ETV Bharat / bharat

ಆಸ್ಪತ್ರೆಯಲ್ಲಿ ಬೆಂಕಿ: ದಟ್ಟ ಹೊಗೆಗೆ ಉಸಿರುಗಟ್ಟಿ ವೈದ್ಯ ದಂಪತಿ ಸೇರಿ ಐವರ ಸಾವು

author img

By

Published : Jan 28, 2023, 10:18 AM IST

ಜಾರ್ಖಂಡ್​ನ ಆಸ್ಪತ್ರೆಯಲ್ಲಿ ಬೆಂಕಿ- ಪಕ್ಕದಲ್ಲೇ ವಾಸಿಸುತ್ತಿದ್ದ ವೈದ್ಯ ದಂಪತಿ ಸೇರಿ ಐವರು ಸಾವು- ಉಸಿರುಗಟ್ಟಿ ಸಾವನ್ನಪ್ಪಿದ ಐವರು- ಆಸ್ಪತ್ರೆಯಲ್ಲಿ ರೋಗಿಗಳು ಬೇರೆಡೆಗೆ ರವಾನೆ

fire broke in jharkhand hospital
ಉಸಿರುಗಟ್ಟಿ ವೈದ್ಯ ದಂಪತಿ ಸೇರಿ ಐವರ ಸಾವು

ಧನ್ಬಾದ್(ಜಾರ್ಖಂಡ್​​): ಇಲ್ಲಿನ ಎಕ್ಸ್‌ಚೇಂಜ್ ರಸ್ತೆಯಲ್ಲಿರುವ ಹಾಜ್ರಾ ಆಸ್ಪತ್ರೆಯಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡು, ವೈದ್ಯ ದಂಪತಿ ಸೇರಿದಂತೆ ಐವರು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಇನ್ನೊಬ್ಬರು ತೀವ್ರ ಅಸ್ವಸ್ಥರಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆಸ್ಪತ್ರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಹಾಜ್ರಾ ಆಸ್ಪತ್ರೆಗೆ ಹೊಂದಿಕೊಂಡಂತೆ ವೈದ್ಯ ದಂಪತಿ ವಾಸಿಸುತ್ತಿದ್ದರು. ಆಸ್ಪತ್ರೆ ಮತ್ತು ವೈದ್ಯರ ಮನೆ ಮಧ್ಯೆ ಚಿಕ್ಕದಾದ ದಾರಿ ಇದೆ. ಆಸ್ಪತ್ರೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಇಡೀ ಆಸ್ಪತ್ರೆ ಹೊಗೆಯಿಂದ ತುಂಬಿಕೊಂಡಿತ್ತು. ಇದು ವೈದ್ಯ ದಂಪತಿ ಮನೆಗೂ ವ್ಯಾಪಿಸಿದೆ. ಈ ವೇಳೆ ವೈದ್ಯ ದಂಪತಿ, ಮನೆಯ ಕೆಲಸದಾಕೆ ಮತ್ತು ಇನ್ನಿಬ್ಬರು ದಟ್ಟ ಹೊಗೆಯಿಂದ ಹೊರಬರಲಾಗದೇ ಮನೆಯಲ್ಲೇ ಸಿಕ್ಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ಪ್ರೀತಿಯ ನಾಯಿಯೂ ಕೂಡ ಪ್ರಾಣ ಕಳೆದುಕೊಂಡಿದೆ.

ಆಸ್ಪತ್ರೆ ಮತ್ತು ವೈದ್ಯ ಮನೆಯ ನಡುವಿದ್ದ ದಾರಿಯನ್ನು ಬಂದ್​ ಮಾಡಲಾಗಿತ್ತು. ಹೀಗಾಗಿ ಅವರು ಮನೆಯಿಂದ ಹೊರಬರಲಾಗಿಲ್ಲ. ಇದ್ದಕ್ಕಿದ್ದಂತೆ ಜೋರಾದ ಸದ್ದಿನೊಂದಿಗೆ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರು, ರೋಗಿಗಳು ಇದ್ದರು. ಬೆಂಕಿ ಕಾಣಿಸಿಕೊಂಡ ತಕ್ಷಣ ಎಲ್ಲರನ್ನೂ ಅಲ್ಲಿಂದ ಸ್ಥಳಾಂತರಿಸಲಾಗಿದೆ.

ಘಟನೆಯ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. 8 ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಲು ಹರಸಾಹಪಟ್ಟಿದ್ದಾರೆ. ಎಲ್ಲಾ ರೋಗಿಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ಮಧ್ಯಪ್ರದೇಶದಲ್ಲಿ ನಡೆದಿದ್ದ ದುರಂತ: ಇದಕ್ಕೂ ಮೊದಲು ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಜಬಲ್ಪುರದಲ್ಲಿರುವ ನ್ಯೂ ಲೈಫ್ ಮಲ್ಟಿ ಸ್ಪೆಷಾಲಿಟಿ ಖಾಸಗಿ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿ, ದುರಂತದಲ್ಲಿ 10 ಮಂದಿ ಸಾವನ್ನಪ್ಪಿದ್ದರು. ಅನೇಕರು ಗಂಭೀರವಾಗಿ ಗಾಯಗೊಂಡಿದ್ದರು.

ಬೆಂಕಿ ದಿಢೀರ್ ಎಲ್ಲೆಡೆ ಆವರಿಸಿಕೊಂಡ ಕಾರಣ ಆಸ್ಪತ್ರೆಯಲ್ಲಿದ್ದ ಜನರು, ಸಿಬ್ಬಂದಿ ಹೊರಗಡೆ ಬರಲು ಪರದಾಡಿದ್ದಾರೆ. ಇದರಿಂದ ರೋಗಿಗಳು, ವೈದ್ಯರು, ಸಿಬ್ಬಂದಿ ಸೇರಿ 52 ಮಂದಿ ಸಿಕ್ಕಿ ಹಾಕಿಕೊಂಡಿದ್ದರು. ಐವರು ರೋಗಿಗಳು, ಆಸ್ಪತ್ರೆಯ ಮೂವರು ಸಿಬ್ಬಂದಿ ಸೇರಿ 10 ಮಂದಿ ಕೊನೆಯುಸಿರೆಳೆದಿದ್ದರು. ಶಾರ್ಟ್​​ ಸರ್ಕ್ಯೂಟ್​ನಿಂದಾಗಿ ದುರ್ಘಟನೆ ನಡೆದಿತ್ತು. ಆಸ್ಪತ್ರೆಯ ಮೊದಲ ಮಹಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು.

ಇನ್ನೊಂದು ದುರ್ಘಟನೆಯಲ್ಲಿ ಮಹಾರಾಷ್ಟ್ರದ ನಾಗ್ಪುರದ ಖಾಸಗಿ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡು, ನಾಲ್ವರು ಸಾವನ್ನಪ್ಪಿದ್ದರು. ಆಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಐಸಿಯುನ ಎಸಿ ಘಟಕದಿಂದ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಮಹಡಿಯಲ್ಲಿ 10 ರೋಗಿಗಳು ಇದ್ದರು. ಆರು ರೋಗಿಗಳು ತಾವೇ ಹೊರಗೋಡಿ ಬಂದಿದ್ದರು. ನಾಲ್ವರು ಸಿಲುಕಿಕೊಂಡು ಪ್ರಾಣ ಕಳೆದುಕೊಂಡಿದ್ದರು.

ನೃತ್ಯದ ವಿಚಾರಕ್ಕಾಗಿ ಬಾಲಕಿಗೆ ಬೆಂಕಿ: ಮದುವೆ ಸಮಾರಂಭದ ನಿಮಿತ್ತ ನಡೆಯುತ್ತಿದ್ದ ಗ್ರಾಮ ಪೂಜೆಯಲ್ಲಿ ನೃತ್ಯದ ವಿಚಾರವಾಗಿ ಬಾಲಕಿಯೊಬ್ಬಳಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ದಹನಕ್ಕೆ ಪ್ರಯತ್ನಿಸಿದ ಘಟನೆ ಬಿಹಾರದ ವೈಶಾಲಿಯಲ್ಲಿ ಈಚೆಗೆ ನಡೆದಿತ್ತು. ಘಟನೆಯಲ್ಲಿ ಅದೃಷ್ಟವಶಾತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿ, ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಳು.

ಇಲ್ಲಿನ ಗ್ರಾಮವೊಂದರಲ್ಲಿ ಯುವಕನ ಮದುವೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮದುವೆ ಪೂರ್ವದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಪೂಜೆಯಲ್ಲಿ ಹುಡುಗಿಯರು ಸೇರಿಕೊಂಡು ನೃತ್ಯ ಮಾಡುತ್ತಿದ್ದರು. ಈ ವೇಳೆ, ಕೆಲ ಹುಡುಗರು ಒಳ ನುಗ್ಗಿ ಹುಡುಗಿಯರ ಮಧ್ಯೆ ಕುಣಿದಿದ್ದರು. ಇದನ್ನು ವಿರೋಧಿಸಿದ ಹುಡುಗಿಯ ಮೇಲೆ ದುಷ್ಕೃತ್ಯ ಎಸಗಿದ್ದರು.

ಓದಿ: ಗುಡಿಸಲಿಗೆ ಬೆಂಕಿ ತಗುಲಿ ಅಪ್ಪ - ಮಗಳು ಸಜೀವ ದಹನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.