ETV Bharat / bharat

ಹಿಮಾಚಲ ಪ್ರದೇಶದಲ್ಲಿ ದುಬಾರಿಯಾಗಲಿದೆ ಮದ್ಯದ ಬೆಲೆ.. ಎಣ್ಣೆ ಮೇಲೆ 10ರೂ ಹಾಲಿನ ಸೆಸ್​​!

author img

By

Published : Mar 17, 2023, 8:10 PM IST

ಹಿಮಾಚಲ ಬಜೆಟ್ 2023: ಹಿಮಾಚಲದಲ್ಲಿ ಮದ್ಯದ ಬೆಲೆ ದುಬಾರಿ - ಹಿಮಾಚಲದಲ್ಲಿ ಪ್ರತಿಬಾಟಲಿ ಮದ್ಯದ ಮೇಲೆ 10 ರೂ. ಹಾಲಿನ ಸೆಸ್ ವಿಧಿಸುವುದಾಗಿ ಸಿಎಂ ಸುಖವಿಂದರ್ ಸಿಂಗ್ ಸುಖು ಘೋಷಿಸಿದ್ದಾರೆ.

Himachal Budget 2023
ಸಿಎಂ ಸುಖವಿಂದರ್ ಸಿಂಗ್ ಸುಖು

ಶಿಮ್ಲಾ (ಹಿಮಾಚಲ ಪ್ರದೇಶ): ಈಗ ಹಿಮಾಚಲದಲ್ಲಿ ಮದ್ಯದ ಬಾಟಲಿಗಳ ಮೇಲೂ ಹಾಲಿನ ಸೆಸ್ ವಿಧಿಸಲಾಗುತ್ತದೆ. ಈ ಮೂಲಕ ಮದ್ಯದ ಬೆಲೆ ಬಲು ದುಬಾರಿಯಾಗಲಿದೆ. ಹೌದು, ಸಿಎಂ ಸುಖವಿಂದರ್ ಸುಖು ಶುಕ್ರವಾರ ತಮ್ಮ ಮೊದಲ ಬಜೆಟ್‌ನಲ್ಲಿ ಈ ಘೋಷಣೆ ಮಾಡಿದ್ದಾರೆ. 2023-24ನೇ ಹಣಕಾಸು ವರ್ಷದ ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು, ಹೊಸ ಅಬಕಾರಿ ನೀತಿ ತಂದಿದ್ದು, ಇದರಿಂದ ಸರ್ಕಾರದ ಆದಾಯ ಹೆಚ್ಚುವುದರ ಜೊತೆಗೆ ಹೈನುಗಾರಿಕೆಗೂ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ಪ್ರತಿ ಬಾಟಲಿಯ ಮೇಲೆ ರೂ.10 ಹಾಲಿನ ಸೆಸ್: ವಾಸ್ತವವಾಗಿ ಕಾಂಗ್ರೆಸ್ ಚುನಾವಣಾ ಸಮಯದಲ್ಲಿ ರಾಜ್ಯದ ಹಾಲು ಉತ್ಪಾದಕರ ಆದಾಯವನ್ನು ಹೆಚ್ಚಿಸುವ ಭರವಸೆ ನೀಡಿತ್ತು. ಇದರ ಅಡಿ ಸರ್ಕಾರವು ಹಾಲು ಉತ್ಪಾದಕರಿಗೆ ಹಸುವಿನ ಹಾಲು ಲೀಟರ್‌ಗೆ 80 ರೂ ಮತ್ತು ಎಮ್ಮೆಯ ಹಾಲು ಲೀಟರ್‌ಗೆ 100 ರೂ. ಆಗಿದೆ. ಜಾನುವಾರು ಸಾಕಣೆದಾರರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಮದ್ಯದ ಬಾಟಲಿ ಮೇಲೆ 10 ರೂ. ಹಾಲಿನ ಸೆಸ್ ವಿಧಿಸಲು ಈಗ ಸರ್ಕಾರ ನಿರ್ಧರಿಸಿದೆ. ಹಾಲಿನ ಸೆಸ್​ನಿಂದ ಬರುವ ಆದಾಯವನ್ನು ಹಾಲು ಉತ್ಪಾದಕರ ಆದಾಯ ಹೆಚ್ಚಿಸಲು ಮಾತ್ರ ವಿನಿಯೋಗಿಸಲಾಗುವುದು ಎಂದು ಸಿಎಂ ಸಿಎಂ ಸುಖವಿಂದರ್ ಸುಖು ಹೇಳಿದರು.

ಈಗಾಗಲೇ ಮದ್ಯದ ಮೇಲೆ ವಿಧಿಸಲಾಗಿತ್ತು ಹಸುವಿನ ಸೆಸ್: ಹಿಮಾಚಲದ ಹಿಂದಿನ ಬಿಜೆಪಿ ಸರ್ಕಾರವೂ ಮದ್ಯದ ಮೇಲೆ ಹಸುವಿನ ಸೆಸ್ ವಿಧಿಸಿತ್ತು ಎಂಬುದು ಗಮನಾರ್ಹ. ಇದು ಪ್ರಸ್ತುತ ಶೇ ಎರಡೂವರೆಯಷ್ಟಿತ್ತು. ರಾಜ್ಯದಲ್ಲಿ ಗೋವುಗಳ ಪ್ರಚಾರಕ್ಕಾಗಿ ಹಸುವಿನ ಸೆಸ್ ಅನ್ನು ಬಳಸಲಾಗುತ್ತದೆ. ಅಂದರೆ, ಪ್ರತಿ ಬಾಟಲಿ ಮದ್ಯದ ಮೇಲೆ 2.5 ಪ್ರತಿಶತ ಹಸುವಿನ ಸೆಸ್ ಜೊತೆಗೆ ಈಗ 10 ರೂಪಾಯಿ ಹಾಲಿನ ಸೆಸ್ ಕೂಡ ಪಾವತಿಸಬೇಕಾಗುತ್ತದೆ. ಇದರ ನೇರ ಪರಿಣಾಮ ಮದ್ಯ ಗ್ರಾಹಕರ ಮೇಲೆ ಆಗಲಿದ್ದು, ಇದರಿಂದ ಮದ್ಯ ದುಬಾರಿಯಾಗಲಿದೆ. ಹಾಲಿನ ಸೆಸ್ ವಿಧಿಸಿದ ಸರ್ಕಾರವು, ಪ್ರತಿವರ್ಷ 100 ಕೋಟಿ ರೂ. ಅನ್ನು ಪಶುಪಾಲಕರು ಮತ್ತು ಹಾಲು ಉತ್ಪಾದಕರ ಕಲ್ಯಾಣ ಯೋಜನೆಗಳಿಗೆ ಖರ್ಚು ಮಾಡಲಾಗುವುದು ಎಂದು ಘೋಷಿಸಿದೆ.

ಏನಿದು ಹೊಸ ಅಬಕಾರಿ ನೀತಿ?: ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರವು ಹೊಸ ಅಬಕಾರಿ ನೀತಿಯ ಅಡಿ ರಾಜ್ಯದ ಮದ್ಯದ ಗುತ್ತಿಗೆಗಳ ಬಹಿರಂಗ ಹರಾಜು ನಡೆಸುತ್ತಿದೆ. ಹಿಂದಿನ ಸರ್ಕಾರಗಳು ಮದ್ಯದ ಗುತ್ತಿಗೆಯನ್ನು ಶೇ 10ರಷ್ಟು ಹೆಚ್ಚಿಸಿಕೊಂಡು ನವೀಕರಿಸುತ್ತಿದ್ದವು. ಇದರಿಂದಾಗಿ ಸರ್ಕಾರಕ್ಕೆ ಪ್ರತಿವರ್ಷ ಕೇವಲ ಶೇ 10ರಷ್ಟು ಹೆಚ್ಚು ಆದಾಯ ಬರುತ್ತಿತ್ತು. ಆದರೆ, ಗುತ್ತಿಗೆಗಳನ್ನು ಹರಾಜು ಮಾಡುವ ಮೂಲಕ ಈ ಅಂಕಿ ಅಂಶವು ಶೇ 32ಕ್ಕೆ ತಲುಪಿದೆ ಎಂದು ಸಿಎಂ ಸುಖು ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

ಸಿಎಂನಿಂದ ಮದ್ಯದ ಹರಾಜಿನ ಅಂಕಿ -ಅಂಶಗಳ ಬಿಡುಗಡೆ: ಪ್ರಸ್ತುತ ನಡೆಯುತ್ತಿರುವ ಹರಾಜಿನ ಅಂಕಿ - ಅಂಶಗಳನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳು, ಸೋಲನ್ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಶೇ 32, ಕುಲುದಲ್ಲಿ ಶೇ 40, ಕಿನ್ನೌರ್‌ನಲ್ಲಿ ಶೇ 66, ಹಮೀರ್‌ಪುರದಲ್ಲಿ ಶೇ 23, ಕಾಂಗ್ರಾದಲ್ಲಿ ಶೇ 36ರಷ್ಟು ಗುತ್ತಿಗೆಗಳ ಹರಾಜು ಹೆಚ್ಚಾಗಿದೆ. ಶಿಮ್ಲಾ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಈ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಅವರು ಘೋಷಿಸಿದ್ದಾರೆ.

ಇದನ್ನೂ ಓದಿ: ಕಳೆದ ಮೂರು ವರ್ಷಗಳಲ್ಲಿ ಆನೆ ದಾಳಿಗೆ 1,581 ಜನರು ಸಾವು, ಹುಲಿ ದಾಳಿಗೆ 207 ಮಂದಿ ಸಾವು..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.