ETV Bharat / bharat

ವಿಆರ್​ಎಸ್​ ಬೆನ್ನಲ್ಲೇ ಒಡಿಶಾ 5T ಅಧ್ಯಕ್ಷರಾಗಿ ನೇಮಕಗೊಂಡ ಮಾಜಿ ಐಎಎಸ್​ ಅಧಿಕಾರಿ ವಿ ಕೆ ಪಾಂಡಿಯನ್​

author img

By ETV Bharat Karnataka Team

Published : Oct 24, 2023, 12:56 PM IST

Updated : Oct 24, 2023, 1:05 PM IST

ಸೋಮವಾರ ಐಎಎಸ್​ ಅಧಿಕಾರಿ ವಿ ಕೆ ಪಾಂಡಿಯನ್​ ಅವರು ತಮ್ಮ ಸರ್ಕಾರಿ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಅಚ್ಚರಿ ಎಂದರೆ ವಿಆರ್​ಎಸ್​ ಪಡೆದ ಮರುಗಳಿಗೆಯಲ್ಲೇ ಅವರಿಗೆ ಕ್ಯಾಬಿನೆಟ್​ ದರ್ಜೆ ಸ್ಥಾನಮಾನ ನೀಡಿ 5 T ಹೊಣೆ ನೀಡಲಾಗಿದೆ.

Former IAS officer VK Pandian
ಮಾಜಿ ಐಎಎಸ್​ ಅಧಿಕಾರಿ ವಿ ಕೆ ಪಾಂಡಿಯನ್​

ಭುವನೇಶ್ವರ (ಒಡಿಶಾ): ಒಡಿಶಾ ಸಿಎಂ ನವೀನ್​ ಪಟ್ನಾಯಕ್​ ಅವರ ಮಾಜಿ ಆಪ್ತ ಸಹಾಯಕ ಹಾಗೂ ಮಾಜಿ ಐಎಎಸ್​ ಅಧಿಕಾರಿ ವಿ ಕೆ ಪಾಂಡಿಯನ್​ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ಒಂದು ದಿನದ ಅಂತರದಲ್ಲೇ ಕ್ಯಾಬಿನೆಟ್​ ಸಚಿವ ದರ್ಜೆ ಸ್ಥಾನಮಾನದೊಂದಿಗೆ '5ಟಿ' (ಪರಿವರ್ತನಾ ಉಪಕ್ರಮಗಳು) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಸೋಮವಾರ ಒಡಿಶಾ ಕೇಡರ್​ನ 2000 ಬ್ಯಾಚ್​ನ ಐಎಎಸ್​ ಅಧಿಕಾರಿ ವಿ ಕೆ ಪಾಂಡಿಯನ್​ ತಮ್ಮ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ನಿವೃತ್ತಿ ಪಡೆದ ಬೆನ್ನಲ್ಲೇ ಪಾಂಡಿಯನ್​ ರಾಜ್ಯ ರಾಜಕೀಯಕ್ಕೆ ಎಂಟ್ರಿ ಪಡೆಯುತ್ತಾರೆ ಎನ್ನುವ ಊಹಾಪೋಹಗಳು ಎದ್ದಿದ್ದವು. ಇದೀಗ ಆ ಊಹಾಪೋಹ ನಿಜವಾಗಿದ್ದು, ಸಿಎಂ ನವೀನ್​ ಪಟ್ನಾಯಕ್​, ಪಾಂಡಿಯನ್​ ಅವರಿಗೆ ರಾಜ್ಯ ರಾಜಕೀಯದಲ್ಲಿ ಪ್ರಮುಖವಾದ ಹುದ್ದೆಯನ್ನು ನೀಡಿದ್ದಾರೆ. ಪಾಂಡಿಯನ್​ 5ಟಿ ಅಧ್ಯಕ್ಷರಾಗಿ ಹಾಗೂ ಸಿಎಂ ನವೀನ್​ ಪಟ್ನಾಯಕ್​ ಅವರ ಬಳಗ ಸೇರಿಕೊಂಡಿದ್ದಾರೆ.

ಇತ್ತೀಚಿನ ನೇಮಕಾತಿಯ ಪ್ರಕಾರ ಪಾಂಡಿಯನ್​ ಅವರು ನೇರವಾಗಿ ಮುಖ್ಯಮಂತ್ರಿ ಪಟ್ನಾಯಕ್​ ಅವರ ಅಡಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸಾಮಾನ್ಯ ಆಡಳಿತ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆ ತಿಳಿಸಿದೆ. ಇದಕ್ಕೂ ಹಿಂದೆ 2011ರಲ್ಲಿ ಪಾಂಡಿಯನ್​ ಅವರು ಮುಖ್ಯಮಂತ್ರಿ ಕಚೇರಿಗೆ ಎಂಟ್ರಿ ಕೊಟ್ಟಿದ್ದರು. ಅಂದಿನಿಂದ ಪಟ್ನಾಯಕ್​ ಅವರ ಖಾಸಗಿ ಕಾರ್ಯದರ್ಶಿಯಾಗಿ ಅವರು ಕಾರ್ಯನಿರ್ವಹಿಸಿದ್ದರು.

2019ರಲ್ಲಿ ಪಟ್ನಾಯಕ್​ ಅವರು ಐದನೇ ಬಾರಿಗೆ ಮುಖ್ಯಮಂತ್ರಿಯಾದ ನಂತರ ಸರ್ಕಾರಿ ಇಲಾಖೆಗಳಲ್ಲಿ ಕೆಲವು ಪರಿವರ್ತನಾ ಉಪಕ್ರಮಗಳನ್ನು ಜಾರಿಗೆ ತರಲು ಪಾಂಡಿಯನ್​ ಅವರಿಗೆ '5ಟಿ' ಕಾರ್ಯದರ್ಶಿಯಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಆಡಳಿತಾರೂಢ ಬಿಜೆಡಿಯ ಕೆಲವು ಮೂಲಗಳು, ಪಾಂಡಿಯನ್​ ಅವರ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ. ಮುಂದಿನ ವರ್ಷ ಆರಂಭದಲ್ಲಿ ನಡೆಯಲಿರುವ ಒಡಿಶಾ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅವರಿಗೆ ಮಹತ್ವದ ಸ್ಥಾನಮಾನ ನೀಡುವ ಸಾಧ್ಯತೆ ಇದೆ ಎಂದು ತಿಳಿಸಿವೆ.

ಮುಖ್ಯಮಂತ್ರಿ ಅವರ ಆಪ್ತ ಸಹಾಯಕರಾಗಿ ಪಾಂಡಿಯನ್​ ಅವರಿಗೆ ಪ್ರಾಮುಖ್ಯತೆ ದೊರತ ವೇಳೆ ಅವರು ಕೆಲವೊಂದು ವಿವಾದಗಳಲ್ಲಿ ಸಿಲುಕಿದ್ದರು. ವಿರೋಧ ಪಕ್ಷಗಳು, ಪಾಂಡಿಯನ್​ ಅವರು ರಾಜಕೀಯ ಲಾಭಗಳಿಗಾಗಿ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದವು. ಇದೀಗ ಅವರಿಗೆ ಸಿಎಂ ಪಟ್ನಾಯಕ್​ ಮಹತ್ವದ ಜವಾಬ್ದಾರಿ ನೀಡಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಪಾಂಡಿಯನ್​ ಅವರು 2002ರಲ್ಲಿ ಕಲಹಂಡಿ ಜಿಲ್ಲೆಯ ಧರ್ಮಗಢದ ಉಪ ಜಿಲ್ಲಾಧಿಕಾರಿಯಾಗಿ ತಮ್ಮ ಸರ್ಕಾರಿ ವೃತ್ತಿಜೀವನವನ್ನು ಆರಂಭಿಸಿದವರು. ನಂತರ 2005ರಲ್ಲಿ ಮಯೂರ್ಭಂಜ್​ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ, ನಂತರ 2007ರಲ್ಲಿ ಗಂಜಾಂನ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಗಂಜಾಂನ ಜಿಲ್ಲಾಧಿಕಾರಿಯಾಗಿದ್ದ ವೇಳೆ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ಅವರಿಗೆ ಆಪ್ತವಾದರು.

ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್​ನಲ್ಲಿ ಸತೀಶ್​ಗೆ ಹಿಂಸೆ ಆಗುತ್ತಿದೆ: ರಮೇಶ್ ಜಾರಕಿಹೊಳಿ

Last Updated : Oct 24, 2023, 1:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.