ETV Bharat / bharat

ಎರಡು ಮತದಾರರ ಪಟ್ಟಿಯಲ್ಲಿ ಹೆಸರು: ಸಿಎಂ ಅರವಿಂದ್ ಕೇಜ್ರಿವಾಲ್ ಪತ್ನಿ ವಿರುದ್ಧದ ಸಮನ್ಸ್​ಗೆ ದಿಲ್ಲಿ ಹೈಕೋರ್ಟ್​ ತಡೆ

author img

By PTI

Published : Nov 6, 2023, 8:44 PM IST

ಎರಡು ಮತದಾರರ ಪಟ್ಟಿಯಲ್ಲಿ ಹೆಸರು ವಿವಾದಕ್ಕೆ ಸಂಬಂಧಿಸಿದಂತೆ ಸಿಎಂ ಅರವಿಂದ್​ ಕೇಜ್ರಿವಾಲ್​ ಪತ್ನಿಗೆ ನೀಡಲಾಗಿದ್ದ ಸಮನ್ಸ್​ಗೆ ದೆಹಲಿ ಹೈಕೋರ್ಟ್​ ತಡೆ ನೀಡಿ ಆದೇಶಿಸಿದೆ.

ಎರಡು ಮತದಾರರ ಪಟ್ಟಿಯಲ್ಲಿ ಹೆಸರು
ಎರಡು ಮತದಾರರ ಪಟ್ಟಿಯಲ್ಲಿ ಹೆಸರು

ನವದೆಹಲಿ: ಎರಡು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿ ನಿಯಮ ಮೀರಿದ ಆರೋಪದ ಮೇಲೆ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರ ಪತ್ನಿ ಸುನೀತಾ ಕೇಜ್ರಿವಾಲ್‌ಗೆ ಕೆಳ ನ್ಯಾಯಾಲಯ ನೀಡಿದ್ದ ಸಮನ್ಸ್‌ಗೆ ದೆಹಲಿ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.

ತಮ್ಮ ಮೇಲೆ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ನವೆಂಬರ್ 18 ರಂದು ವಿಚಾರಣೆಗೆ ಹಾಜರಾಗುವಂತೆ ಸುನೀತಾ ಕೇಜ್ರಿವಾಲ್ ಅವರಿಗೆ ವಿಚಾರಣಾ ನ್ಯಾಯಾಲಯವು ಸಮನ್ಸ್​ ಜಾರಿ ಮಾಡಿದೆ. ಇದರ ವಿರುದ್ಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರು ತಡೆ ನೀಡಿ, ಫೆಬ್ರವರಿ 1 ಕ್ಕೆ ವಿಚಾರಣೆ ಮುಂದೂಡಿದೆ.

ಹೈಕೋರ್ಟ್‌ನಲ್ಲಿ ಸುನಿತಾ ಪರ ವಾದ ಮಂಡಿಸಿದ ಹಿರಿಯ ವಕೀಲ ರೆಬೆಕಾ ಜಾನ್ ಅವರು ಕೆಳ ನ್ಯಾಯಾಲಯವು ಸರಿಯಾದ ವಿಚಾರಣೆ ನಡೆಸದೇ ಸಮನ್ಸ್​ ನೀಡಿದೆ ಎಂದು ವಾದಿಸಿದರು. ಎರಡು ಚುನಾವಣಾ ಕಾರ್ಡ್‌ಗಳನ್ನು ಹೊಂದುವುದು ಅಪರಾಧವಲ್ಲ. ಅರ್ಜಿದಾರರು ಯಾವುದೇ ಸುಳ್ಳು ಹೇಳಿಕೆ ನೀಡಿಲ್ಲ ಎಂದರು.

ಸುನಿತಾ ಅವರ ಮೇಲಿನ ಆರೋಪವೇನು?: ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಉತ್ತರಪ್ರದೇಶದ ಸಾಹಿಬಾಬಾದ್ ವಿಧಾನಸಭಾ ಕ್ಷೇತ್ರ ಮತ್ತು ದೆಹಲಿಯ ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರಿದೆ. ಇದು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 17 ರ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ನಾಯಕ ಹರೀಶ್ ಖುರಾನಾ ಅವರು ದೂರು ಸಲ್ಲಿಸಿದ್ದರು. ಎರಡು ಮತಕ್ಷೇತ್ರಗಳಲ್ಲಿ ಹೆಸರು ಸೇರ್ಪಡೆ ಮಾಡಿದ್ದಕ್ಕೆ ಆರ್​ಪಿ ಕಾಯ್ದೆಯ ಸೆಕ್ಷನ್ 31 ರ ಅಡಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕೋರಿದ್ದರು.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪತ್ನಿ ಇಬ್ಬರೂ ಉನ್ನತ ಮಟ್ಟದ ಅಧಿಕಾರಿಗಳಾಗಿದ್ದಾರೆ. ದೇಶದಲ್ಲಿ ಒಂದು ರಾಷ್ಟ್ರ ಮತ್ತು ಒಂದು ಮತದಾರರ ಗುರುತಿನ ಚೀಟಿ ಜಾರಿಯಲ್ಲಿದೆ ಎಂದು ಅವರಿಗೆ ತಿಳಿದಿದ್ದು, ಇಂತಹ ಅಪರಾಧವನ್ನು ಎಸಗಿರುವುದು ಅಕ್ಷಮ್ಯ ಎಂದು ವಾದಿಸಿದ್ದರು.

ವಿಚಾರಣೆ ನಡೆಸಿದ್ದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅರ್ಜಿಂದರ್ ಕೌರ್ ಅವರು ನಿಯಮ ಉಲ್ಲಂಘನೆಯ ಮೇಲೆ ನವೆಂಬರ್ 18 ರಂದು ಸಮನ್ಸ್ ಜಾರಿ ಮಾಡಿದ್ದರು. ಆರೋಪಿ ಸ್ಥಾನದಲ್ಲಿರುವ ಸುನಿತಾ ಕೇಜ್ರಿವಾಲ್ 1950 ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 31 ರ ಅಡಿ ಶಿಕ್ಷಾರ್ಹರಾಗಿದ್ದಾರೆ ಎಂದು ಸಮನ್ಸ್​ನಲ್ಲಿ ನಮೂದಿಸಲಾಗಿತ್ತು. ಅಪರಾಧ ಸಾಬೀತಾದರೆ, ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.

ಇದನ್ನೂ ಓದಿ: ಎರಡು ವಿಧಾನಸಭಾ ಮತಕ್ಷೇತ್ರಗಳಲ್ಲಿ ಹೆಸರು: ಸಿಎಂ ಅರವಿಂದ್​ ಕೇಜ್ರಿವಾಲ್​ ಪತ್ನಿಗೆ ದೆಹಲಿ ಕೋರ್ಟ್​ ಸಮನ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.