ತಿರುಚ್ಚಿ (ತಮಿಳುನಾಡು): ಮದುವೆಗೂ ಮುನ್ನವೇ ಮಗುವಿಗೆ ಜನ್ಮ ನೀಡಿದ್ದ 19 ವರ್ಷದ ಯುವತಿಗೆ ಪೋಷಕರೇ ವಿಷವಿಟ್ಟು ಕೊಲೆ ಮಾಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ಬೆಳಕಿಗೆ ಬಂದಿದೆ. ಯುವತಿಯ ತಂದೆ ಮತ್ತು ಆಕೆಯ ಚಿಕ್ಕಮ್ಮನನ್ನು ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 5ರಂದು ಕಾಲುವೆಯ ಪೊದೆಯೊಂದರ ಬಳಿ ಶಿಶು ಪತ್ತೆಯಾಗಿತ್ತು. ಈ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಶಿಶುವನ್ನು ರಕ್ಷಿಸಿ ಚಿಕಿತ್ಸೆಗಾಗಿ ತಿರುಚ್ಚಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
ನಂತರ ಶಿಶುವಿನ ಪೋಷಕರಿಗಾಗಿ ಪೊಲೀಸರು ತನಿಖೆ ಆರಂಭಿಸಿದ್ದರು. ಇದರ ನಡುವೆ 19 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿ ಇದೇ ತಿರುಚ್ಚಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಅಂತೆಯೇ, ಯುವತಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಆದರೆ, ಚಿಕಿತ್ಸೆ ನೀಡುತ್ತಿರುವಾಗಲೇ ಆಕೆಯ ಸ್ಥಿತಿ ಹದಗೆಟ್ಟಿದ್ದು, ಪೊಲೀಸರ ಹೇಳಿಕೆ ದಾಖಲಿಸಿಕೊಂಡು ಸ್ವಲ್ಪ ಹೊತ್ತಿನಲ್ಲಿ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾಳೆ. ಇತ್ತ, ಯುವತಿಯ ಹೇಳಿಕೆ ಹಾಗೂ ತಮಗೆ ಸಿಕ್ಕ ಇತರ ಮಾಹಿತಿ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಾಗ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಇದರಿಂದ ತನಿಖೆ ಚುರುಕುಗೊಳಿಸಿದಾಗ ಕಾಲುವೆಯ ಬಳಿ ಪತ್ತೆಯಾದ ನವಜಾತ ಶಿಶು ಈ ಯುವತಿಯದ್ದೇ ಎಂದು ಬಯಲಾಗಿದೆ. ಅಲ್ಲದೇ, ಅವಿವಾಹಿತ ಯುವತಿಯಾಗಿದ್ದ ಕಾರಣ ಕುಟುಂಬದ ಬಗ್ಗೆ ಬಗ್ಗೆಯೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಪೋಷಕರು ಏನೋ ಮರೆಮಾಚುತ್ತಿದ್ದಾರೆ ಎಂಬ ಸಂಶಯ ಪೊಲೀಸರಿಗೆ ಕಾಡಿದೆ.
ಹೀಗಾಗಿ ಮತ್ತಷ್ಟು ಆಳವಾಗಿ ತನಿಖೆ ನಡೆಸಿದಾಗ ಮದುವೆಗೂ ಮುನ್ನವೇ ಯುವತಿ ಮಗುವಿಗೆ ಜನ್ಮ ನೀಡಿದ್ದರಿಂದ ಆ ಮಗು ಸಾಕಲು ಮನಸ್ಸಿಲ್ಲದ ಪೊದೆಯೊಂದರ ಬಳಿ ಎಸೆದಿದ್ದರು. ಆದರೆ, ಮಗುವಿನ ಬಗ್ಗೆ ತನಿಖೆ ಚುರುಕಾದ ವಿಷಯ ತಿಳಿದು ಯುವತಿಗೆ ಕುಟುಂಬಸ್ಥರು ವಿಷವುಣಿಸಿದ್ದರು. ಹೀಗಾಗಿಯೇ ಯುವತಿ ವಿಷಮ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ, ಇದನ್ನೂ ಆತ್ಮಹತ್ಯೆ ಯತ್ನ ಎಂಬ ಕಥೆ ಕಟ್ಟಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಯುವತಿ ಸಾವನ್ನು ಕೊಲೆ ಎಂದು ಪರಿಗಣಿಸಿರುವ ಪೊಲೀಸರು, ತಂದೆ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಜೊತೆಗೆ ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮನೆಗೆ ನುಗ್ಗಿ ಪ್ರಾಂಶುಪಾಲನಿಗೆ ಸುತ್ತಿಗೆಯಿಂದ ಹೊಡೆದು ಕೊಂದ ಯುವಕ