅಶೋಕ ಚಕ್ರ ವಿಜೇತರು ಇವರನ್ನು ಹಿಂಬಾಲಿಸಲಿದ್ದಾರೆ. ಇದೇ ಮೊದಲ ಬಾರಿಗೆ ಈಜಿಪ್ಟ್​ ದೇಶದ 144 ಸೈನಿಕ ಸದಸ್ಯರ ತಂಡ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ. ಇದರ ನೇತೃತ್ವವನ್ನು ಕರ್ನಲ್ ಮಹಮೂದ್ ಮೊಹಮ್ಮದ್ ಅಬ್ದೆಲ್ ಫತ್ತಾಹ್ ಎಲ್ ಖರಾಸಾವಿ ವಹಿಸುವರು.

ಮತ್ತೊಂದೆಡೆ, ಉತ್ತರ ಪ್ರದೇಶದಲ್ಲಿ ಕೊಳೆಗೇರಿಗಳಲ್ಲಿ ವಾಸಿಸುವ 40ಕ್ಕೂ ಹೆಚ್ಚು ಮಕ್ಕಳು ಗಣತಂತ್ರದ ಪರೇಡ್‌ನಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆ ಮತ್ತು ದೇಶ ಪ್ರೇಮವನ್ನು ಪ್ರದರ್ಶಿಸಲು ಜೀವಮಾನದಲ್ಲೇ ಮೊದಲ ಅವಕಾಶ ಪಡೆಯಲಿದ್ದಾರೆ. 11ರಿಂದ 18ರ ವಯಸ್ಸಿನ ಮಕ್ಕಳು ಪರೇಡ್‌ನಲ್ಲಿ ಭಿಕ್ಷಾಟನೆಯಿಂದ ಶಿಕ್ಷಣದತ್ತ ಎಂಬ ಘೋಷಣಾ ಫಲಕಗಳನ್ನು ಹಿಡಿದು ಪಾಲ್ಗೊಳ್ಳಲಿದ್ದಾರೆ. ಜನವರಿ 23, ನೇತಾಜಿ ಸುಭಾಷ್​ ಚಂದ್ರ ಬೋಸ್​ ಜನ್ಮದಿನದಂದು ಪ್ರಾರಂಭಗೊಂಡ ಕಾರ್ಯಕ್ರಮಗಳು ಜನವರಿ 30 ರ ಹುತಾತ್ಮ ದಿನದವರೆಗೂ ಮುಂದುವರೆಯಲಿದೆ.

ಕರ್ನಾಟಕದ ‘ನಾರಿ ಶಕ್ತಿ’ ಪ್ರದರ್ಶನ: ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕ ರಾಜ್ಯದ ಪರವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸ್ತ್ರೀ ಸಬಲೀಕರಣವನ್ನು ಪ್ರತಿಬಿಂಬಿಸುವ ‘ನಾರಿ ಶಕ್ತಿʼ ಸ್ತಬ್ಧಚಿತ್ರವು ಪ್ರದರ್ಶನಗೊಳ್ಳಲಿದೆ. ಸತತವಾಗಿ ಹದಿನಾಲ್ಕು ವರ್ಷಗಳಿಂದ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಂಡ ದೇಶದ ಏಕೈಕ ರಾಜ್ಯವೆಂಬ ಹೆಗ್ಗಳಿಕೆಯನ್ನು ಕರ್ನಾಟಕ ತನ್ನದಾಗಿಸಿಕೊಳ್ಳಲಿದೆ.

ಸುದರ್ಶನ್ ಪಟ್ನಾಯಕ್ ಮರಳು ಕಲೆ: ಪ್ರಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್​ ಪಟ್ನಾಯಕ್​, ಮರಳಿನಲ್ಲಿ ಚಿತ್ರಿಸುವ ಮೂಲಕ ಗಣರಾಜ್ಯೋತ್ಸವಕ್ಕೆ ಶುಭಕೋರಿದ್ದಾರೆ. ಈ ಅದ್ಭುತ ಮರಳು ಕಲೆಯನ್ನು ಪುರಿ ಬೀಚ್​ನಲ್ಲಿ ನಿರ್ಮಿಸಿದ್ದಾರೆ. ಅದರಲ್ಲಿ '74 ನೇ ಗಣರಾಜ್ಯೋತ್ಸವದ ಶುಭಾಶಯಗಳು. ಐ ಲವ್​ ಮೈ ಇಂಡಿಯಾ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಗಣರಾಜ್ಯೋತ್ಸವದ ಶುಭಾಶಯಗಳು ಭಾರತ!: ವಿಭಿನ್ನ ಕಲಾಕೃತಿ ಮೂಲಕ ಶುಭ ಕೋರಿದ ಗೂಗಲ್ ಡೂಡಲ್

Last Updated :Jan 26, 2023, 9:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.