ETV Bharat / bharat

Google ಪೇಜ್‌ ತೆರೆದರೆ ಸರ್ಪ್ರೈಸ್‌! ಮಹಿಳಾ ದಿನಕ್ಕೆ ಸ್ಪೆಷಲ್ ಡೂಡಲ್

author img

By

Published : Mar 8, 2023, 7:21 AM IST

Updated : Mar 8, 2023, 8:49 AM IST

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇಂದು ಗೂಗಲ್ ತನ್ನ ಡೂಡಲ್​ನಲ್ಲಿ ವಿಭಿನ್ನವಾಗಿ ಶುಭಾಶಯ ತಿಳಿಸಿದೆ.

google doodle
ಗೂಗಲ್ ಡೂಡಲ್

ಇಂದು ಹೆಣ್ಣು ಅಬಲೆಯಲ್ಲ ಸಬಲೆ ಎಂಬುದನ್ನು ಸಾಬೀತು ಮಾಡಿದ್ದಾಳೆ. ಆರ್ಥಿಕತೆಯ ಎಲ್ಲಾ ಕ್ಷೇತ್ರಗಳಲ್ಲೂ ವಿಶೇಶ ಸಾಧನೆ ಮಾಡುವ ಮೂಲಕ ಪುರುಷನಷ್ಟೇ ಸರಿಸಮಾನವಾಗಿ ಬೆಳೆಯುತ್ತಿದ್ದಾಳೆ. ಅಮ್ಮನಾಗಿ, ಅಕ್ಕವನಾಗಿ, ಪತ್ನಿಯಾಗಿ, ತಂಗಿಯಾಗಿ ಹೀಗೆ ಅನೇಕ ರೂಪಗಳಲ್ಲಿ ಜೀವನ ರೂಪಿಸಿಕೊಟ್ಟ ಸ್ತ್ರೀಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಅರ್ಪಿಸಲೇಬೇಕು. ಜಾಗತಿಕ ಸರ್ಚ್ ಎಂಜಿನ್ ಗೂಗಲ್ ಕೂಡಾ ತನ್ನ ಮುಖಪುಟವನ್ನು ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸುವ ಮೂಲಕ ಎಲ್ಲಾ ಮಹಿಳಾಮಣಿಗಳಿಗೆ ಅಂತಾರಾಷ್ಟ್ರೀಯ ಮಹಿಳಾ ದಿನ 2023ರ ಶುಭಾಶಯಗಳನ್ನು ವಿಭಿನ್ನವಾಗಿ ತಿಳಿಸಿದೆ.

ಮಹಿಳಾ ದಿನಾಚರಣೆಯ ಇತಿಹಾಸ: ಪ್ರತಿ ವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿನ ಸಾಧನೆಗಳು ಮತ್ತು ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಸಂಭ್ರಮಿಸುವ ಮಹತ್ವದ ದಿನ ಇದಾಗಿದೆ. ಮಹಿಳಾ ದಿನದ ಪರಿಕಲ್ಪನೆಯು 1900 ರ ದಶಕದ ಆರಂಭದಲ್ಲಿ ಬೆಳಕಿದೆ ಬಂದಿದೆ. 28 ಫೆಬ್ರವರಿ 1909 ರಂದು ಮೊದಲ ಬಾರಿಗೆ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಮಹಿಳಾ ದಿನವನ್ನು ಆಚರಿಸಲಾಯಿತು. ಅಂದು 15,000 ಮಹಿಳೆಯರು ಕಡಿಮೆ ಸಮಯ, ಉತ್ತಮ ವೇತನ ಮತ್ತು ಮತದಾನದ ಹಕ್ಕುಗಳನ್ನು ಒತ್ತಾಯಿಸಿ ನ್ಯೂಯಾರ್ಕ್ ನಗರದಲ್ಲಿ ಮೆರವಣಿಗೆ ನಡೆಸಿದರು. 1910 ರ ವೇಳೆಗೆ ಯುರೋಪ್‌ನ ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಎರಡನೇ ಅಂತಾರಾಷ್ಟ್ರೀಯ ಕಾರ್ಮಿಕ ಮಹಿಳೆಯರ ಸಮ್ಮೇಳನ ನಡೆಸಲಾಯಿತು. ಜರ್ಮನಿಯ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿಯ ಮಹಿಳಾ ಕಚೇರಿಯ ನೇತೃತ್ವ ವಹಿಸಿದ್ದ ಕ್ಲಾರಾ ಜೆಟ್ಕಿನ್ ಅವರು ಅಂತಾರಾಷ್ಟ್ರೀಯ ಮಹಿಳಾ ದಿನದ ಕಲ್ಪನೆಯನ್ನು ಮಂಡಿಸಿದ್ದರು. ಆ ಬಳಿಕ, ಮಾರ್ಚ್ 9, 1911 ರಂದು ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್​ನಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.

ವಿಶ್ವಸಂಸ್ಥೆಯು 1975 ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಆರಂಭಿಸಿತು. 1977 ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯು ಮಹಿಳೆಯರ ಹಕ್ಕುಗಳು ಹಾಗೂ ಜಾಗತಿಕ ಶಾಂತಿಯನ್ನು ಬೆಂಬಲಿಸಲು ಮಾರ್ಚ್‌ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ಎಂದು ಘೋಷಣೆ ಮಾಡಿತು. ಅಂದಿನಿಂದ ಪ್ರತಿ ವರ್ಷ ಮಾರ್ಚ್‌ 8 ರಂದು ಮಹಿಳಾ ದಿನಾಚರಣೆ ಮಾಡಲಾಗುತ್ತಿದೆ. ಪ್ರತಿ ವರ್ಷ ಹೊಸ ಥೀಮ್​ನೊಂದಿಗೆ ಈ ದಿನಾಚರಣೆ ನಡೆಯುತ್ತದೆ.

ಇದನ್ನೂ ಓದಿ: ಮಹಿಳಾ ದಿನಾಚರಣೆ: ಮಹಿಳಾ ಪ್ರಯಾಣಿಕರಿಗೆ ಬಿಎಂಟಿಸಿಯಲ್ಲಿ ನಾಳೆ ಉಚಿತ ಪ್ರಯಾಣ

ಈ ವರ್ಷದ ಥೀಮ್: ಪ್ರತಿ ವರ್ಷ ಸಹ ವಿಶ್ವಸಂಸ್ಥೆಯು ಮಹಿಳಾ ದಿನವನ್ನ ಒಂದೊಂದು ಪರಿಕಲ್ಪನೆ ಇರಿಸಿಕೊಂಡು ಆಚರಿಸಲಾಗುತ್ತದೆ. ಈ ವರ್ಷ "DigitALL: ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ" ಎಂಬ ಥೀಮ್ ಆಯ್ಕೆ ಮಾಡಲಾಗಿದೆ. ಇದು ಲಿಂಗ ಸಮಸ್ಯೆಗಳನ್ನು ಬೆಳಕಿಗೆ ತರುವಲ್ಲಿ ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಉದ್ದೇಶ ಹೊಂದಿದೆ.

ಮಹಿಳಾ ದಿನದ ಮಹತ್ವ: ನಮ್ಮ ಸಮಾಜಗಳಲ್ಲಿ ಲಿಂಗ ಅಸಮಾನತೆ ಮತ್ತು ತಾರತಮ್ಯ ಅತಿರೇಕವಾಗಿದೆ. ಬಹುತೇಕ ಹೆಣ್ಣು ಮಕ್ಕಳು ಇಂತಹ ಅನೇಕ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಈ ಲಿಂಗ ಪಕ್ಷಪಾತದ ವಿರುದ್ಧ ಹೋರಾಡಲು ಮತ್ತು ಲಿಂಗ ಸಮಾನತೆ, ಸಂತಾನೋತ್ಪತ್ತಿ ಹಕ್ಕುಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ನಿಂದನೆಯಂತಹ ಸಮಸ್ಯೆಗಳತ್ತ ಗಮನಹರಿಸಲು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತದೆ. ಸಮಾಜದಲ್ಲಿ ಜಾಗೃತಿ ಮೂಡಿಸುವ ಮತ್ತು ಬದಲಾವಣೆಗೆ ಪ್ರೇರಣೆ ನೀಡುವ ವೇದಿಕೆ ಇದಾಗಿದೆ.

ಮಹಿಳಾ ಸ್ವಾತಂತ್ರ್ಯ: ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಗಾದೆಯಂತೆ ಮಹಿಳೆಯರಿಗೆ ಶಿಕ್ಷಣ ನೀಡಿದ್ರೆ, ಆಕೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜಕ್ಕೆ ಒಳ್ಳೆಯ ನಾಗರಿಕರನ್ನು ನೀಡುತ್ತಾಳೆ. ಶಿಕ್ಷಣದ ಸ್ವಾತಂತ್ರ್ಯ ಮಾತ್ರವಲ್ಲದೇ, ಮಹಿಳೆಗೆ ಔದ್ಯೋಗಿಕ ಹಕ್ಕು, ಮದುವೆಗೆ ಸಂಗಾತಿಯ ಆಯ್ಕೆ, ಮಕ್ಕಳಿಗೆ ಜನ್ಮ ನೀಡುವ ಸ್ವಾತಂತ್ರ, ಕಾಮುಕರ ಕೃತ್ಯಕ್ಕೆ ಬಲಿಯಾಗದೇ ಸಹಜ, ಸ್ವಚ್ಛಂದ ಜೀವನ ನಡೆಸಲು ಎಂದು ಅವಕಾಶ ದೊರೆಯುತ್ತದೋ ಆಗ ಮಹಿಳೆಯರಿಗೆ ನಿಜವಾದ ಸ್ವಾತಂತ್ರ್ಯ ಬಂದಂತೆ.

ಇದನ್ನೂ ಓದಿ: ವಿಶ್ವ ಮಹಿಳಾ ದಿನ: ಕೊರೊನಾ ಸಂಕಷ್ಟದಲ್ಲೂ ದೇಶ ಸೇವೆ ಮಾಡಿದ 'ಮಹಿಳೆ'ಗೆ ಕೃತಜ್ಞತೆ

ಮಹಿಳೆಯರ ಸಾಧನೆ: ಭಾರತದಲ್ಲಿ ಮಹಿಳೆಯರು ಎಲ್ಲಾ ರಂಗದಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ. ಸೈನ್ಯಕ್ಕೆ ಸೇರುತ್ತಿದ್ದಾರೆ, ವಿಮಾನ ಚಾಲನೆ ಮಾಡುತ್ತಿದ್ದಾರೆ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ. ವಿಶ್ವ ಸುಂದರಿ, ಭುವನ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದರೂ ಶಾರೀರಿಕ, ಮಾನಸಿಕ, ಶೋಷಣೆ ಮಾತ್ರ ನಿಂತಿಲ್ಲ. ಮಹಿಳೆಯರ ಮೇಲಿನ ದಬ್ಬಾಳಿಕೆ, ಶೋಷಣೆ, ಲಿಂಗ ತಾರತಮ್ಯ, ಅಸಮಾನತೆ ಇಂದಿಗೂ ಮುಂದುವರಿಯುತ್ತಿರುವುದು ದುರಂತ. ಅಷ್ಟೇ ಅಲ್ಲದೇ, ಏನೂ ಅರಿಯದ ಕಂದಮ್ಮಗಳ ಮೇಲೆ ನಡೆಯುತ್ತಿರುವ ಬಲಾತ್ಕಾರವಂತೂ ಖಂಡನೀಯ. ಈ ಕುರಿತು ಎಲ್ಲರೂ ಧ್ವನಿ ಎತ್ತೋಣ.

Last Updated : Mar 8, 2023, 8:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.