ETV Bharat / bharat

ಬಸ್​ಗೆ ಗುದ್ದಿದ ಗ್ಯಾಸ್ ಟ್ಯಾಂಕರ್​ಗೆ ಬಿತ್ತು ಬೆಂಕಿ: ಇತರ ಮೂರು ಬಸ್​​ಗಳಿಗೂ ಹಬ್ಬಿದ ಅಗ್ನಿ

author img

By

Published : Oct 27, 2022, 9:33 PM IST

ಬಸ್​ಗೆ ಡಿಕ್ಕಿ ಹೊಡೆದ ಟ್ಯಾಂಕರ್‌ನಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಇನ್ನೂ ಮೂರು ಬಸ್‌ಗಳಿಗೂ ಬೆಂಕಿ ಹೊತ್ತಿಕೊಂಡ ಘಟನೆ ಜಾರ್ಖಂಡ್​ನ ದುಮ್ಕಾ ಜಿಲ್ಲೆಯಲ್ಲಿ ಜರುಗಿದೆ.

fire-after-tanker-blast-in-dumka-jharkhand
ಬಸ್​ಗೆ ಗುದ್ದಿದ ಗ್ಯಾಸ್ ಟ್ಯಾಂಕರ್​ಗೆ ಬಿತ್ತು ಬೆಂಕಿ.. ಇತರ ಮೂರು ಬಸ್​​ಗಳಿಗೂ ಹಬ್ಬಿದ ಅಗ್ನಿ

ದುಮ್ಕಾ (ಜಾರ್ಖಂಡ್): ಗ್ಯಾಸ್ ಟ್ಯಾಂಕರ್ ಹಾಗೂ ಬಸ್‌ ನಡುವೆ ಡಿಕ್ಕಿ ಸಂಭವಿಸಿ ಭಾರಿ ಬೆಂಕಿ ಹೊತ್ತಿಕೊಂಡ ಘಟನೆ ಜಾರ್ಖಂಡ್​ನ ದುಮ್ಕಾ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಈ ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾನೆ.

ಇಲ್ಲಿನ ಬಧೈತ್ ಗ್ರಾಮದ ಬಳಿಯ ದುಮ್ಕಾ-ಭಾಗಲ್ಪುರ್ ರಾಜ್ಯ ಹೆದ್ದಾರಿಯಲ್ಲಿ ದುರ್ಘಟನೆ ನಡೆದಿದೆ. ಮೊದಲಿಗೆ ಒಂದು​ ಬಸ್​ಗೆ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಇದರಿಂದ ಟ್ಯಾಂಕರ್‌ನಲ್ಲಿ ದೊಡ್ಡ ಪ್ರಮಾಣದ ಸ್ಫೋಟ ಸಂಭವಿಸಿದ್ದು, ಇನ್ನೂ ಮೂರು ಬಸ್‌ಗಳಿಗೂ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ.

ಟ್ಯಾಂಕರ್ ಚಾಲಕನ ಪತ್ತೆಯಾಗಿಲ್ಲ. ಘಟನೆಯ ಬೆನ್ನಲ್ಲೇ ಆತ ಪರಾರಿಯಾಗಿದ್ದಾನೋ ಅಥವಾ ಬೆಂಕಿಯಲ್ಲಿ ಸುಟ್ಟು ಹೋಗಿದ್ದಾನೋ ಎಂಬುದೂ ಸ್ಪಷ್ಟವಾಗಿಲ್ಲ. ಈ ಅವಘಡದ ವಿಷಯ ತಿಳಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಹಾರ ಕಾರ್ಯ ನಡೆಸಿದ್ದಾರೆ.

ಬಸ್​ಗೆ ಡಿಕ್ಕಿ ಹೊಡೆದ ಬಳಿಕ ಗ್ಯಾಸ್ ಟ್ಯಾಂಕರ್​​ ಪಲ್ಟಿ ಹೊಡೆದಿದೆ. ಇದರಿಂದ ಟ್ಯಾಂಕರ್​​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದೇ ವೇಳೆ ಸಮೀಪದಲ್ಲೇ ಪಾರ್ಕ್​ ಮಾಡಿದ್ದ ಮೂರು ಬಸ್​ಗಳಿಗೂ ಬೆಂಕಿ ಹಬ್ಬಿದೆ. ಜೊತೆಗೆ ಹಲವು ಗಿಡಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಇದರ ಪರಿಣಾಮ ಓರ್ವ ಸಜೀವ ದಹನವಾಗಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್​ ಇನ್​ಸ್ಪೆಕ್ಟರ್​ ಕಿಶೋರೆ ಸಿಂಗ್​ ತಿಳಿಸಿದ್ದಾರೆ.

ಇದನ್ನೂ ಓದಿ: ಮೂಡಿಗೆರೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು: ಐವರ ಸ್ಥಿತಿ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.