ETV Bharat / bharat

ಟ್ರಸ್ಟ್​ ಹಣ ದುರುಪಯೋಗ ಆರೋಪ: ಮೇಧಾ ಪಾಟ್ಕರ್ ಸೇರಿ 11 ಜನರ​ ವಿರುದ್ಧ ಎಫ್​ಐಆರ್

author img

By

Published : Jul 11, 2022, 7:48 AM IST

Updated : Jul 11, 2022, 8:04 AM IST

ತಮ್ಮ ವಿರುದ್ಧ ಬಂದಿರುವ ಆರೋಪ ಸುಳ್ಳು ಎಂದಿರುವ ಮೇಧಾ ಪಾಟ್ಕರ್,​ ಈ ಹಿಂದೆ ಬಂದ ಎಲ್ಲಾ ಆರೋಪಗಳಿಗೂ ದಾಖಲೆಗಳೊಂದಿಗೆ ಉತ್ತರ ನೀಡಿದ್ದೇವೆ. ಇದಕ್ಕೂ ಉತ್ತರ ನೀಡಲು ನಾನು ತಯಾರಾಗಿದ್ದೇನೆ ಎಂದಿದ್ದಾರೆ.

Social Activist Medha Patkar
ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್​

ಬರ್ವಾನಿ(ಮಧ್ಯಪ್ರದೇಶ): ಬುಡಕಟ್ಟು ವಿದ್ಯಾರ್ಥಿಗಳ ಶೈಕ್ಷಣಿಕ ಸೌಲಭ್ಯಗಳ ನಿರ್ವಹಣೆಗಾಗಿ ಸಂಗ್ರಹಿಸಿದ ಹಣವನ್ನು ರಾಜಕೀಯ ಮತ್ತು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸುವ ಮೂಲಕ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ದೂರಿನ ಮೇರೆಗೆ ನರ್ಮದಾ ಬಚಾವೋ ಆಂದೋಲನದ ಮುಂದಾಳು ಮೇಧಾ ಪಾಟ್ಕರ್ ಹಾಗೂ ಇತರ 11 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ತೆಮ್ಲಾ ಬುಜುರ್ಗ್ ಗ್ರಾಮದ ನಿವಾಸಿ ಪ್ರೀತಮ್‌ರಾಜ್ ಬಡೋಲೆ ಎಂಬವರ ದೂರಿನ ಮೇರೆಗೆ ಬರ್ವಾನಿ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್‌ಐಆರ್ ದಾಖಲಾಗಿದೆ. ದೂರುದಾರರು ಕೆಲವು ದಾಖಲೆಗಳನ್ನೂ ಒದಗಿಸಿದ್ದಾರೆ. ಈ ಪ್ರಕರಣ ಹಳೆಯ ವಹಿವಾಟಿಗೆ ಸಂಬಂಧಿಸಿರುವುದರಿಂದ ವಿಸ್ತೃತ ತನಿಖೆ ನಡೆಸಲಾಗುವುದು ಎಂದು ಬರ್ವಾನಿ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಕುಮಾರ್ ಶುಕ್ಲಾ ತಿಳಿಸಿದರು.

ಮುಂಬೈನಲ್ಲಿ ನೋಂದಣಿಯಾಗಿರುವ ನರ್ಮದಾ ನವನಿರ್ಮಾಣ ಅಭಿಯಾನ (ಎನ್‌ಎನ್‌ಎ) ಟ್ರಸ್ಟ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ನರ್ಮದಾ ಕಣಿವೆಯ ಬುಡಕಟ್ಟು ವಿದ್ಯಾರ್ಥಿಗಳಿಗೆ ವಸತಿ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಕಳೆದ 14 ವರ್ಷಗಳಲ್ಲಿ ವಿವಿಧ ಮೂಲಗಳಿಂದ 13.50 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದು, ಆ ಹಣವನ್ನು ರಾಜಕೀಯ, ದೇಶವಿರೋಧಿ ಕಾರ್ಯಸೂಚಿಗೆ ಬಳಸಿಕೊಂಡಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಎಫ್‌ಐಆರ್‌ನಲ್ಲಿ ಮೇಧಾ ಪಾಟ್ಕರ್, ಪರ್ವೀನ್ ರೂಮಿ ಜಹಾಂಗೀರ್, ವಿಜಯ ಚೌಹಾಣ್, ಕೈಲಾಶ್ ಅವಸ್ಯ, ಮೋಹನ್ ಪಾಟಿದಾರ್, ಆಶಿಶ್ ಮಂಡ್ಲೋಯ್, ಕೇವಲ್ ಸಿಂಗ್ ವಾಸವೆ, ಸಂಜಯ್ ಜೋಶಿ, ಶ್ಯಾಮ್ ಪಾಟೀಲ್, ಸುನೀತ್ ಎಸ್‌ಆರ್, ನೂರ್ಜಿ ಪದ್ವಿ ಮತ್ತು ಕೇಶವ್ ವಾಸವೆ ಹೆಸರಿದೆ. ಪ್ರಕರಣ ಎರಡು ರಾಜ್ಯಗಳಿಗೆ ಸಂಬಂಧಿಸಿದ್ದಾಗಿದೆ. ದಾಖಲೆಗಳು ಹಾಗೂ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುವುದು. ಈ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ಪಕ್ಷಗಳಿಗೆ ತಮ್ಮ ಪರ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗುವುದು. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್​ಪಿ ಹೇಳಿದ್ದಾರೆ.

ಆರೋಪ ತಳ್ಳಿ ಹಾಕಿದ ಪಾಟ್ಕರ್​: ತಮ್ಮ ವಿರುದ್ಧ ಬಂದಿರುವ ಆರೋಪಗಳನ್ನು ಸುಳ್ಳು ಎಂದು ತಳ್ಳಿ ಹಾಕಿರುವ ಮೇಧಾ ಪಾಟ್ಕರ್​, ನನ್ನ ಮೇಲೆ ಈ ಥರ ಆರೋಪ ಬರುತ್ತಿರುವುದು ಇದೇ ಮೊದಲಲ್ಲ. ನನ್ನ ಬಳಿ ಖಾತೆಗಳ ಸಂಪೂರ್ಣ ವಿವರ ಇದೆ. ವೆಚ್ಚಗಳನ್ನು ವಾರ್ಷಿಕವಾಗಿ ಸಂಪೂರ್ಣವಾಗಿ ಆಡಿಟ್​ ಮಾಡಲಾಗುತ್ತದೆ. ಎಲ್ಲದಕ್ಕೂ ಉತ್ತರ ನೀಡಲು ಸಿದ್ಧ ಎಂದಿದ್ದಾರೆ.

ಎಫ್​ಐಆರ್​ ದಾಖಲಾಗಿರುವ ಕುರಿತು ಪೊಲೀಸರಿಂದ ನನಗೆ ಯಾವುದೇ ಮಾಹಿತಿ ಬಂದಿಲ್ಲ. ದೂರುದಾರರು ಆರ್​ಎಸ್​ಎಸ್​ ಹಾಗೂ ಎಬಿವಿಪಿಯೊಂದಿಗೆ ನಂಟು ಹೊಂದಿರಬೇಕು. ಹಾಗಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ. ನಮ್ಮ ಟ್ರಸ್ಟ್​ಗೆ ಯಾವುದೇ ವಿದೇಶ ಮೂಲಗಳಿಂದ ಹಣ ಬರುವುದಿಲ್ಲ. ಸಂಗ್ರಹಿಸಿದ ಹಣವನ್ನು ಸೂಕ್ತ ರೀತಿಯಲ್ಲೇ ಬಳಸಲಾಗುತ್ತದೆ. ಪ್ರಸ್ತುತ ನಡೆಯುತ್ತಿರುವ 'ಜೀವನ್​ಶಾಲಾ' ಕಳೆದ ಮೂರು ದಶಕಗಳಿಂದ ಕಾರ್ಯನಿರ್ವಹಿಸುತ್ತಿವೆ. ದಶಕಗಳಿಂದ ಪುನರ್ವಸತಿ ಕಲ್ಪಿಸುವ ಕಾರ್ಯದಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ. ಈ ಹಿಂದೆ ಬಂದಂತಹ ಆರೋಪಗಳಿಗೂ ಸಂಸ್ಥೆ ದಾಖಲೆಗಳೊಂದಿಗೆ ಉತ್ತರ ನೀಡಿದೆ ಎಂದು ಪಾಟ್ಕರ್​ ಸ್ಪಷ್ಟಪಡಿಸಿದರು.

ನಾನು ಟ್ರಸ್ಟ್​ ಕಾರ್ಯಕರ್ತೆಯಾದರೂ ಹಣಕಾಸು ವ್ಯವಹಾರದಲ್ಲಿ ಕೈ ಹಾಕುವುದಿಲ್ಲ. ಅದನ್ನು ನೋಡಿಕೊಳ್ಳಲು ಬೇರೆಯವರು ಇದ್ದಾರೆ. ದೇಶದಲ್ಲಿ ರಾಷ್ಟ್ರವಾದ ಮತ್ತು ದೇಶದ್ರೋಹ ಕುರಿತು ಚರ್ಚೆ ನಡೆಯುತ್ತಿದ್ದು, ಈ ಪ್ರಕರಣದ ಹಿಂದೆ ರಾಜಕೀಯ ಕಾರಣಗಳು ಇರಬಹುದು ಅಥವಾ ಮಾನಹಾನಿ ಮಾಡುವ ಪಿತೂರಿ ಇರಬಹುದು. ವ್ಯವಸ್ಥೆಯ ಬಗ್ಗೆ ಪ್ರಶ್ನೆ ಕೇಳುವವರನ್ನು ದೇಶವಿರೋಧಿಗಳು ಎಂದು ಪರಿಗಣಿಸಲಾಗುತ್ತದೆ. ಇದನ್ನೇ ಸಾರ್ವಜನಿಕರು ಕೂಡ ನಂಬುತ್ತಾರೆ ಎಂದು ಪಾಟ್ಕರ್​ ಎಂದು ದೂರಿದ್ದಾರೆ.

Last Updated : Jul 11, 2022, 8:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.