ETV Bharat / bharat

Article 370 ರದ್ದು ಬಳಿಕ ಮೊದಲ ಬಾರಿಗೆ ಜಮ್ಮು-ಕಾಶ್ಮೀರಕ್ಕೆ ಗೃಹ ಸಚಿವ ಅಮಿತ್‌ ಶಾ ಭೇಟಿ

author img

By

Published : Oct 23, 2021, 7:10 AM IST

ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಣೆ ಹಾಗೂ ಆರ್ಟಿಕಲ್‌ 370 ರದ್ದು ಮಾಡಿದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೇ ಮೊದಲ ಬಾರಿಗೆ ಶ್ರೀನಗರಕ್ಕೆ ಇಂದು ಭೇಟಿ ನೀಡುತ್ತಿದ್ದಾರೆ. ನಾಳೆ ಜಮ್ಮು ಜಿಲ್ಲೆಯ ತ್ರಿಕೂಟದಲ್ಲಿ ನಡೆಯಲಿರುವ ಬಿಜೆಪಿ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಭದ್ರತೆ ಹಾಗೂ ಕಳೆದ ಕೆಲ ದಿನಗಳಿಂದ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

Home Minister Amit Shah to visit JK first time after abrogation of Article 370
ಆರ್ಟಿಕಲ್‌ 370 ರದ್ದು ಬಳಿಕ ಇಂದು ಜಮ್ಮು-ಕಾಶ್ಮೀರಕ್ಕೆ ಗೃಹ ಸಚಿವ ಅಮಿತ್‌ ಶಾ ಭೇಟಿ

ಶ್ರೀನಗರ(ಜಮ್ಮು-ಕಾಶ್ಮೀರ): 2019ರ ಆಗಸ್ಟ್‌ 5 ರಂದು ಆರ್ಟಿಕಲ್‌ 370 ರದ್ದು ಮಾಡಿದ ಬಳಿಕ ಮೊದಲ ಬಾರಿಗೆ ಮೂರು ದಿನಗಳ ಜಮ್ಮು-ಕಾಶ್ಮೀರ ಪ್ರವಾಸ ಕೈಗೊಂಡಿರುವ ಗೃಹ ಸಚಿವ ಅಮಿತ್‌ ಶಾ ಇಂದು ಶ್ರೀನಗರಕ್ಕೆ ಭೇಟಿ ನೀಡುತ್ತಿದ್ದಾರೆ.

ಶ್ರೀನಗರದಲ್ಲಿ ಭದ್ರತೆ ಮತ್ತು ಗುಪ್ತಚರ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಎರಡೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಭದ್ರತಾ ಪರಿಸ್ಥಿತಿ ಕುರಿತು ಪರಿಶೀಲನಾ ಸಭೆ ನಡೆಸಲಿದ್ದಾರೆ. ಐವರು ಸ್ಥಳೀಯೇತರ ಕಾರ್ಮಿಕರು ಸೇರಿದಂತೆ ಒಂಬತ್ತು ಮಂದಿ ನಾಗರಿಕರ ಹತ್ಯೆಯಾದ ಬಳಿಕ ಕೇಂದ್ರ ಗೃಹ ಸಚಿವರ ಈ ಭೇಟಿಯು ಮಹತ್ವ ಪಡೆದುಕೊಂಡಿದೆ. ಶ್ರೀನಗರದಿಂದ ತಮ್ಮ ಭೇಟಿಯನ್ನು ಆರಂಭಿಸುತ್ತಿದ್ದು, ಮೊದಲು ಅಧಿಕಾರಿಗಳು, ಪಂಚಾಯತ್, ಡಿಡಿಸಿ ಸದಸ್ಯರು ಹಾಗೂ ಸರ್ಕಾರಿ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಶಾರ್ಜಾ-ಶ್ರೀನಗರ ನೇರ ವಿಮಾನ ಸೇವೆಯನ್ನು ಸಚಿವರು ಉದ್ಘಾಟಿಸಲಿದ್ದು, ಕುಪ್ವಾರಾ ಜಿಲ್ಲೆಯ ಹಂದ್ವಾರ ಮತ್ತು ಜಮ್ಮು ಪ್ರದೇಶದ ಉದಂಪುರ್‌ನ ಎರಡು ವೈದ್ಯಕೀಯ ಕಾಲೇಜುಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮಿತ್‌ ಶಾ ಭೇಟಿ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಹಲವು ಜಿಲ್ಲೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಉಗ್ರರು ನಾಗರಿಕರ ಹತ್ಯೆ ಮಾಡಿದ ನಂತರ 15 ಮಂದಿ ಭಯೋತ್ಪಾದಕರನ್ನು ಯೋಧರು ಬೇಟೆಯಾಡಿದ್ದಾರೆ. ಈ ಮೂಲಕ ಉಗ್ರರ ವಿರುದ್ಧ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದ್ದು, 900 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.