ಹೈಕೋರ್ಟ್​ ಅಂಗಳಕ್ಕೆ ಜ್ಞಾನವಾಪಿ ಕೇಸ್: ಹಿಂದೂ, ಮುಸ್ಲಿಂ ಪಕ್ಷಗಾರರಿಂದ ಅರ್ಜಿ ಸಲ್ಲಿಕೆ?

author img

By

Published : Sep 13, 2022, 6:49 PM IST

gyanvapi-shringar-gauri-case
ಹೈಕೋರ್ಟ್​ ಅಂಗಳಕ್ಕೆ ಜ್ಞಾನವಾಪಿ ಕೇಸ್ ()

ಜ್ಞಾನವಾಪಿ ಮಸೀದಿ ಕೇಸ್​ ಅಲಹಾಬಾದ್​ ಹೈಕೋರ್ಟ್​ ಮೆಟ್ಟಿಲೇರಲಿದೆ. ವಾರಾಣಸಿ ಜಿಲ್ಲಾ ನ್ಯಾಯಾಲಯ ಆದೇಶದ ವಿರುದ್ಧ ಮಸೀದಿ ಸಮಿತಿ ಸವಾಲಿಗೆ ಮುಂದಾದರೆ, ಮಸೀದಿ ಸಮಿತಿ ವಿರುದ್ಧ ಅರ್ಜಿಗೆ ಹಿಂದೂ ಪಕ್ಷಗಾರರು ಸಿದ್ಧತೆ ನಡೆಸಿದ್ದಾರೆ.

ವಾರಾಣಸಿ: ಜ್ಞಾನವಾಪಿ ಮಸೀದಿ ಪ್ರಕರಣ ಅಲಹಾಬಾದ್​ ಹೈಕೋರ್ಟ್​ ಮೆಟ್ಟಿಲೇರುವ ಸಾಧ್ಯತೆ ಇದೆ. ಮಸೀದಿಯಲ್ಲಿ ಪತ್ತೆಯಾದ ಶೃಂಗಾರಗೌರಿಗೆ ಪೂಜೆ ಸಲ್ಲಿಸಲು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ವಾರಾಣಸಿ ಜಿಲ್ಲಾ ನ್ಯಾಯಾಲಯದ ಒಪ್ಪಿದ್ದು, ಇದನ್ನು ಮಸೀದಿ ಪರ ಪಕ್ಷಗಾರರು ವಿರೋಧಿಸಿದ್ದಾರೆ. ಜಿಲ್ಲಾ ಕೋರ್ಟ್​ ವಿರುದ್ಧ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಗೆ ಮಸೀದಿ ಸಮಿತಿ ಮುಂದಾಗಿದ್ದು, ಇದರ ವಿರುದ್ಧವೂ ಅರ್ಜಿ ಸಲ್ಲಿಸಲು ಹಿಂದು ಪಕ್ಷಗಾರರು ಸಿದ್ಧತೆ ನಡೆಸಿದ್ದಾರೆ.

ವಾರಾಣಸಿ ಜಿಲ್ಲಾ ನ್ಯಾಯಾಧೀಶರ ಆದೇಶದ ವಿರುದ್ಧ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿದೆ. ಮಸೀದಿ ಸಮಿತಿಯ ಅರ್ಜಿಗೂ ಮುನ್ನವೇ ಹಿಂದುಪರರು ಹೈಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ನಾಳೆ(ಬುಧವಾರ) ಹೈಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಲಾಗುವುದು. ಮಸೀದಿ ಸಮಿತಿಯು ಹೈಕೋರ್ಟ್‌ಗೆ ಹೋಗಲಿದ್ದು, ಅವರಿಗಿಂತ ಮುಂಚಿತವಾಗಿ ಹಿಂದು ಪಕ್ಷಗಾರರ ಪರವಾಗಿ ಕೇವಿಯಟ್​ ಸಲ್ಲಿಸಲಾಗುವುದು ಎಂದು ಹಿಂದೂ ಪರ ವಕೀಲ ಸುಧೀರ್ ತ್ರಿಪಾಠಿ ಮಂಗಳವಾರ ತಿಳಿಸಿದರು.

ಮಂಜು ವ್ಯಾಸ್, ಸೀತಾ ಸಾಹು, ರೇಖಾ ಪಾಠಕ್ ಮತ್ತು ಲಕ್ಷ್ಮಿ ದೇವಿ ಎಂಬ ಐವರು ಹಿಂದು ಮಹಿಳೆಯರು ಜ್ಞಾನವಾಪಿ ಶೃಂಗಾರಗೌರಿಗೆ ಪೂಜೆ ಸಲ್ಲಿಸಲು ಕೋರಿ ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅವರಿಂದಲೇ ಹೈಕೋರ್ಟ್​ಗೂ ಕೇವಿಯಟ್​​ ಹಾಕಲಾಗುವುದು ಎಂದು ವಕೀಲರು ತಿಳಿಸಿದರು. ನಿನ್ನೆಯಷ್ಟೇ ವಾರಾಣಸಿ ಜಿಲ್ಲಾ ನ್ಯಾಯಾಲಯ ಮಹಿಳೆಯರ ಪೂಜಾ ಅರ್ಜಿಯನ್ನು ಪುರಸ್ಕರಿಸಿ, ಮುಸ್ಲಿಮರ ಅರ್ಜಿಯನ್ನು ವಜಾ ಮಾಡಿತ್ತು. ಬಳಿಕ ಸೆಪ್ಟೆಂಬರ್ 22 ರಿಂದ ವಿಚಾರಣೆಯನ್ನು ನಡೆಸಲಾಗುವುದು ಎಂದು ಆದೇಶಿಸಿತ್ತು.

ನ್ಯಾಯಾಲಯದ ಆದೇಶವನ್ನು ಮಸೀದಿ ಸಮಿತಿ ಆಕ್ಷೇಪಿಸಿ, 1991 ರ ಪೂಜಾ ಸ್ಥಳಗಳ ಯಥಾಸ್ಥಿತಿ ಕಾಪಾಡುವ ಕಾಯ್ದೆಯ ವಿರುದ್ಧವಿದೆ. ಧಾರ್ಮಿಕ ಸ್ಥಳವನ್ನು ಸಂಸತ್ತಿನ ಕಾಯ್ದೆಯ ಮೂಲಕ ರಕ್ಷಿಸಲಾಗಿದೆ. ಆಗ ಅದೇ ಕಾಯ್ದೆಯನ್ನು ಅನುಸರಿಸಲಾಗಿಲ್ಲ. ಈ ಬಗ್ಗೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿತ್ತು.

ಓದಿ: ಮೋದಿ ಬಳಿಕ ಸೋನಿಯಾ ಗಾಂಧಿ ಪ್ರಧಾನಿ: ಅರವಿಂದ್​ ಕೇಜ್ರಿವಾಲ್ ಹೊಸ ಬಾಂಬ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.