ETV Bharat / bharat

ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಸಾಧ್ಯತೆ

author img

By

Published : Aug 19, 2023, 5:27 PM IST

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್​ ಸರ್ಜರಿಗೆ ಮುಂದಾಗಿದೆ. ಮಾಜಿ ಐಎಎಸ್​ ಅಧಿಕಾರಿ ಸಸಿಕಾಂತ್​ ಸೆಂಥಿಲ್​ಗೆ ತಮಿಳುನಾಡು ರಾಜ್ಯಾಧ್ಯಕ್ಷ ಪಟ್ಟ ಕಟ್ಟಲು ಚಿಂತನೆ ನಡೆಸಿದೆ.

ಸಸಿಕಾಂತ್ ಸೆಂಥಿಲ್
ಸಸಿಕಾಂತ್ ಸೆಂಥಿಲ್

ಚೆನ್ನೈ(ತಮಿಳುನಾಡು): ಕರ್ನಾಟಕ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ ಮತ್ತು ಕಾಂಗ್ರೆಸ್‌ನ ದಲಿತ ನಾಯಕರಾಗಿರುವ ಸಸಿಕಾಂತ್ ಸೆಂಥಿಲ್ ಅವರು ತಮಿಳುನಾಡು ಕಾಂಗ್ರೆಸ್​ ರಾಜ್ಯಾಧ್ಯಕ್ಷರಾಗಿ ನೇಮಕವಾಗುವ ಸಾಧ್ಯತೆಯಿದೆ. ಬಿಜೆಪಿ ಈಗಾಗಲೇ ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ. ಈ ಮೂಲಕ ಎರಡು ರಾಷ್ಟ್ರೀಯ ಪಕ್ಷಗಳು ಮಾಜಿ ಐಎಎಸ್​-ಐಪಿಎಸ್​ ಅಧಿಕಾರಿಗಳ ನೇತೃತ್ವದಲ್ಲಿ ಪಕ್ಷ ಮುಂದುವರೆಸಲಿವೆ.

ಹಾಲಿ ಅಧ್ಯಕ್ಷರಾಗಿರುವ ಕೆ.ಎಸ್. ಅಳಗಿರಿ ಅವರ ಅಧಿಕಾರಾವಧಿ ಅಂತ್ಯಗೊಂಡಿದೆ. ಮುಂಬರುವ ಲೋಕಸಭೆ ಚುನಾವಣೆಯವರೆಗೂ ಅವರನ್ನೇ ಮುಂದುವರಿಸಲು ಅವರ ಬೆಂಬಲಿಗರು ರಾಷ್ಟ್ರೀಯ ನಾಯಕತ್ವದ ಮೇಲೆ ಒತ್ತಡ ಹೇರುತ್ತಿದ್ದರೆ, ಬಿಜೆಪಿ ಮಾಡಿದ ತಂತ್ರದಂತೆ ಮಾಜಿ ಐಎಎಸ್ ಅಧಿಕಾರಿಯೊಬ್ಬರಿಗೆ ಪಕ್ಷದ ಚುಕ್ಕಾಣಿ ನೀಡಲು ಇನ್ನೊಂದೆಡೆಯಿಂದ ಅಭಿಪ್ರಾಯ ಕೇಳಿಬಂದಿದೆ.

ತಮಿಳುನಾಡು ಕಾಂಗ್ರೆಸ್ ಸಮಿತಿಯು (ಟಿಎನ್‌ಸಿಸಿ) ಈಗ ಮೂರು ಬಣಗಳಾಗಿದೆ. ಅಧ್ಯಕ್ಷ ಅಳಗಿರಿ ನೇತೃತ್ವದಲ್ಲಿ ಒಂದು ಗುಂಪು ಇದ್ದರೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ಸೆಲ್ವಪೆರುತುಂಗೈ ಅವರ ನೇತೃತ್ವದಲ್ಲಿ 2ನೇ ಬಣ, ಸಸಿಕಾಂತ್ ಸೆಂಥಿಲ್ ಅವರ ಉಮೇದುವಾರಿಕೆಯನ್ನೂ ಬೆಂಬಲಿಸುವ ಇನ್ನೊಂದು ಬಣವಿದೆ.

ಸೆಂಥಿಲ್ ಅವರು ಯಾವುದೇ ಬಣದಲ್ಲಿ ಗುರುತಿಸಿಕೊಂಡಿಲ್ಲ. ರಾಜ್ಯದ ಕೆಲವು ಹಿರಿಯ ಕಾಂಗ್ರೆಸ್ ನಾಯಕರು ಅಳಗಿರಿ ಅವರ ಬದಲಾಗಿ ಹೆಚ್ಚು ಕ್ರಿಯಾಶೀಲ ಮತ್ತು ಉತ್ಸಾಹಭರಿತ ನಾಯಕರಾದ ಸಸಿಕಾಂತ್ ಸೆಂಥಿಲ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದರೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂದು ಅಭಿಪ್ರಾಯ ಮಂಡಿಸಿದ್ದಾರೆ.

ಚುನಾವಣಾ ತಂತ್ರಗಾರಿಕೆ ತಂಡದಲ್ಲಿ ಕೆಲಸ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಅಧಿಕಾರವನ್ನು ವಶಪಡಿಸಿಕೊಂಡ ಕಾಂಗ್ರೆಸ್‌ನ ಚುನಾವಣಾ ತಂತ್ರಗಾರಿಕೆ ತಂಡದಲ್ಲಿ ಸಸಿಕಾಂತ್​ ಸೆಂಥಿಲ್ ಅವರು ಪ್ರಮುಖರಾಗಿದ್ದರು. ಅವರ ನೇತೃತ್ವದಲ್ಲಿ ತಂಡ ರಾಜ್ಯದಲ್ಲಿ ಪಕ್ಷದ ಪರವಾಗಿ ಭರ್ಜರಿ ತಂತ್ರಗಾರಿಕೆ ನಡೆಸಿ ಯಶಸ್ಸು ಸಾಧಿಸಿತ್ತು. ಇದು ಸೆಂಥಿಲ್​ ಅವರ ಯೋಜನೆಗಳ ಮೇಲೆ ಬೆಳಕು ಚೆಲ್ಲಿತ್ತು. ಹೀಗಾಗಿ ಅವರ ಪರವಾಗಿ ಬಲವಾದ ಕೂಗು ಕೇಳಿಬರುತ್ತಿದೆ.

ಸೆಂಥಿಲ್​ ಸದ್ಯಕ್ಕೆ ಮಧ್ಯಪ್ರದೇಶ ಮತ್ತು ರಾಜಸ್ಥಾನ ಚುನಾವಣಾ ಪ್ರಚಾರದ ಉಸ್ತುವಾರಿ ವಹಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರನ್ನು ಸಮರ್ಥವಾಗಿ ಬಳಸಿಕೊಳ್ಳಲು ಪಕ್ಷ ಅವರಿಗೆ ಹೆಚ್ಚಿನ ಅಧಿಕಾರ ನೀಡಿದೆ. ಹೀಗಾಗಿ ಅನೇಕ ತಮಿಳುನಾಡು ನಾಯಕರು ಕ್ರಿಯಾಶೀಲ ಮತ್ತು ಯುವ ನಾಯಕನಿಗೆ ಪಕ್ಷದ ಮುಖ್ಯಸ್ಥ ಸ್ಥಾನದಲ್ಲಿ ಕೂರಿಸಲು ಪ್ರಯತ್ನ ನಡೆಸಿದ್ದಾರೆ.

ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆಯೊಂದಿಗೆ ಕಾಂಗ್ರೆಸ್ ರಾಜಕೀಯ ಮೈತ್ರಿ ಮಾಡಿಕೊಂಡಿದ್ದು, ರಾಜ್ಯದ ಎಲ್ಲಾ 39 ಲೋಕಸಭಾ ಸ್ಥಾನಗಳನ್ನು ಮೈತ್ರಿಕೂಟ ಗೆಲ್ಲುವ ಗುರಿ ಹೊಂದಿದೆ. ಹೀಗಾಗಿ ಕಾಂಗ್ರೆಸ್​ ತನ್ನ ನಾಯಕತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಯುವ ನಾಯಕತ್ವಕ್ಕೆ ಮಣೆ ಹಾಕಲು ಮುಂದಾಗಿದೆ.

ಇದನ್ನೂ ಓದಿ: Udyog ratna Ratan tata: ಕೈಗಾರಿಕೋದ್ಯಮಿ ರತನ್ ಟಾಟಾಗೆ ಉದ್ಯೋಗ ರತ್ನ ಪ್ರಶಸ್ತಿ ಪ್ರದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.