ETV Bharat / bharat

ಮಹದಾಯಿ ವಿವಾದ: ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಹೋರಾಡುತ್ತೇವೆ.. ಗೋವಾ ಸಿಎಂ ಘೋಷಣೆ

author img

By

Published : Jan 25, 2023, 11:37 AM IST

ಮಹದಾಯಿ ನದಿಗೆ ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಸಲ್ಲಿಸಿದ್ದ ಡಿಪಿಆರ್​ಗೆ ಕೇಂದ್ರ ಅನುಮೋದನೆ ನೀಡಿದ ಬಳಿಕ ನಿರಂತರವಾಗಿ ಗೋವಾ ಸರ್ಕಾರ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಇದರ ವಿರುದ್ಧ ಹೋರಾಟ ಮುಂದುವರಿಸುತ್ತೇವೆ ಎಂದು ಸಿಎಂ ಪ್ರಮೋದ್​ ಸಾವಂತ್​ ಹೇಳಿದ್ದಾರೆ.

ಮಹದಾಯಿ ವಿವಾದ: ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಹೋರಾಡುತ್ತೇವೆ ಎಂದ ಗೋವಾ ಸಿಎಂ
goa-cm-says-we-will-fight-politically-and-legally-for-mahadayi

ಪಣಜಿ: ಮಹದಾಯಿ ಯೋಜನೆಯಲ್ಲಿ ನಾವು ಕಾನೂನಾತ್ಮಕ, ತಾಂತ್ರಿಕ ಮತ್ತು ರಾಜಕೀಯ ಮುನ್ನಲೆಯಲ್ಲಿ ಹೋರಾಡುತ್ತಿದ್ದು, ಇದರಲ್ಲಿ ನಮಗೆ ಜಯ ಸಿಗಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಹಾದಾಯಿ ನದಿಯ ಉಪನದಿಗಳಾದ ಕಳಸಾ ಮತ್ತು ಬಂಡೂರಿ ಮೇಲೆ ಕರ್ನಾಟಕವು ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಮಹದಾಯಿ ನೀರನ್ನು ತಿರುಗಿಸುವ ಅಕ್ರಮವಾಗಿ ತಿರುಗಿಸಿದ್ದ ವಿವಾದ ಕರ್ನಾಟಕ ಮತ್ತು ಗೋವಾದ ನಡುವೆ ಇದ್ದು, ಈ ಸಂಬಂಧ ಎರಡು ನ್ಯಾಯಾಂಗ ನಿಂದನೆ ಅರ್ಜಿಗಳು ಸುಪ್ರೀಂಕೋರ್ಟ್​ ಮುಂದೆ ಇವೆ.

ಮಹದಾಯಿ ನದಿಗೆ ಅಡ್ಡಲಾಗಿ ಎರಡು ಅಣೆಕಟ್ಟುಗಳ ನಿರ್ಮಾಣಕ್ಕೆ ಕರ್ನಾಟಕ ಸಲ್ಲಿಸಿದ್ದ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಕೇಂದ್ರ ಜಲ ಆಯೋಗ ಇತ್ತೀಚೆಗೆ ಅನುಮೋದನೆ ನೀಡಿತ್ತು. ಇದಕ್ಕೆ ಗೋವಾ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಈ ಯೋಜನೆ ಉತ್ತರ ಗೋವಾದಲ್ಲಿರುವ ಮಹದಾಯಿ ವನ್ಯಜೀವಿ ಅಭಯಾರಣ್ಯದ ಮೂಲಕ ಸಾಗುತ್ತದೆ. ಈ ಹಿನ್ನಲೆ ಕರ್ನಾಟಕವು ಮಹದಾಯಿ ನದಿಯಿಂದ ನೀರನ್ನು ತಿರುಗಿಸಲು ಸಾಧ್ಯವಿಲ್ಲ ಎಂದು ಗೋವಾ ಸರ್ಕಾರ ವಾದ ಮಂಡಿಸಿದೆ.

ನಮ್ಮ ಹೋರಾಟ ನಿಲ್ಲದು- ಸಾವಂತ್​: ಯಾರು ಏನೇ ಹೇಳಿದರೂ ನಾವು ನಿರ್ಧರಿಸಿ ಆಗಿದೆ. ಮಹದಾಯಿಗಾಗಿ ನಾವು ಏನು ಮಾಡುತ್ತಿದ್ದೆವೋ ಅದನ್ನು ಕಾನೂನು ಬದ್ದವಾಗಿ, ತಾಂತ್ರಿಕವಾಗಿ ಮತ್ತು ರಾಜಕೀಯದ ಮೂಲಕ ಮಾಡುತ್ತಿದ್ದೇವೆ. ಈ ಹೋರಾಟ ಗೆಲ್ಲಲು ಏನು ಬೇಕೋ ಅದನ್ನು ಮುಂದುವರಿಸಿದ್ದೇವೆ ಎಂದು ಸಾವಂತ್​​ ಮತ್ತೊಮ್ಮೆ ಪುನರ್ ಉಚ್ಚರಿಸಿದ್ದಾರೆ.

ಸುಪ್ರೀಂಕೊರ್ಟ್​​ ಆದೇಶದಂತೆ ನಮ್ಮ ಸರ್ಕಾರದ ನಿರ್ಧಾರ: ಕಳೆದೆರಡು ದಿನಗಳ ಹಿಂದೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಕಳಸಾ - ಬಂಡೂರಿನ ವಿಷಯದಲ್ಲಿ ಗೋವಾ ಸರ್ಕಾರ ತೆಗೆದುಕೊಂಡ ನಿರ್ಣಯಕ್ಕೆ ಯಾವುದೇ ಮಾನ್ಯತೆ ಇಲ್ಲ. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಮಹದಾಯಿ ನ್ಯಾಯಾಧೀಕರಣ ರಚನೆ ಆಗಿದೆ. ಈ ನ್ಯಾಯಾಧೀಕರಣ 10 ವರ್ಷ ವಿಚಾರಣೆ ನಡೆಸಿ, ತೀರ್ಪು ನೀಡಿದ್ದು, ಈ ತೀರ್ಪು ಸರ್ವೋಚ್ಛ ನ್ಯಾಯಾಲಯದ ನ್ಯಾಯಕ್ಕೆ ಸಮ. ಈ ಆದೇಶದ ಮೇಲೆ ನಾವು ವಿಸ್ತೃತ ಯೋಜನಾ ವರದಿ ತಯಾರಿಸಿದ್ದು, ಅದರ ಆಧಾರದ ಮೇಲೆ ನಾನು ಕಾನೂನು ಬದ್ಧವಾಗಿ ಕೆಲಸ ಮಾಡುತ್ತೇವೆ ಎಂದಿದ್ದರು. ಬೊಮ್ಮಾಯಿ ಅವರ ಈ ಹೇಳಿಕೆ ವಿರುದ್ಧ ಇದೀಗ ಗೋವಾ ಸಿಎಂ ಪ್ರತಿಕ್ರಿಯಿಸಿದ್ದಾರೆ.

ಏನಿದು ವಿವಾದ: ಕಳಸಾ ಬಂಡೂರಿ ನಾಲಾ ಯೋಜನೆಯು ಬೆಳಗಾವಿ, ಧಾರವಾಡ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ಮಹದಾಯಿಯಿಂದ ನೀರನ್ನು ತಿರುಗಿಸುವ ಗುರಿಯನ್ನು ಹೊಂದಿದೆ. 1980 ರ ದಶಕದಲ್ಲಿ ಪ್ರಸ್ತಾಪಿಸಲಾದ ಈ ಯೋಜನೆ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ನಡುವಿನ ವಿವಾದಕ್ಕೆ ಕಾರಣವಾಗಿದೆ.

ಈ ಯೋಜನೆಯು ಗೋವಾದ ಉತ್ತರ ಜಿಲ್ಲೆಯ ಜನರ ಕುಡಿಯುವ ನೀರಿನ ಪೂರೈಕೆ ಮೇಲೆ ವ್ಯತ್ಯಾಯವಾಗಲಿದೆ. ಜೊತೆಗೆ ಇದು ವನ್ಯ ಜೀವಿ ಅಭಯಾರಣ್ಯದ ಮೂಲಕ ಹಾದು ಹೋಗುವುದರಿಂದ ಜೀವ ಸಂಕುಲದ ಮೇಲೆ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣಕ್ಕೆ ವಿರೋಧವಿದೆ ಎಂಬುದು ಗೋವಾ ಸರ್ಕಾರದ ವಾದ. ಇದೀಗ ಕರ್ನಾಟಕದ ವಿಸ್ತ್ರತ ಯೋಜನೆಗೆ ಕೇಂದ್ರ ಅನುಮೋದನೆ ನೀಡಿರುವುದರ ವಿರುದ್ಧ ಗೋವಾ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಂಬಂಧ ಗೋವಾ ವಿಧಾನ ಸಭೆಯಲ್ಲಿ ದೀರ್ಘ ಚರ್ಚೆಯ ಬಳಿಕ ನಿರ್ಣಯ ಮಂಡಿಸಿದೆ.

ಅಲ್ಲದೇ, ತಮ್ಮ ನೇತೃತ್ವದ ನಿಯೋಗ ಪ್ರಧಾನಿ ಹಾಗೂ ಜಲ ಸಚಿವರನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸುತ್ತೇವೆ ಎಂದು ಗೋವಾ ಸಿಎಂ ತಿಳಿಸಿದ್ದರು. ಈ ಸಂಬಂಧ ಗೋವಾದಲ್ಲಿ ಸಹಿ ಸಂಗ್ರಹ ಅಭಿಯಾನ ಕೂಡ ನಡೆಸಲಾಗಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್ ತಯಾರಿಕೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಮುಖರ ತಂಡ ಹೀಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.