ETV Bharat / bharat

ದೇಶದಲ್ಲಿ ಆರ್ಥಿಕತೆ ಪುನಃ ಚೇತರಿಕೆ: GST ಸಂಗ್ರಹದಲ್ಲಿ ಹಿಂದಿನ ವರ್ಷಕ್ಕಿಂತ ಶೇ.30ರಷ್ಟು ಹೆಚ್ಚಳ

author img

By

Published : Sep 1, 2021, 5:16 PM IST

ಕೋವಿಡ್ ಎರಡನೇ ಅಲೆಯ ನಂತರ ದೇಶದ ಆರ್ಥಿಕತೆ ಚೇತರಿಕೆ ಕಾಣುತ್ತಿರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಈ ವರ್ಷದ ಆಗಸ್ಟ್​ ತಿಂಗಳಲ್ಲಿ 1.1 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಜಿಎಸ್​ಟಿ(GST) ಸಂಗ್ರಹವಾಗಿದೆ.

gst-collection-in-august-clocks-30-percent-yoy-growth
ದೇಶದಲ್ಲಿ ಆರ್ಥಿಕತೆ ಪುನಃ ಚೇತರಿಕೆ: ಜಿಎಸ್​ಟಿ ಸಂಗ್ರಹದಲ್ಲಿ ಹಿಂದಿನ ವರ್ಷಕ್ಕಿಂತ ಶೇ.30ರಷ್ಟು ಹೆಚ್ಚಳ

ನವದೆಹಲಿ: ಕೋವಿಡ್​ನಿಂದ ಕುಂಠಿತಗೊಂಡಿದ್ದ ದೇಶದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ. ಹಿಂದಿನ ವರ್ಷಕ್ಕಿಂತ ಈ ಬಾರಿ ಸರಕು ಮತ್ತು ಸೇವಾ ತೆರಿಗೆ(GST) ಸಂಗ್ರಹ ಏರಿಕೆಯಾಗಿದೆ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಸಂಗ್ರಹವಾಗಿದ್ದ, ಜಿಎಸ್​ಟಿಗಿಂತ ಶೇಕಡಾ 30ರಷ್ಟು ತೆರಿಗೆ ಸಂಗ್ರಹ ಅಧಿಕವಾಗಿದೆ.

ಕೋವಿಡ್ ಕಾರಣದಿಂದಾಗಿ ಹಿಂದಿನ ವರ್ಷ ಜಿಎಸ್​ಟಿ(GST) ಸಂಗ್ರಹ ಕುಸಿತ ಕಂಡಿತ್ತು. ಈಗ ಆಗಸ್ಟ್ ತಿಂಗಳ ವರದಿ ಬಹಿರಂಗವಾಗಿದ್ದು, ಸುಮಾರು 1.1 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಜಿಎಸ್​ಟಿ ಸಂಗ್ರಹವಾಗಿದೆ.

ಜಿಎಸ್​ಟಿಯಲ್ಲಿ ಕೇಂದ್ರ ಜಿಎಸ್​ಟಿ, ರಾಜ್ಯ ಜಿಎಸ್​ಟಿ ಮತ್ತು ಸಮಗ್ರ ಜಿಎಸ್​ಟಿ ಎಂಬ ಮೂರು ವಿಧಗಳಿವೆ. ಆಗಸ್ಟ್​ ತಿಂಗಳಲ್ಲಿ ಒಟ್ಟು 1,12,020 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಕೇಂದ್ರ ಜಿಎಸ್​ಟಿ 20,522 ಕೋಟಿ ರೂಪಾಯಿ, ರಾಜ್ಯ ಜಿಎಸ್​ಟಿ 26,605 ಕೋಟಿ ರೂಪಾಯಿ, ರಾಜ್ಯ ಮತ್ತು ಕೇಂದ್ರದ ನಡುವೆ ಸಮವಾಗಿ ಹಂಚಿಕೆಯಾಗುವ ಸಮಗ್ರ ಜಿಎಸ್​ಟಿ 56,247 ಕೋಟಿ ರೂಪಾಯಿಯಿದೆ.

ಸಮಗ್ರ ಜಿಎಸ್​ಟಿಯಲ್ಲಿ 26,884 ಕೋಟಿ ರೂಪಾಯಿ ಸರಕುಗಳ ಆಮದು ಮೇಲೆ ವಿಧಿಸಲಾಗಿದ್ದ ಜಿಎಸ್​ಟಿ ಆಗಿದೆ. ಜೊತೆಗೆ 8,646 ಕೋಟಿ ರೂಪಾಯಿ ತೆರಿಗೆ ಮೇಲೆ ವಿಧಿಸುವ ಸೆಸ್​​ನಿಂದ ಬಂದ ಆದಾಯವಾಗಿದೆ.

ರಾಜ್ಯಗಳ ಪಾಲು ನೀಡುವ ವಿಚಾರದಲ್ಲಿ ಸಿಜಿಎಸ್‌ಟಿಯ 23,043 ಕೋಟಿ ರೂಪಾಯಿ ಮತ್ತು ಎಸ್‌ಜಿಎಸ್‌ಟಿಯ 19,139 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಂಚಿಕೆ ಮಾಡಲಿದೆ. ಇದರ ಜೊತೆಗೆ ಐಜಿಎಸ್​ಟಿಯನ್ನು 50:50 ಅನುಪಾತದಲ್ಲಿ ರಾಜ್ಯ ಮತ್ತು ಕೇಂದ್ರಗಳ ಜೊತೆಗೆ ಹಂಚಿಕೆಯಾಗಬೇಕಿದ್ದು, ತಾತ್ಕಾಲಿಕವಾಗಿ 24 ಸಾವಿರ ಕೋಟಿ ರೂಪಾಯಿಗಳನ್ನು ಹಂಚಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಆಗಸ್ಟ್​ನಲ್ಲಿ ಸೇವೆಗಳ ಆಮದು ಸೇರಿದಂತೆ ದೇಶೀಯ ವಹಿವಾಟುಗಳ ಆದಾಯದ ಮಟ್ಟವೂ ಹೆಚ್ಚಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಬಂದ ಆದಾಯಕ್ಕಿಂತ ಶೇಕಡಾ 27ರಷ್ಟು ಹೆಚ್ಚಾಗಿದೆ. ಆಗಸ್ಟ್ 2021ರಲ್ಲಿ ಜಿಎಸ್‌ಟಿ ಸಂಗ್ರಹವು ಆಗಸ್ಟ್ 2020ರಲ್ಲಿ ಜಿಎಸ್‌ಟಿ ಸಂಗ್ರಹಕ್ಕಿಂತ ಶೇಕಡಾ 30ರಷ್ಟು ಹೆಚ್ಚಾಗಿದ್ದರೆ, 2019ರ ಆಗಸ್ಟ್​​ಗಿಂತ ಶೇಕಡಾ 14ರಷ್ಟು ಹೆಚ್ಚಾಗಿದೆ.

ನವೆಂಬರ್ 2020ರಿಂದ ಕೈಗೊಂಡ ತೆರಿಗೆ ವಂಚನೆ ವಿರೋಧಿ ಕ್ರಮಗಳ ಕಾರಣದಿಂದಾಗಿ, ಜಿಎಸ್‌ಟಿ ಸಂಗ್ರಹವು ಹೆಚ್ಚಾಗಿದೆ. ಜುಲೈ ಮತ್ತು ಆಗಸ್ಟ್​ನ ಜಿಎಸ್‌ಟಿ ಸಂಗ್ರಹವು 1 ಲಕ್ಷ ಕೋಟಿ ದಾಟಿದೆ. ಇದು ಆರ್ಥಿಕತೆ ವೇಗವಾಗಿ ಚೇತರಿಕೆ ಕಾಣುತ್ತಿದೆ ಎಂಬುದನ್ನು ಸೂಚಿಸುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಇದನ್ನೂ ಓದಿ: ಪೊಲೀಸ್​ ಮಾಹಿತಿದಾರನೆಂಬ ಶಂಕೆ.. ಗ್ರಾಮ ರಕ್ಷಕನನ್ನು ಮನೆಯಿಂದ ಹೊರಗೆಳೆದು ಕೊಂದ ನಕ್ಸಲರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.