ETV Bharat / bharat

ಫ್ಯಾಕ್ಟ್​ ಚೆಕ್​ : ಕ್ಸಿ ಜಿನ್‌ಪಿಂಗ್ ಗೃಹಬಂಧನದಲ್ಲಿದ್ದಾರೆಯೆ? ವದಂತಿಗೆ ಇಲ್ಲಿದೆ ಕಾರಣ

author img

By

Published : Sep 25, 2022, 1:17 PM IST

ವದಂತಿಗೆ ಜೆನ್ನಿಫರ್ ಝೆಂಗ್ ಟ್ವೀಟ್​ ಹಾಗೂ ವಿಡಿಯೋ ಮುಖ್ಯ ಕಾರಣ. ಅವರ ಯೂಟ್ಯೂಬ್​ ಬ್ಲಾಗ್​ ಗಮನಿಸಲಾಗಿದ್ದು, ಅದರಲ್ಲಿ ಅವರು ಯಾವುದೇ ಪರಿಶೀಲಿಸಿದ ಮಾಹಿತಿಯನ್ನು ನೀಡಿಲ್ಲ ಎಂಬುದನ್ನು 'ಈಟಿವಿ ಭಾರತ' ಕಂಡುಕೊಂಡಿದೆ.

Chinese President Xi Jinping
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಹೈದರಾಬಾದ್: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಬೀಜಿಂಗ್‌ನಲ್ಲಿ ಗೃಹಬಂಧನದಲ್ಲಿದ್ದಾರೆ ಎಂಬ ವದಂತಿಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಭಾರಿ ಸದ್ದು ಮಾಡುತ್ತಿದೆ. ಅದಲ್ಲದೆ ಟ್ವಿಟರ್‌ನಲ್ಲಿ 'ಕ್ಸಿ ಜಿನ್‌ಪಿಂಗ್' ಎಂಬ ಹ್ಯಾಶ್‌ಟ್ಯಾಗ್ ಹೆಚ್ಚು ಟ್ರೆಂಡಿಂಗ್​ನಲ್ಲಿದೆ. ಚೀನಾದ ಕಮ್ಯುನಿಸ್ಟ್ ಪಕ್ಷದ ವರಿಷ್ಠರು ಅವರನ್ನು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಮುಖ್ಯಸ್ಥ ಸ್ಥಾನದಿಂದ ತೆಗೆದುಹಾಕಿದ ನಂತರ ಕ್ಸಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಚೀನಾದ ಸಾಮಾಜಿಕ ಮಾಧ್ಯಮಗಳು ಟ್ವೀಟ್ ಮಾಡಿದ ನಂತರ ಸುದ್ದಿ ಹೆಚ್ಚು ಸದ್ದು ಮಾಡಿದೆ.

ಈ ಕುರಿತು 'ಈಟಿವಿ ಭಾರತ' ಫ್ಯಾಕ್ಟ್​ ಚೆಕ್​ ಮಾಡಿದ್ದು, ಚೀನಾದ ಯಾವುದೇ ಪ್ರಮುಖ ಇಂಗ್ಲಿಷ್​ ಸುದ್ದಿ ಪೋರ್ಟಲ್​ಗಳು ಅಥವಾ ವಿಶ್ವಾಹಾರ್ಹ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಅಂತಹ ಯಾವುದೇ ಅಧಿಕೃತ ಮಾಹಿತಿ ಅಥವಾ ಅದರ ನಂತರ ಬೆಳವಣಿಗೆಗಳ ಬಗ್ಗೆ ಸುದ್ದಿ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ.

ಟ್ವಿಟರ್‌ನಲ್ಲಿ ಸುಮಾರು 200,000 ಅನುಯಾಯಿಗಳನ್ನು ಹೊಂದಿರುವ ಚೀನಾದ ಬ್ಲಾಗರ್ ಮತ್ತು ಯೂಟ್ಯೂಬರ್ ಜೆನ್ನಿಫರ್ ಝೆಂಗ್ ಅವರು ಟ್ವೀಟ್‌ನಲ್ಲಿ ಪಿಎಲ್‌ಎ ಮಿಲಿಟರಿ ವಾಹನಗಳು ಸೆಪ್ಟೆಂಬರ್ 22 ರಂದು ಬೀಜಿಂಗ್‌ಗೆ ಹೋಗುತ್ತಿದ್ದವು. CCP ವರಿಷ್ಠರು ಅವರನ್ನು PLA ಮುಖ್ಯಸ್ಥ ಸ್ಥಾನದಿಂದ ತೆಗೆದುಹಾಕಿದ ನಂತರ ಕ್ಸಿ ಬಂಧನಕ್ಕೊಳಗಾಗಿದ್ದಾರೆ ಎಂದು ಹೇಳಿಕೊಂಡಿದ್ದು, ಚೀನಾ ಸೇನೆಯ ವಾಹನಗಳು ಬೀಜಿಂಗ್ ಕಡೆಗೆ ಹೋಗುತ್ತಿರುವ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.

ಝೆಂಗ್ ಶುಕ್ರವಾರ ಸಂಜೆ ಆ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದು, 1.5 ಮಿಲಿಯನ್ ವೀಕ್ಷಣೆ ಕಂಡಿದೆ. ವದಂತಿಗೆ ಈ ಟ್ವೀಟ್​ ಹಾಗೂ ವಿಡಿಯೋ ಮುಖ್ಯ ಕಾರಣವಾಗಿದೆ. ಅವರ ಯೂಟ್ಯೂಬ್​ ಬ್ಲಾಗ್​ ಗಮನಿಸಲಾಗಿದ್ದು, ಅದರಲ್ಲಿ ಯಾವುದೇ ಪರಿಶೀಲಿಸಿದ ಮಾಹಿತಿಯನ್ನು ನೀಡಿಲ್ಲ ಎಂಬುದನ್ನು ಈಟಿವಿ ಭಾರತ ಕಂಡುಕೊಂಡಿದೆ.

ಬಿಜೆಪಿ ನಾಯಕ ಸುಬ್ರಮಣಿಯನ್​ ಸ್ವಾಮಿ ಕೂಡ ವದಂತಿಯ ಬಗ್ಗೆ ಟ್ವೀಟ್​ ಮಾಡಿದ್ದು, 'ಹೊಸ ವದಂತಿಯನ್ನು ಪರಿಶೀಲಿಸಬೇಕಾಗಿದೆ: ಬೀಜಿಂಗ್‌ನಲ್ಲಿ ಕ್ಸಿ ಜಿನ್‌ಪಿಂಗ್ ಗೃಹಬಂಧನದಲ್ಲಿದ್ದಾರೆಯೇ? ಕ್ಸಿ ಇತ್ತೀಚೆಗೆ ಸಮರ್‌ಕಂಡ್‌ನಲ್ಲಿದ್ದಾಗ, ಚೀನಿ ಕಮ್ಯುನಿಸ್ಟ್ ಪಕ್ಷದ ನಾಯಕರು ಕ್ಸಿ ಅವರನ್ನು ಪಕ್ಷದ ಸೇನೆಯ ಉಸ್ತುವಾರಿಯಿಂದ ತೆಗೆದುಹಾಕಬೇಕಿತ್ತು. ನಂತರ ಗೃಹಬಂಧನದಲ್ಲಿರಿಸಲಾಯಿತು. ಹಾಗೆಯೇ ವದಂತಿಯೂ ಹರಡಿದೆ' ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಕುತೂಹಲಕಾರಿಯೆಂದರೆ, ಕ್ಸಿ ಜಿನ್‌ಪಿಂಗ್ ಅವರ ಅಧಿಕಾರವನ್ನು ಪ್ರಶ್ನಿಸಿದ ಆರೋಪದ ಮೇಲೆ ಚೀನಾದ ಹಿರಿಯ ಮಾಜಿ ಭದ್ರತಾ ಅಧಿಕಾರಿಯೊಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಒಂದು ದಿನದ ನಂತರ ವದಂತಿಗಳು ಹರಡಲು ಆರಂಭಿಸಿವೆ. ಸಾರ್ವಜನಿಕ ಭದ್ರತೆಯ ಉಪ ಸಚಿವರಾಗಿದ್ದ ಸನ್ ಲಿಜುನ್ ಅವರಿಗೆ ಎರಡು ವರ್ಷಗಳ ಕಾಲಾವಕಾಶದೊಂದಿಗೆ ಮರಣದಂಡನೆ ವಿಧಿಸಲಾಯಿತು. ಯಾವುದೇ ಕಡಿತ ಅಥವಾ ಪೆರೋಲ್ ಇಲ್ಲದೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಜಿನ್‌ಪಿಂಗ್‌ ಚೀನಾ ಪಿಎಲ್‌ಎ ಉಸ್ತುವಾರಿ ಸ್ಥಾನಕ್ಕೆ ಕುತ್ತು ಬಂದಿದೆ: ಸುಬ್ರಮಣಿಯನ್‌ ಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.