ETV Bharat / bharat

ಸಿಂಧಿಯಾ ಭದ್ರಕೋಟೆಯಲ್ಲಿ ರ್‍ಯಾಲಿ ನಡೆಸಲಿರುವ ಪ್ರಿಯಾಂಕಾ ಗಾಂಧಿ.. ಕಾವೇರಿದ ಚುನಾವಣಾ ಕಾವು

author img

By

Published : Jul 10, 2023, 6:15 PM IST

ಚಂಬಲ್ - ಗ್ವಾಲಿಯರ್‌ನಲ್ಲಿ ಜುಲೈ 21 ರಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಪ್ರಚಾರ ನಡೆಸಲಿದ್ದಾರೆ ಎಂದು ಮಧ್ಯಪ್ರದೇಶದ ಎಐಸಿಸಿ ಉಸ್ತುವಾರಿ ಜೆಪಿ ಅಗರ್ವಾಲ್​ ಪ್ರಕಟಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ

ನವದೆಹಲಿ: ಮಧ್ಯಪ್ರದೇಶದ ಚಂಬಲ್-ಗ್ವಾಲಿಯರ್ ಪ್ರದೇಶವನ್ನು ಹಿಂದಿನ ಸಿಂಧಿಯಾ ರಾಜಮನೆತನದ ಭದ್ರಕೋಟೆ ಎಂದು ಪರಿಗಣಿಸಬಾರದು. ಇದು ಸಹ ಚುನಾವಣೆಗೆ ಒಳಪಡುವ ರಾಜ್ಯದ ಮತ್ತೊಂದು ಭಾಗವಷ್ಟೇ ಎಂದು ಕಾಂಗ್ರೆಸ್ ಹೇಳಿದೆ.

''ನಾವು ಚಂಬಲ್-ಗ್ವಾಲಿಯರ್ ಅನ್ನು ಸಿಂಧಿಯಾ ಕುಟುಂಬದ ಭದ್ರಕೋಟೆ ಎಂದು ಏಕೆ ಪರಿಗಣಿಸಬೇಕು?. ನಮಗೆ ಇದು ರಾಜ್ಯದ ಮತ್ತೊಂದು ಭಾಗವಷ್ಟೇ. ನಮ್ಮ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜುಲೈ 21 ರಂದು ಈ ಭಾಗದಲ್ಲಿ ಪ್ರಚಾರ ಮಾಡಲಿದ್ದಾರೆ. ಅವರು ರಾಜ್ಯಾದ್ಯಂತ ಪ್ರಚಾರ ಮಾಡಬೇಕು ಎಂದು ನಮ್ಮ ಕಾರ್ಯಕರ್ತರಿಂದ ಬಲವಾದ ಬೇಡಿಕೆಯಿದೆ” ಎಂದು ಎಐಸಿಸಿ ಮಧ್ಯಪ್ರದೇಶದ ಉಸ್ತುವಾರಿ ಜೆಪಿ ಅಗರ್ವಾಲ್ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಪ್ರಿಯಾಂಕಾ ಅವರ ಎರಡನೇ ರ್‍ಯಾಲಿ: ಪ್ರಿಯಾಂಕಾ ಗಾಂಧಿ ತಮ್ಮ ಎರಡನೇ ರ್‍ಯಾಲಿಯನ್ನ ನಡೆಸಲಿದ್ದಾರೆ ಎಂದು ಖಚಿತಪಡಿಸಲಾಗಿದೆ. ಜೂನ್ 12 ರಂದು ಜಬಲ್ಪುರದಿಂದ ಪಕ್ಷದ ಪ್ರಚಾರವನ್ನು ಪ್ರಾರಂಭಿಸಿದ ನಂತರ ಗ್ವಾಲಿಯರ್​ನಲ್ಲಿ ಪ್ರಿಯಾಂಕಾ ಅವರ ಎರಡನೇ ರ್‍ಯಾಲಿ ಇದಾಗಲಿದೆ.

ಕಳೆದ ವಾರ ಎಐಸಿಸಿ ಸಂಘಟನೆಯ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಅವರು, ಜುಲೈ 3 ರಂದು ರಾಜ್ಯ ಘಟಕದ ಮುಖ್ಯಸ್ಥ ಕಮಲ್ ನಾಥ್ ಮತ್ತು ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಸೇರಿದಂತೆ ಹಿರಿಯ ನಾಯಕರೊಂದಿಗೆ ಪ್ರಿಯಾಂಕಾ ಅವರ ರ್‍ಯಾಲಿ ಮತ್ತು ಮುಂಬರುವ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲಿಸಿದರು. ಅಗರ್ವಾಲ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಇದಲ್ಲದೇ, ಕಮಲ್ ನಾಥ್ ಮತ್ತು ದಿಗ್ವಿಜಯ್ ಸಿಂಗ್ ಇಬ್ಬರೂ ಇತ್ತೀಚೆಗೆ ಗ್ವಾಲಿಯರ್ ಪ್ರದೇಶದಲ್ಲಿ ಪ್ರವಾಸ ಮಾಡಿದ್ದು, ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಶಿವ ಭಾಟಿಯಾ ಮತ್ತು ರಾಜ್ಯ ಘಟಕದ ಮಾಜಿ ಮುಖ್ಯಸ್ಥ ಅರುಣ್ ಯಾದವ್ ಸೇರಿದಂತೆ ವಿವಿಧ ಹಿರಿಯ ನಾಯಕರು ಅಲ್ಲಿ ಮೊಕ್ಕಾಂ ಹೂಡಿದ್ದಾರೆ.

ಸಿಂಧಿಯಾ ಅವರಿಗೆ ಪ್ರಿಯಾಂಕಾ ಪ್ರತ್ಯುತ್ತರ: ಪಕ್ಷದ ಒಳಗಿನವರ ಪ್ರಕಾರ, ಗ್ವಾಲಿಯರ್ ರ್‍ಯಾಲಿಯು ಪ್ರಾಮುಖ್ಯತೆ ಪಡೆದುಕೊಂಡಿದೆ. ಏಕೆಂದರೆ ಇದು ಪಕ್ಷದ ಮಾಜಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಪ್ರಾಬಲ್ಯದ ಪ್ರದೇಶವಾಗಿದೆ. ಸಿಂಧಿಯಾ ಅವರು ಈ ಮೊದಲು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಇಬ್ಬರಿಗೂ ಹತ್ತಿರವಾಗಿದ್ದರು. ಆದರೆ 2020 ರಲ್ಲಿ ಬಿಜೆಪಿ ಸೇರಿದ್ದರು. ಅದಾದ ಬಳಿಕ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ ಸರ್ಕಾರ ಪತನಗೊಂಡಿತ್ತು.

ಹೃದಯದಿಂದ ಮಾತನಾಡುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ: "ಪ್ರಿಯಾಂಕಾ ಜೀ ಅವರು ರ್‍ಯಾಲಿಯಲ್ಲಿ ಏನು ಹೇಳುತ್ತಾರೆ ಎಂದು ನಾನು ಊಹಿಸಲು ಸಾಧ್ಯವಿಲ್ಲ. ಆದರೆ, ಅವರು ಪ್ರಬಲ ನಾಯಕಿಯಾಗಿದ್ದು, ಹೃದಯದಿಂದ ಮಾತನಾಡುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಅವರ ಬೃಹತ್ ರ್‍ಯಾಲಿಯಾಗಲಿದೆ'' ಎಂದು ಅಗರ್ವಾಲ್ ಇದೇ ವೇಳೆ ಸ್ಪಷ್ಟಪಡಿಸಿದರು. 2020ರಲ್ಲಿ ಬಿಜೆಪಿಯು ಭ್ರಷ್ಟ ಮಾರ್ಗದ ಮೂಲಕ ರಾಜ್ಯ ಸರ್ಕಾರವನ್ನು ರಚನೆ ಮಾಡಿತ್ತು. ಅಂದಿನಿಂದ ಹೆಚ್ಚು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದೂ ಅವರು ಆರೋಪಿಸಿದರು.

ಇದನ್ನೂ ಓದಿ: Priyanka Gandhi: ಬಿಜೆಪಿಯ ಡಬಲ್ ಇಂಜಿನ್​ ಸರ್ಕಾರಕ್ಕೆ ಹಿಮಾಚಲ, ಕರ್ನಾಟಕದ ಜನತೆ ತಕ್ಕ ಉತ್ತರ ನೀಡಿದ್ದಾರೆ: ಮಧ್ಯಪ್ರದೇಶದಲ್ಲಿ ಪ್ರಿಯಾಂಕಾ​ ರಣಕಹಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.