ETV Bharat / bharat

ಕಾರಿನಡಿ ಬಿದ್ದರೂ ಗಮನಿಸದ ಚಾಲಕ: ಪುಟ್ಟ ಬಾಲಕಿ ದುರ್ಮರಣ

author img

By

Published : Feb 24, 2023, 8:28 PM IST

ಗುಜರಾತ್​ನ ಸೂರತ್​ನಲ್ಲಿ ಸಂಬಂಧಿಯೊಬ್ಬರು ಚಾಲನೆ ಮಾಡುತ್ತಿದ್ದ ಕಾರಿನಡಿ ಸಿಲುಕಿ ಬಾಲಕಿ ಮೃತಪಟ್ಟಿರುವ ಘಟನೆ ಜರುಗಿದೆ.

girl died after being hit by her uncles car in Surat
ಕಾರಿನಡಿ ಬಿದ್ದರೂ ಗಮನಿಸದ ಚಾಲಕ.. ಪುಟ್ಟ ಬಾಲಕಿ ದಾರುಣ ಸಾವು: ವಿಡಿಯೋ

ಕಾರಿನಡಿ ಬಿದ್ದರೂ ಗಮನಿಸದ ಚಾಲಕ.. ಪುಟ್ಟ ಬಾಲಕಿ ದಾರುಣ ಸಾವು: ವಿಡಿಯೋ

ಸೂರತ್ (ಗುಜರಾತ್​): ಮನೆಯ ಆವರಣದಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಬಾಲಕಿಯೊಬ್ಬಳು ಕಾರಿನ ಚಕ್ರದಡಿ ಸಿಲುಕಿ ಮೃತಪಟ್ಟಿದ್ದಾಳೆ. ದಾರುಣ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ. ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಶ್ರಂಭಾಯಿ ಎಂಬುವವರು ತಮ್ಮ ಪತ್ನಿ, ಮಗ ಮತ್ತು ಮಗಳ ಸಮೇತವಾಗಿ ಇಲ್ಲಿನ ಗೋಡದಾರ ಪ್ರದೇಶದಲ್ಲಿರುವ ಶಿವಸಾಗರ ರೆಸಿಡೆನ್ಸಿಗೆ ಬಂದಿದ್ದರು. ಈ ವೇಳೆ ವಶ್ರಂಭಾಯಿ ಅವರ ಮೂರು ವರ್ಷದ ಮಗಳು ಹಾಗೂ ಇತರ ಮೂರ್ನಾಲ್ಕು ಮಕ್ಕಳೊಂದಿಗೆ ಮನೆಯ ಆವರಣದಲ್ಲಿ ಆಟವಾಗುತ್ತಿದ್ದಳು. ಮೂವರು ಬಾಲಕರು ಎರಡು ಸೈಕಲ್​ಗಳನ್ನು ಹಿಡಿದು ಆಟವಾಡುತ್ತಿದ್ದರು. ಮತ್ತೊಂದೆಡೆ, ಕೈಯಲ್ಲಿ ಗುಲಾಬಿ ಬಣ್ಣದ ಚೆಂಡು ಹಿಡಿದುಕೊಂಡು ಬಾಲಕಿ ಇದ್ದಕ್ಕಿದ್ದಂತೆ ಗೇಟ್​ನ ಬಳಿಗೆ ಬಂದಿದ್ದಾಳೆ. ಕಾರೊಂದು ಬಂದು ಬಾಲಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಕೆ ಅದರ ಚಕ್ರದಡಿ ಸಿಲುಕಿದ್ದಾಳೆ.

ಇದೇ ವೇಳೆ ಬಾಲಕಿ ಮೇಲೆ ಕಾರು ಹರಿದ ದೃಶ್ಯವನ್ನು ಗಮನಿಸಿದ ಮಹಿಳೆಯೊಬ್ಬರು ತಕ್ಷಣವೇ ಕೂಗುತ್ತಾ ಓಡಿ ಬರುತ್ತಾರೆ. ಬಾಲಕಿಯನ್ನು ಮಹಿಳೆ ಎತ್ತಿಕೊಳ್ಳುತ್ತಾರೆ. ಇಷ್ಟರಲ್ಲಿ ಮತ್ತೊಬ್ಬ ವ್ಯಕ್ತಿ ಕೂಡ ದೌಡಾಯಿಸುತ್ತಾರೆ. ಬಳಿಕ ಕಾರು ಚಾಲಕ ಕೂಡ ಕೆಳಗಿದು ಹೊರಬರುತ್ತಾನೆ. ಇದಾದ ಸ್ವಲ್ಪ ಹೊತ್ತಿನಲ್ಲಿ ಬಾಲಕಿಯ ತಾಯಿ ಸೇರಿದಂತೆ ಮನೆಯಲ್ಲಿರುವ ಎಲ್ಲರೂ ಧಾವಿಸುತ್ತಾರೆ. ನಂತರ ಸ್ಕೂಟರ್​ನಲ್ಲಿ ಇಬ್ಬರು ಪುರುಷರು ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸುತ್ತಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಪುಟ್ಟ ಕಂದಮ್ಮ ಅಸುನೀಗಿದೆ.

ಘಟನೆ ವೇಳೆ ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿ ಬಾಲಕಿಯ ಸಂಬಂಧಿಯಾದ ದಿನೇಶ್​ ಅಹಿರ್​ ಎಂದು ಗುರುತಿಸಲಾಗಿದೆ. ಬಾಲಕಿ ಕಾರಿನಡಿ ಸಿಲುಕಿದಾಗ ತಲೆಗೆ ಪೆಟ್ಟು ಬಿದ್ದಿದೆ. ಇದರಿಂದ ಆಕೆ ಕೊನೆಯುಸಿರೆಳೆದಿದ್ದಾಳೆ. ಚಾಲಕನ ವಿರುದ್ಧ ಪ್ರಕರಣ ದಾಖಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿ ದಿಲೀಪ್​ ಭಾಯಿ ತಿಳಿಸಿದ್ದಾರೆ.

ತಾಯಿ ಸಾವು - ಮಗಳು ಬಚಾವ್​: ಮತ್ತೊಂದೆಡೆ, ಇದೇ ಸೂರತ್​ನಲ್ಲಿ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ. ನಗರದ ಎಂಟ್‌ಲೈನ್ಸ್ ಪ್ರದೇಶದ ನ್ಯೂ ಕೋರ್ಟ್ ಬಳಿ ತಾಯಿ ಮತ್ತು ಮಗಳು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ತಾಯಿ ಫರ್ಹಾನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಗಳು ಜುವೇರಿಯಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಬಸ್ ಚಾಲಕ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ತಾಯಿ ಮತ್ತು ಮಗಳು ಇಬ್ಬರೂ ಕೆಳಗೆ ಬಿದ್ದಿರುವುದು ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು ಗಮನಿಸಿದ ರಸ್ತೆಯಲ್ಲಿ ಜನರು ಕೂಡಲೇ ದೌಡಾಯಿಸುತ್ತಾರೆ. ಅಷ್ಟರಲ್ಲಿ ಬಸ್ ಚಾಲಕ ಪರಾರಿಯಾಗಿದ್ದಾನೆ. ನಂತರ ಜನರೇ ಆಂಬ್ಯುಲೆನ್ಸ್ ಮೂಲಕ ಇಬ್ಬರನ್ನೂ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಬಸ್​ ಚಾಲಕನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ 11 ಮಂದಿ ದುರ್ಮರಣ.. 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.