ETV Bharat / bharat

ಹೆಂಡತಿ ಮೇಲಿನ ಕೋಪಕ್ಕೆ ಮಗಳನ್ನೇ ಹತ್ಯೆಗೈದ ತಂದೆ!

author img

By

Published : Aug 20, 2023, 1:51 PM IST

Father killed daughter at Hyderabad: ಪತ್ನಿ ಮೇಲೆ ದ್ವೇಷ ತೀರಿಸಿಕೊಳ್ಳಲು ತಂದೆಯೊಬ್ಬ ಮಗಳನ್ನೇ ಕೊಲೆ ಮಾಡಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

Father killed daughter at Hyderabad
Father killed daughter at Hyderabad

ಹೈದರಾಬಾದ್:​ ಹೆಂಡತಿ ಮೇಲಿನ ಕೋಪಕ್ಕೆ ತನ್ನ ಸ್ವಂತ ಮಗಳನ್ನೇ ಹತ್ಯೆ ಮಾಡಿರುವ ಘಟನೆ ಚಂದಾನಗರದಲ್ಲಿ ನಡೆದಿದೆ. ಮಗಳ ಹತ್ಯೆಯ ಬಳಿಕ ಮೃತದೇಹವನ್ನು ಕಾರಿನಲ್ಲಿ ಸಾಗಿಸುತ್ತಿರುವಾಗ ಕಾರು ಅಪಘಾತಗೊಂಡು ಆರೋಪಿ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ವನಸ್ಥಲಿಪುರಂ ಎಸಿಪಿ ಭೀಮರೆಡ್ಡಿ ಹೇಳಿದ್ದಾರೆ. ಪ್ರಕರಣ ಅಬ್ದುಲ್ಲಾಪುರಮೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಇನ್ಸ್‌ಪೆಕ್ಟರ್ ಮನಮೋಹನ್, ಎಸ್‌ಐಗಳಾದ ವೆಂಕಟರಾಮಿರೆಡ್ಡಿ ಮತ್ತು ಕಿಶನ್ ಮಾಹಿತಿ ನೀಡಿದ್ದಾರೆ.

ಘಟನೆಯ ವಿವರ: ವಿಜಯವಾಡದ ಅಜಿತ್‌ಸಿಂಗ್‌ ನಗರದ ಕುಂಡೇಟಿ ಚಂದ್ರಶೇಖರ್ (ಆರೋಪಿ) ಮತ್ತು ಸಂಗಾರೆಡ್ಡಿ ಜಿಲ್ಲೆಯ ಬಿಎಚ್‌ಇಎಲ್‌ನ ಹಿಮಬಿಂದು 2011ರಲ್ಲಿ ವಿವಾಹವಾಗಿದ್ದರು. ಇವರು ಹಿಂದೆ ಅಮೆರಿಕದಲ್ಲಿ ಐಟಿ ಉದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಹೈದರಾಬಾದ್‌ಗೆ ಬಂದು ಚಂದಾನಗರದಲ್ಲಿ ನೆಲೆಸಿದ್ದರು. ಇಲ್ಲಿಗೆ ಬಂದ ಬಳಿಕ ಪತ್ನಿ ಹಿಮಬಿಂದು ಐಟಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ, ಪತಿ ಉದ್ಯೋಗಿಯಾಗಿ ಕರ್ತವ್ಯಕ್ಕೆ ಸೇರಿದ್ದರು. ಇವರಿಗೆ 8 ವರ್ಷದ ಮೋಕ್ಷಜಾ ಎನ್ನುವ ಮಗಳಿದ್ದು ಬಿಎಚ್‌ಇಎಲ್‌ನ ಜ್ಯೋತಿ ವಿದ್ಯಾಲಯದಲ್ಲಿ ನಾಲ್ಕನೇ ತರಗತಿ ಓದುತ್ತಿದಳು.

ಇವರ ಜೀವನ ಸುಂದರವಾಗಿಯೇ ಸಾಗುತ್ತಿತ್ತು. ಆದರೆ 8 ತಿಂಗಳ ಹಿಂದೆ ಚಂದ್ರಶೇಖರ್ ತನ್ನ ಕೆಲಸ ಕಳೆದುಕೊಳ್ಳುತ್ತಾನೆ. ಇದಾದ ಬಳಿಕ ದಂಪತಿ ಮಧ್ಯೆ ಜಗಳ ಪ್ರಾರಂಭವಾಗುತ್ತದೆ. ಪರಿಣಾಮ ಹಿಮಬಿಂದು ತನ್ನ ಮಗಳೊಂದಿಗೆ 4 ತಿಂಗಳ ಹಿಂದೆಯೇ ಬಿಎಚ್‌ಇಎಲ್‌ನಲ್ಲಿರುವ ಹುಟ್ಟೂರಿಗೆ ಹೋಗಿದ್ದಾಳೆ.

ಚಂದ್ರಶೇಖರ್​ ಮಾತ್ರ ಒಂಟಿಯಾಗಿ ಚಂದನಗರದಲ್ಲಿಯೇ ವಾಸ ಮಾಡಿಕೊಂಡಿದ್ದನು. ಈತನಿಗೆ ತಾನು ಕೆಲಸ ಕಳೆದುಕೊಂಡ ಮೇಲೆ ಪತ್ನಿ ತನಗಿಂತ ಹೆಚ್ಚು ಸಂಪಾದಿಸುತ್ತಿದ್ದಾಳೆ, ಉನ್ನತ ಸ್ಥಾನದಲ್ಲಿದ್ದಾರೆ ಎಂದು ಕೊರಗು ಶುರುವಾಗಿತ್ತು. ತನ್ನ ಕೆಲಸ ಕಳೆದುಕೊಳ್ಳಲು ಪತ್ನಿಯೇ ಕಾರಣ ಎಂದು ಆಕೆಯ ವಿರುದ್ಧ ಇವನಲ್ಲಿ ದ್ವೇಷ ಭಾವನೆ ಬೆಳೆದು ಬಿಡುತ್ತದೆ. ಅಲ್ಲದೇ ತನ್ನ ಮಗಳನ್ನು ತನ್ನಿಂದ ಕಿತ್ತುಕೊಂಡು ದೂರ ಮಾಡಿದ್ದಾಳೆ. ಸಂಸಾರದಿಂದ ದೂರವಾಗಿ ನಾನು ಅನುಭವಿಸುತ್ತಿರುವ ನರಕಯಾತನೆಯನ್ನು ಪತ್ನಿಯೂ ಅನುಭವಿಸಲಿ ಎಂದು ತನ್ನ ಸ್ವಂತ ಮಗಳನ್ನೇ ಕೊಲ್ಲಲು ನಿರ್ಧರಿಸುತ್ತಾನೆ.

ಹೀಗಾಗಿ ಚಂದ್ರಶೇಖರ್​ ತನ್ನ ಪ್ಲಾನ್ ಪ್ರಕಾರ ಒಂದು ವಾರದ ಹಿಂದೆ ಅಂಗಡಿಯಿಂದ ಪೆನ್ಸಿಲ್ ಕೆತ್ತನೆ ಬ್ಲೇಡ್ ಖರೀದಿಸಿದ್ದಾನೆ. ಶುಕ್ರವಾರ ಮಧ್ಯಾಹ್ನ 3.15ಕ್ಕೆ ತನ್ನ ಮಗಳ ಶಾಲೆ ಜ್ಯೋತಿ ವಿದ್ಯಾಲಯಕ್ಕೆ ತೆರಳಿದ್ದಾನೆ. ಅಲ್ಲಿ ಮಗಳನ್ನು ತನ್ನೊಂದಿಗೆ ಬರುವಂತೆ ಕರೆದಿದ್ದಾನೆ. ಆದರೆ ಮೋಕ್ಷಜ ಮಾತ್ರ ಬರುವುದಿಲ್ಲವೆಂದು ಹಠ ಹಿಡಿದಿದ್ದಾಳೆ. ಆದರೆ ತಂದೆಯ ಒತ್ತಾಯಕ್ಕೆ ಒಲ್ಲದ ಮನಸ್ಸಿಂದಲೆ ಹೋಗಿ ಕಾರಿನ ಹಿಂದಿನ ಸೀಟ್​ನಲ್ಲಿ ಕುಳಿತುಕೊಂಡಿದ್ದಾಳೆ. ಬಳಿಕ ಬಂದ ಚಂದ್ರಶೇಖರ್​ ಕಾರು ಸ್ಟಾರ್ಟ್​ ಮಾಡಿ ಬಿಎಚ್‌ಇಎಲ್ ಟೌನ್ ಶಿಪ್ ದಾಟಿ ಸ್ವಲ್ಪ ದೂರ ಹೋಗಿ ಕಾರು ನಿಲ್ಲಿಸಿದ್ದಾನೆ.

ನಂತರ ಮಗಳ ಬಳಿ ಕುಳಿತು ಯಾಕೆ ನಿನ್ನ ತಾಯಿ ನನ್ನೊಂದಿಗೆ ಸರಿಯಾಗಿ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದಾಗ, ಮೋಕ್ಷಜ ಅದನ್ನು ನೀನೇ ಕೇಳು ಎಂದಿದ್ದಾಳೆ. ಇದರಿಂದ ಕೋಪಗೊಂಡ ಚಂದ್ರಶೇಖರ್​ ಎಡಗೈಯಿಂದ ಆಕೆಯ ತಲೆ ಹಿಡಿದು ಬ್ಲೇಡ್‌ನಿಂದ ಕತ್ತು ಕೊಯ್ದಿದ್ದಾನೆ. ಬಳಿಕ ಮಗಳು ರಕ್ತ ಮಡುವಿನಲ್ಲಿ ಒದ್ದಾಡಿ ಸಾಯುವುದನ್ನು ನೋಡಿ ಮೃತಪಟ್ಟಿರುವುದನ್ನು ದೃಢಪಡಿಸಿ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಎಸೆದು ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದ.

ಯೋಜನೆಯಂತೆ ಮೃತದೇಹವನ್ನು ಮೊದಲು ಕಾರಿನ ಹಿಂಬದಿಯ ಸೀಟಿನಲ್ಲಿಟ್ಟು ಹೊರ ವರ್ತುಲ ರಸ್ತೆಗೆ ತೆರಳಿದ್ದಾನೆ. ಅಲ್ಲಿಂದ ತಾರಾಮತಿಪೇಟ ಮತ್ತು ಕೊಹೆದಾಳ ನಡುವೆ ಹಲವು ಬಾರಿ ಸುತ್ತಿ ಸುತ್ತಿ ಕೊನೆಗೆ ಕತ್ತಲಾಗುತ್ತಿದ್ದಂತೆ ಮೃತದೇಹವನ್ನು ಬಿಸಾಕಿ ಹೋಗಲು ನಿರ್ಧರಿಸಿದ್ದ. ಆ ವೇಳೆ ಕಾರಿನ ಟಯರ್​ ಸ್ಫೋಟಗೊಂಡಿದೆ. ಪರಿಣಾಮ ಕಾರು ಸೀದಾ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣವೇ ಆಗಮಿಸಿದ ಪೊಲೀಸರು ಕಾರಿನಲ್ಲಿ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಪೊಲೀಸರು ಚಂದ್ರಶೇಖರ್​ನ್ನು ಬಂಧಿಸಿದ್ದು, ತಾನು ಪತ್ನಿ ಮೇಲಿನ ಕೋಪಕ್ಕೆ ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ದಾವಣಗೆರೆ: ಕುಡಿದ ಅಮಲಿನಲ್ಲಿ ಪತ್ನಿಯ ಹತ್ಯೆ ಮಾಡಿ ಪೊಲೀಸರಿಗೆ ಶರಣಾದ ಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.