ETV Bharat / bharat

ರಾಜ್ಯಕ್ಕೆ ಬರಲಿದೆ 3ನೇ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು; ಹೈದರಾಬಾದ್​-ಬೆಂಗಳೂರು ಮಧ್ಯೆ ಸಂಚಾರ

author img

By ETV Bharat Karnataka Team

Published : Sep 21, 2023, 2:07 PM IST

ಹೈದರಾಬಾದ್​-ಯಶವಂತಪುರ ಮಧ್ಯೆ ಸೆಪ್ಟೆಂಬರ್​ 25 ರಂದು ವಂದೇ ಭಾರತ್​ ರೈಲು ಸಂಚಾರ ಆರಂಭವಾಗಲಿದ್ದು, ಇದು ರಾಜ್ಯದ ಮೂರನೇ ರೈಲಾಗಲಿದೆ.

ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು
ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು

ಹೈದರಾಬಾದ್: ರಾಜ್ಯ ರಾಜಧಾನಿ ಬೆಂಗಳೂರಿಗೆ ಮತ್ತೊಂದು ವಂದೇ ಭಾರತ್​ ರೈಲು ಸಂಪರ್ಕ ಶುರುವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 24 ರಂದು ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಇದು ಎರಡು ಮಹಾನಗರಗಳಾದ ಹೈದರಾಬಾದ್ ಮತ್ತು ಬೆಂಗಳೂರನ್ನು ಸಂಪರ್ಕಿಸಲಿದ್ದು, ಸೆಪ್ಟೆಂಬರ್​ 25 ರಿಂದ ಅಧಿಕೃತ ಸಂಚಾರ ಆರಂಭಿಸಲಿದೆ.

ಹೈದರಾಬಾದ್​-ಬೆಂಗಳೂರು ಮಧ್ಯೆ ಸಂಚಾರ ಆರಂಭಿಸಲಿರುವ ಮೊದಲ ಮತ್ತು ಕರ್ನಾಟಕದ ಮೂರನೇ ವಂದೇ ಭಾರತ್​ ರೈಲು ಇದಾಗಲಿದೆ. ಈಗಾಗಲೇ ಮೈಸೂರು-ಚೆನ್ನೈ, ಬೆಂಗಳೂರು- ಧಾರವಾಡದ ಮಧ್ಯೆ ವಂದೇ ಭಾರತ ಎಕ್ಸ್​ಪ್ರೆಸ್​ ರೈಲು ಸಂಚಾರ ನಡೆಸುತ್ತಿವೆ. ಮೂರೂ ರೈಲುಗಳು ಬೆಂಗಳೂರು ಮಹಾನಗರಕ್ಕೆ ಸಂಪರ್ಕ ಕಲ್ಪಿಸುತ್ತವೆ.

ಟೆಕ್​ ಹಬ್​ ನಗರಗಳ ಮಧ್ಯೆ ಸಂಪರ್ಕ: ಈಗ ಆರಂಭವಾಗಲಿರುವ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಕಾಚೀಗುಡ ಮತ್ತು ಯಶವಂತಪುರದ ನಡುವೆ ಸಂಚರಿಸಲಿದೆ. ಈ ರೈಲು ಎರಡು ಟೆಕ್ ಹಬ್‌ ನಗರಗಳ ನಡುವಿನ 609 ಕಿಮೀ ದೂರವನ್ನು 8 ಗಂಟೆ 30 ನಿಮಿಷಗಳಲ್ಲಿ ಕ್ರಮಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

20703 ಸಂಖ್ಯೆಯ ರೈಲು ಕಾಚಿಗುಡದಿಂದ ಬೆಳಗ್ಗೆ 5:30ಕ್ಕೆ ಹೊರಟು ಮಧ್ಯಾಹ್ನ 2 ಗಂಟೆಗೆ ಯಶವಂತಪುರ ತಲುಪಲಿದೆ. ಮಹೆಬೂಬ್‌ನಗರ, ಕರ್ನೂಲ್, ಅನಂತಪುರ, ಧರ್ಮಾವರಂ ಮತ್ತು ಹಿಂದೂಪುರದಲ್ಲಿ ನಿಲುಗಡೆ ಇರಲಿದೆ. ಬಳಿಕ 20704 ಸಂಖ್ಯೆಯ ರೈಲು ಯಶವಂತಪುರದಿಂದ ಮಧ್ಯಾಹ್ನ 2:45 ಕ್ಕೆ ಹೊರಟು, ರಾತ್ರಿ 11:15 ಕ್ಕೆ ಹೈದರಾಬಾದ್​ನ ಕಾಚಿಗುಡ ತಲುಪಲಿದೆ.

ರಾಜ್ಯಕ್ಕೆ ಕಡಿಮೆ ಲಾಭ: ಹೈದ್ರಾಬಾದ್​ ಮತ್ತು ಬೆಂಗಳೂರು ಮಧ್ಯೆ ವಂದೇ ಭಾರತ್​ ರೈಲು ಸಂಪರ್ಕ ಕಲ್ಪಿಸಿದರೂ, ರಾಜ್ಯಕ್ಕೆ ಹೆಚ್ಚಿನ ಲಾಭವಿಲ್ಲ. ಕಾರಣ ಈ ಎಕ್ಸ್​ಪ್ರೆಸ್​ 85 ಕಿಮೀ ದೂರ ಮಾತ್ರ ರಾಜ್ಯದಲ್ಲಿ ಸಂಚಾರ ನಡೆಸಲಿದೆ. ಯಶವಂತಪುರದಿಂದ ಸಾಗಿ ಹಿಂದೂಪುರ ಸೇರಿದ ಬಳಿಕ ಆಂಧ್ರಪ್ರದೇಶ ಗಡಿ ಆರಂಭವಾಗಲಿದೆ. ರಾಜ್ಯದಲ್ಲಿ ಹೆಚ್ಚು ವ್ಯಾಪ್ತಿಯಲ್ಲಿ ಸಂಚಾರ ಇರುವುದಿಲ್ಲವಾದ್ದರಿಂದ ಉದ್ಯೋಗಿಗಳಿಗೆ ಮಾತ್ರ ಲಾಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಒಂದೇ ದಿನ 9 ರೈಲಿಗೆ ನಿಶಾನೆ: ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 24 ರಂದು ವಿವಿಧೆಡೆ ಸಂಚರಿಸುವ 9 ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸುವ ಸಾಧ್ಯತೆ ಇದೆ. ಇದರಲ್ಲಿ ಹೈದ್ರಾಬಾದ್​- ಯಶವಂತಪುರ, ವಿಜಯವಾಡ-ಚೆನ್ನೈ ವಂದೇ ಭಾರತ್ ಕೂಡ ಸೇರಿವೆ.

ಇದನ್ನೂ ಓದಿ: ಬೆಂಗಳೂರು - ಧಾರವಾಡ ವಂದೇ ಭಾರತ್ ರೈಲು ಸೇವೆಗೆ ಜನರಿಂದ ಉತ್ತಮ ಸ್ಪಂದನೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.