ETV Bharat / bharat

'ಮಹಾತ್ಮ ಗಾಂಧಿ ಬರಿಮೈ ಚಿತ್ರ ಅಶ್ಲೀಲವಂತೆ': ಪೋಸ್ಟ್​ ಡಿಲಿಟ್​ ಮಾಡಿದ ಫೇಸ್​ಬುಕ್​ ವಿರುದ್ಧ ಆಕ್ರೋಶ

author img

By ETV Bharat Karnataka Team

Published : Oct 9, 2023, 10:53 PM IST

ಮಹಾತ್ಮ ಗಾಂಧಿ ಅವರ ಚಿತ್ರವಿರುವ ಪೋಸ್ಟ್​ ಅನ್ನು ಫೇಸ್​ಬುಕ್​ ಡಿಲಿಟ್​ ಮಾಡಿದ್ದು, ಅದಕ್ಕೆ ನೀಡಿದ ಕಾರಣ ಮಾತ್ರ ತರ್ಕಕ್ಕೀಡು ಮಾಡಿದೆ. ಅದರ ವೃತ್ತಾಂತ ಇಲ್ಲಿದೆ.

ಮಹಾತ್ಮ ಗಾಂಧಿ ಬರಿಮೈ ಚಿತ್ರ
ಮಹಾತ್ಮ ಗಾಂಧಿ ಬರಿಮೈ ಚಿತ್ರ

ಮುಂಬೈ: ನಿವೃತ್ತ ಐಎಎಸ್ ಅಧಿಕಾರಿ ಮಹೇಶ್ ಝಾಗ್ಡೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿದ್ದ ಪೋಸ್ಟ್​ ಅನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದರು. ಸಾಮಾಜಿಕ ಮಾಧ್ಯಮ ಸಂಸ್ಥೆ ಈ ಪೋಸ್ಟ್​ ಅನ್ನು ಅಳಿಸಿ ಹಾಕಿದ್ದು, ಇದಕ್ಕೆ ನೀಡಿದ ಕಾರಣ ಮಾತ್ರ ಅಚ್ಚರಿ ಮೂಡಿಸಿದೆ. ಫೇಸ್​ಬುಕ್​​ ನಡೆಗೆ ಟೀಕೆಯೂ ವ್ಯಕ್ತವಾಗಿದೆ.

ನಡೆದಿದ್ದೇನು?: ಸ್ವಾತಂತ್ರ್ಯ ಹೋರಾಟದ ವೇಳೆ ಮಹಾತ್ಮ ಗಾಂಧಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ಬಳಿಕ ಸರಳ ಜೀವನಶೈಲಿಯನ್ನು ಅನುಸರಿಸಿದರು. ರಾಷ್ಟ್ರಪಿತರು ಬದುಕಿನ ಕೊನೆಯವರೆಗೂ ಪಂಚೆಯಲ್ಲೇ ಜೀವಿಸಿದರು. ಗಾಂಧಿಯವರ ವೇಷಭೂಷಣ ಜಗತ್ಪ್ರಸಿದ್ಧವೇ ಸರಿ. ಅಂಥದ್ದೇ ಒಂದು ಚಿತ್ರವುಳ್ಳ ಪೋಸ್ಟ್​ ಅನ್ನು ನಿವೃತ್ತ ಐಎಎಸ್ ಅಧಿಕಾರಿ ಮಹೇಶ್ ಝಾಗ್ಡೆ ಅವರು ಫೇಸ್‌ಬುಕ್​ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಸಾಮಾಜಿಕ ಮಾಧ್ಯಮಗಳ ನಿಯಮಾವಳಿಗೆ ವಿರುದ್ಧ. ಈ ಫೋಟೋವನ್ನು ಲೈಂಗಿಕ ಆಸಕ್ತಿಯ ವಿಷಯವೆಂದು ಪರಿಗಣಿಸಿ ಫೇಸ್‌ಬುಕ್​ ಸಂಸ್ಥೆ ಪೋಸ್ಟ್​ ಅನ್ನು ಡಿಲಿಟ್​ ಮಾಡಿದೆ. ಸಂಸ್ಥೆಯ ಈ ಕ್ರಮ ಆಕ್ರೋಶಕ್ಕೆ ಕಾರಣವಾಗಿದೆ.

ಮಹೇಶ್ ಝಾಗ್ಡೆ ಅವರು ಫೇಸ್​ಬುಕ್​ನಲ್ಲಿ ಮತ್ತೊಂದು ಪೋಸ್ಟ್ ಮಾಡುವ ಮೂಲಕ ಪ್ರತಿಭಟಿಸಿದ್ದಾರೆ. 'ಮಹಾತ್ಮ ಗಾಂಧಿ ಅವರು ವಿಶ್ವವೇ ಮೆಚ್ಚುವಂತೆ ಸರಳ ಜೀವನ ನಡೆಸಿದವರು. ಜಿ 20 ಶೃಂಗಸಭೆಯ ಸಂದರ್ಭದಲ್ಲಿ ವಿಶ್ವದ ಉನ್ನತ ನಾಯಕರು ಗೌರವ ಸಲ್ಲಿಸಿದರು. ಅವರು ಪಂಚೆ ತೊಟ್ಟಿದ್ದ ಚಿತ್ರವು ಸಾಮಾಜಿಕ ಮಾನದಂಡಗಳಿಗೆ ವಿರುದ್ಧವಾಗಲು ಹೇಗೆ ಸಾಧ್ಯ. ಫೋಟೋದಲ್ಲಿ ನಗ್ನತೆ ಅಥವಾ ಲೈಂಗಿಕ ಆಸಕ್ತಿಯ ವಿಷಯವೆಲ್ಲಿದೆ. ಅದು ಉಪ್ಪಿನ ಸತ್ಯಾಗ್ರಹ ವೇಳೆಯ ಚಿತ್ರವಾಗಿದೆ' ಎಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ಈಟಿವಿ ಭಾರತ್​ ಜೊತೆ ಮಾತನಾಡಿದ ಮಾಜಿ ಅಧಿಕಾರಿ, ಫೇಸ್‌ಬುಕ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಅಶ್ಲೀಲ ಚಿತ್ರ, ವಿಡಿಯೋಗಳು ಹರಿದಾಡುತ್ತವೆ. ಆ ಬಗ್ಗೆ ಸಂಸ್ಥೆ ಏಕೆ ಕ್ರಮ ಜರುಗಿಸಿಲ್ಲ. ವಿಶ್ವವೇ ಮೆಚ್ಚುವ ನಾಯಕನ ಚಿತ್ರವನ್ನು ನಗ್ನತೆಯ ನಿಯಮದಡಿ ಡಿಲಿಟ್​ ಮಾಡಲಾಗಿದೆ. ಮಹಾತ್ವಮ ಗಾಂಧಿ ಬಡವರಿಗಾಗಿ ಬಟ್ಟೆ ತ್ಯಜಿಸಿ, ಸರಳ ಮೂರ್ತಿಯಾದರು. ಅದನ್ನೇ ಅಶ್ಲೀಲವೆಂದು ಪರಿಗಣಿಸಿದರೆ ಹೇಗೆ ಎಂದು ಪ್ರಶ್ನಿಸಿದರು.

ಇದೇ ಮೊದಲಲ್ಲ: ಗಾಂಧೀಜಿ ಅವರ ಸರಳ ಜೀವನದ ಫೋಟೋವನ್ನು ಅಳಿಸಿ ಹಾಕಿದ್ದು ಇದೇ ಮೊದಲಲ್ಲ. ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ನಿತಿನ್ ವೈದ್ಯ ಎಂಬುವರಿಗೂ ಇದೇ ಅನುಭವವಾಗಿದೆ. ಗಾಂಧಿ ಅವರ ಫೋಟೋವಿದ್ದ ಪೋಸ್ಟ್​ ಅನ್ನು ಫೇಸ್​ಬುಕ್​ ಅಳಿಸಿ ಹಾಕಿತ್ತು. ವಿಶ್ವ ನಾಯಕ ಗಾಂಧಿ ಅವರ ಬಗ್ಗೆ ಸಾಮಾಜಿಕ ಮಾಧ್ಯಮಗಳಿಗೆ ಪರಿಜ್ಞಾನವೇ ಇಲ್ಲದಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅರಬ್‌ನಾಡಿನಲ್ಲಿ ಮೊದಲ ಹಿಂದು ದೇಗುಲ ನಿರ್ಮಾಣ: ಮುಂದಿನ ವರ್ಷ ಪ್ರಧಾನಿ ಮೋದಿಯಿಂದ ಉದ್ಘಾಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.