ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ: ಐವರು ಸಾವು

author img

By ETV Bharat Karnataka Desk

Published : Jan 19, 2024, 10:28 AM IST

Five people died in head-on collision between two motorcycles in Ganjam

ಬೈಕ್​ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ. ಗಾಯಗೊಂಡ ಓರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಂಜಂ(ಒಡಿಶಾ): ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಐವರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಒಡಿಶಾದ ಗಂಜಂನಲ್ಲಿ ನಡೆದಿದೆ. ಗಂಜಂ ಜಿಲ್ಲೆಯ ಸೊರೊಡಾ ಪೊಲೀಸ್ ಠಾಣೆ ವ್ಯಾಪ್ತಿಯ ಬರಡಿ ಗ್ರಾಮದ ಬಳಿ ಗುರುವಾರ ತಡರಾತ್ರಿ ಅಪಘಾತ ಸಂಭವಿಸಿತು.

ಪೊಲೀಸರ​ ಮಾಹಿತಿ ಪ್ರಕಾರ, ಎರಡು ಬೈಕ್​ಗಳಲ್ಲಿ ತಲಾ ಮೂವರು ತೆರಳುತ್ತಿದ್ದರು. ಒಂದು ದ್ವಿಚಕ್ರವಾಹನ ಅಸುರಬಂಧದಿಂದ ಸೊರಡ ಕಡೆಗೆ ಹೋಗುತ್ತಿದ್ದರೆ, ಇನ್ನೊಂದು ಬೈಕ್​ ಸೊರಡದಿಂದ ಹಿಂತಿರುಗಿ ಬರುತ್ತಿದ್ದಾಗ ಅಪಘಾತ ನಡೆದಿದೆ. ಆರು ಜನರಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರ ಗಾಯಗೊಂಡ ಇಬ್ಬರನ್ನು ಚಿಕಿತ್ಸೆಗಾಗಿ ಬ್ರಹ್ಮಪುರ ವೈದ್ಯಕೀಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಓರ್ವ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಮತ್ತೋರ್ವನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರನ್ನು ರಜನಿ ಗೌಡ, ಮಹೇಂದ್ರ ನಾಯಕ್, ಶ್ರೀಕಾಂತ ಗೌಡ ಮತ್ತು ಮನೋಜ್ ಡಾಕುವಾ ಎಂದು ಗುರುತಿಸಲಾಗಿದೆ. ರಜನಿ ಮತ್ತು ಮಹೇಂದ್ರ ವಿದ್ಯುತ್ ಇಲಾಖೆ ಉದ್ಯೋಗಿಗಳಾಗಿದ್ದರು. ಮತ್ತೊಬ್ಬ ಮೃತರ ಗುರುತು ಪತ್ತೆಯಾಗಬೇಕಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಸ್ಥಳೀಯ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

ಪ್ರತ್ಯೇಕ ಘಟನೆ- ಪಂಜಾಬ್​ನಲ್ಲಿ ಬಸ್​ ಅಪಘಾತ: ನಿಂತಿದ್ದ ಟ್ರಕ್​ಗೆ ಬಸ್​ ಡಿಕ್ಕಿ ಹೊಡೆದು ನಾಲ್ವರು ಪೊಲೀಸ್ ಸಿಬ್ಬಂದಿ ಮೃತಪಟ್ಟ ಘಟನೆ ಪಂಜಾಬ್​ನಲ್ಲಿ ಬುಧವಾರ (ಜ.17) ಸಂಭವಿಸಿತ್ತು. ಘಟನೆಯಲ್ಲಿ ಓರ್ವ ಮಹಿಳಾ ಪೊಲೀಸ್ ಸಿಬ್ಬಂದಿ, ಎಎಸ್​ಐ ಸೇರಿದಂತೆ ನಾಲ್ವರು ಸ್ಥಳದಲ್ಲೇ ಅಸುನೀಗಿದ್ದು, ಹಲವರು ಗಾಯಗೊಂಡಿದ್ದರು. ಪೊಲೀಸರು ಜಲಂಧರ್‌ನಿಂದ ಗುರುದಾಸ್‌ಪುರಕ್ಕೆ ಕರ್ತವ್ಯಕ್ಕೆಂದು ತೆರಳುತ್ತಿದ್ದಾಗ ಮುಂಜಾನೆ 6 ಗಂಟೆ ವೇಳೆಗೆ ಅಪಘಾತ ಸಂಭವಿಸಿತ್ತು. ಅಪಘಾತದ ವೇಳೆ ಬಸ್​​ನಲ್ಲಿದ್ದ ಅನೇಕರು ನಿದ್ರೆಯಲ್ಲಿದ್ದರು. ಏಕಾಏಕಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್,​ ರಸ್ತೆ ಪಕ್ಕ ನಿಲ್ಲಿಸಿದ್ದ ಟ್ರಕ್​ಗೆ ಹಿಂಬದಿಯಿಂದ ಗುದ್ದಿತ್ತು. ಗಾಯಗೊಂಡ ಇತರ 10 ಮಂದಿ ಪೊಲೀಸ್​ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ: ದೆಹಲಿಯಲ್ಲಿ ಭಾರಿ ಅಗ್ನಿ ಅವಘಡ: 6 ಮಂದಿ ಸಜೀವ ದಹನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.