ETV Bharat / bharat

ಸುಖೋಯ್ - ಮಿರಾಜ್ ಯುದ್ಧ ವಿಮಾನಗಳ ಅಪಘಾತ: ವಿಂಗ್ ಕಮಾಂಡರ್, ಕನ್ನಡಿಗ ಹನುಮಂತರಾವ್ ಸಾರಥಿ ಮರಣ

author img

By

Published : Jan 28, 2023, 8:17 PM IST

Updated : Jan 29, 2023, 12:22 PM IST

ಮಧ್ಯಪ್ರದೇಶದ ಗ್ವಾಲಿಯರ್ ವಾಯು ನೆಲೆಯಿಂದ ಟೇಕ್​ ಆಫ್​ ಆಗಿದ್ದ ಸುಖೋಯ್ 30 ಮತ್ತು ಮಿರಾಜ್ 2000 ಯುದ್ಧ ವಿಮಾನಗಳ ಡಿಕ್ಕಿ ಹೊಡೆದು ಪತನಗೊಂಡಿವೆ. ಇದರಲ್ಲಿ ಕರ್ನಾಟಕದ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಮೃತಪಟ್ಟಿದ್ದಾರೆ.

IAF Sukhoi-Mirage 2000 collision
ಸುಖೋಯ್ - ಮಿರಾಜ್ ಯುದ್ಧ ವಿಮಾನಗಳ ಅಪಘಾತ: ಕರ್ನಾಟಕದ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಮರಣ

ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಮನೆಯಲ್ಲಿ ಆವರಿಸಿದ ದುಃಖ

ನವದೆಹಲಿ/ಬೆಳಗಾವಿ: ಮಧ್ಯಪ್ರದೇಶದ ಗ್ವಾಲಿಯರ್ ವಾಯು ನೆಲೆಯ ಬಳಿ ಇಂದು ಸಂಭವಿಸಿದ ಭಾರತೀಯ ವಾಯು ಪಡೆಯ ಯುದ್ಧ ವಿಮಾನಗಳ ಅಪಘಾತದಲ್ಲಿ ಕರ್ನಾಟಕ ರಾಜ್ಯದ ಬೆಳಗಾವಿ ಮೂಲದ ಪೈಲಟ್​ ಮರಣ ಹೊಂದಿದ್ದಾರೆ. ಮೃತ ಪೈಲಟ್​ನನ್ನು ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಎಂದು ಗುರುತಿಸಲಾಗಿದೆ. ಹನುಮಂತರಾವ್ ಅವರು ಮಿರಾಜ್ 2000 ಯುದ್ಧ ವಿಮಾನವನ್ನು ಹಾರಾಟ ಮಾಡುತ್ತಿದ್ದರು ಎಂದು ವಾಯು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಬೆಳಗ್ಗೆ ವಾಯು ಪಡೆಯ ಯುದ್ಧ ಜೆಟ್​ಗಳಾದ ಸುಖೋಯ್ 30 ಮತ್ತು ಮಿರಾಜ್ 2000 ವಿಮಾನಗಳ ನಡುವೆ ಆಕಾಶದಲ್ಲೇ ಅಪಘಾತ ಸಂಭವಿಸಿತ್ತು. ಆಗ ಈ ಘಟನೆ ಮಾಹಿತಿ ಹಂಚಿಕೊಂಡಿದ್ದ ಭಾರತೀಯ ವಾಯು ಪಡೆಯು ಮೂವರು ಪೈಲಟ್​​ಗಳ ಪೈಕಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿತ್ತು. ಇದಾದ ಬಳಿಕ ಇದರಲ್ಲಿ ಇಬ್ಬರು ಪೈಲಟ್​​ಗಳು ಸುರಕ್ಷಿತವಾಗಿದ್ದು, ಮಾರಣಾಂತಿಕ ಗಾಯಗೊಂಡಿದ್ದ ಮತ್ತೊಬ್ಬ ಪೈಲಟ್​ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು.

ಆದರೆ, ತಕ್ಷಣಕ್ಕೆ ಮೃತ ಈ ಪೈಲಟ್​ನ ಗುರುತು ಪತ್ತೆಯಾಗಿರಲಿಲ್ಲ. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಮತೃ ಪೈಲಟ್​ ನನ್ನು ಕರ್ನಾಟಕದ ಬೆಳಗಾವಿ ಮೂಲದ 34 ವರ್ಷದ ಹನುಮಂತರಾವ್ ಸಾರಥಿ ಎಂದು ಬಹಿರಂಗ ಪಡಿಸಲಾಗಿದೆ. ವಿಂಗ್ ಕಮಾಂಡರ್ ಆಗಿದ್ದ ಹನುಮಂತರಾವ್ ಅವರು ಮಿರಾಜ್ 2000 ಯುದ್ಧ ವಿಮಾನವನ್ನು ಹಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ: ಮತ್ತೊಂದೆಡೆ, ಬೆಳಗಾವಿಯ ಹನುಮಂತರಾವ್ ಸಾರಥಿ ಅವರ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹನುಮಂತರಾವ್ ಅವರು ತಂದೆ, ತಾಯಿ, ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಗಣೇಶಪುರದಲ್ಲಿರುವ ಅವರ ಮನೆಗೆ ಬೆಳಗಾವಿಯ ವಾಯು ಪಡೆ ತರಬೇತಿ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿದ ಕುಟುಂಬಸ್ಥರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

IAF Sukhoi-Mirage 2000 collision
ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ

ನಾಳೆ ಪಾರ್ಥಿವ ಶರೀರ ಆಗಮನ ಸಾಧ್ಯತೆ: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲೇ ನೆಲೆಸಿದ್ದ ಹನುಮಂತರಾವ್, ಎಂದಿನಂತೆ ಅಭ್ಯಾಸಕ್ಕಾಗಿ ವಿಮಾನ ಹಾರಿಸಿದ್ದರು. ಈ ವೇಳೆ ಎರಡು ವಿಮಾನಗಳ ನಡುವೆ ಸಂಭವಿಸಿ ಅವರು ಮೃತಪಟ್ಟಿದ್ದರು. ಭಾನುವಾರ ಬೆಳಿಗ್ಗೆ ವಿಶೇಷ ವಿಮಾನದಲ್ಲಿ ಅವರ ಪಾರ್ಥಿವ ಶರೀರ ಬೆಳಗಾವಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.‌ ಹನುಮಂತರಾವ್ ಅವರ ತಂದೆ ರೇವಣಸಿದ್ದಪ್ಪ, ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಸಹೋದರ ಪ್ರವೀಣ ಕೂಡ ಭಾರತೀಯ ವಾಯುಪಡೆಯಲ್ಲಿ ಗ್ರೂಪ್​ ಕ್ಯಾಪ್ಟನ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಡೆದಿದ್ದೇನು?: ಮಧ್ಯಪ್ರದೇಶದಲ್ಲಿ ಭಾರತೀಯ ವಾಯು ಪಡೆಯ ಯುದ್ಧ ವಿಮಾನಗಳು ಇಂದು ಬೆಳಗ್ಗೆ ದೈನಂದಿನ ಹಾರಾಟ ತರಬೇತಿಯಲ್ಲಿ ತೊಡಗಿದ್ದವು. ಗ್ವಾಲಿಯರ್ ವಾಯು ನೆಲೆಯಿಂದ ಸುಖೋಯ್ 30 ಮತ್ತು ಮಿರಾಜ್ 2000 ಎರಡೂ ವಿಮಾನಗಳು ಟೇಕ್​ ಆಫ್​ ಆಗಿದ್ದವು. ಇದಾದ ನಂತರ ಮೊರೆನಾ ಜಿಲ್ಲೆಯಲ್ಲಿ ಎರಡು ಐಎಎಫ್ ಯುದ್ಧ ವಿಮಾನಗಳ ನಡುವೆ ಅಪಘಾತ ಸಂಭವಿಸಿತ್ತು. ಈ ಡಿಕ್ಕಿಯಿಂದ ವಿಮಾನಗಳ ಅವಶೇಷಗಳು ಎರಡು ಪ್ರತ್ಯೇಕ ಸ್ಥಳಗಳಲ್ಲಿ ಬಿದ್ದಿದ್ದವು.

ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಅವಶೇಷಗಳು ಪತ್ತೆ: ತರಬೇತಿ ಹಾರಾಟಕ್ಕೆ ಆಕಾಶದಲ್ಲಿ ಸುತ್ತಿದ್ದ ವಿಮಾನಗಳು ಗ್ವಾಲಿಯರ್ ವಾಯುನೆಲೆಯಿಂದ ಸ್ವಲ್ಪ ದೂರದಲ್ಲೇ ಡಿಕ್ಕಿಯಾಗಿ ಪತನಗೊಂಡಿದ್ದವು. ಇದರಿಂದ ಈ ವಿಮಾನಗಳು ಬೇರೆ-ಬೇರೆ ಪ್ರದೇಶದಲ್ಲಿ ಬಿದ್ದಿದ್ದವು. ಒಂದು ವಿಮಾನದ ಅವಶೇಷಗಳು ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಬಿದ್ದಿದ್ದರೆ, ಮತ್ತೊಂದು ವಿಮಾನದ ಅವಶೇಷಗಳು ನೆರೆಯ ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ಪತ್ತೆಯಾಗಿದ್ದವು. ಹೀಗಾಗಿ ಆರಂಭದಲ್ಲಿ ಎರಡೂ ವಿಮಾನಗಳ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿತ್ತು.

ಆದರೆ, ಈ ಘಟನೆ ಬಗ್ಗೆ ಮಾಹಿತಿ ನೀಡಿದ ಭಾರತೀಯ ವಾಯು ಪಡೆಯು ಅಧಿಕಾರಿಗಳು, ಕೇವಲ ಒಂದು ಅಪಘಾತವಾಗಿದ್ದು, ಎರಡು ಯುದ್ಧ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದೆ. ಈ ಡಿಕ್ಕಿಯಿಂದ ಅವಶೇಷಗಳು ಎರಡು ವಿಭಿನ್ನ ಸ್ಥಳಗಳಲ್ಲಿ ಬಿದ್ದಿವೆ. ಮಿರಾಜ್‌ನ ಅವಶೇಷಗಳು ಮಧ್ಯಪ್ರದೇಶದ ಮೊರೆನಾದಲ್ಲಿ ಬಿದ್ದಿದ್ದರೆ, ಸುಖೋಯ್‌ನ ಅವಶೇಷಗಳು ರಾಜಸ್ಥಾನದ ಭರತ್‌ಪುರದಲ್ಲಿ ಬಿದ್ದಿವೆ ಎಂದು ಸ್ಪಷ್ಟಪಡಿಸಿದ್ದಾರೆ.

  • The IAF deeply regrets to inform that Wg Cdr Hanumanth Rao Sarathi suffered fatal injuries during the accident. All air warriors and the fraternity stand strongly with the bereaved family.

    — Indian Air Force (@IAF_MCC) January 28, 2023 " class="align-text-top noRightClick twitterSection" data=" ">

ವಾಯು ಪಡೆಯಿಂದ ಟ್ವೀಟ್​: ಮತ್ತೊಂದೆಡೆ, ಯುದ್ಧ ವಿಮಾನಗಳ ಅಪಘಾತದ ಬಗ್ಗೆ ಭಾರತೀಯ ವಾಯು ಪಡೆಯು ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಟ್ವೀಟ್​ ಮಾಡಿ, ಇಂದು ಬೆಳಗ್ಗೆ ಗ್ವಾಲಿಯರ್ ಬಳಿ ಐಎಎಫ್‌ನ ಎರಡು ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿವೆ. ವಿಮಾನಗಳು ದೈನಂದಿನ ಕಾರ್ಯಾಚರಣೆಯ ಹಾರಾಟ ತರಬೇತಿಯಲ್ಲಿದ್ದವು. ಇದರಲ್ಲಿ ಮೂವರು ಪೈಲಟ್‌ಗಳಲ್ಲಿ ಒಬ್ಬರಿಗೆ ಮಾರಣಾಂತಿಕ ಗಾಯಗಳಾಗಿವೆ. ಅಪಘಾತದ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿತ್ತು.

ಇದೇ ವೇಳೆ ಅಪಘಾತದಲ್ಲಿ ವಿಂಗ್ ಕಮಾಂಡರ್​ ಹನುಮಂತರಾವ್ ಸಾರಥಿ ಅವರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಲು ಭಾರತೀಯ ವಾಯು ಪಡೆಯು ತೀವ್ರವಾಗಿ ವಿಷಾದಿಸುತ್ತದೆ. ದುಃಖಿತ ಕುಟುಂಬದ ಬೆಂಬಲವಾಗಿ ಎಲ್ಲ ವಾಯು ಯೋಧರು ನಿಂತಿದ್ದಾರೆ ಎಂದು ಸಂಜೆ 4 ಗಂಟೆ ಸುಮಾರಿಗೆ ಮಾಡಿದ ಟ್ವೀಟ್​ನಲ್ಲಿ ವಾಯು ಪಡೆಯು ಹೇಳಿತ್ತು.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಸುಖೋಯ್​-30, ಮಿರಾಜ್​-2000 ಯುದ್ಧ ವಿಮಾನಗಳು ಪತನ.. ಒಬ್ಬ ಪೈಲಟ್​ ಸಾವು

Last Updated : Jan 29, 2023, 12:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.