ನವದೆಹಲಿ: ಈಶಾನ್ಯ ಭಾರತದ ಹಲವಾರು ರಾಜ್ಯಗಳು ಪ್ರಮುಖವಾಗಿ ಅಸ್ಸಾಂ, ಮೇಘಾಲಯ ಮತ್ತು ಕೇರಳದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಶನಿವಾರದಿಂದ ಭಾರಿ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ತಿಳಿಸಿದೆ. ಇದರಿಂದಾಗಿ ಎರಡೂ ಪ್ರದೇಶಗಳ ಹಲವೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಕೇರಳದಲ್ಲಿ ಮುಂದಿನ 5 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಮತ್ತು ಮೇಘಾಲಯದಲ್ಲಿ ಮೇ 17 ರವರೆಗೆ ಅತಿ ಹೆಚ್ಚು ಮಳೆಯಾಗಲಿದೆ. ದಕ್ಷಿಣ ಅಂಡಮಾನ್ ಸಮುದ್ರ, ನಿಕೋಬಾರ್ ದ್ವೀಪಗಳು ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮುಂದಿನ 24 ಗಂಟೆಗಳಲ್ಲಿ ನೈಋತ್ಯ ಮಾನ್ಸೂನ್ ಮುನ್ನಡೆಯಲಿದೆ ಎಂದು ಐಎಂಡಿ ಹೇಳಿದೆ.
ಮುಂದಿನ ಐದು ದಿನಗಳ ಕಾಲ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಗುಡುಗು-ಮಿಂಚುಸಹಿತ ಜೋರು ಮಳೆಯಾಗುವ ಸಂಭವವಿದೆ. ಕಾವೇರಿ, ಕುಟ್ಟಿಯಾಡಿ, ಭಟತಪುಳ, ಕರುವನ್ನೂರ್, ಕೀಚೇರಿ ಮತ್ತು ಪೆರಿಯಾರ್ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುವ ನಿರೀಕ್ಷೆ ಇದ್ದು ಕೇರಳದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ರೆಡ್ ಅಲರ್ಟ್ ಘೋಷಿಸಿದೆ. ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ ಮತ್ತು ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಇದೆ. ಕಾಸರಗೋಡು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಿಗೆ ಈಗಾಗಲೇ ಆರೆಂಜ್ ಅಲರ್ಟ್ ನೀಡಲಾಗಿದೆ.
ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಬುರ್ಹಿ, ದಿಹಿಂಗ್ ನದಿ ಮತ್ತು ಕ್ಯಾಚಾರ್ ಜಿಲ್ಲೆಯ ಬರಾಕ್ ನದಿ ತೀವ್ರ ಪ್ರವಾಹ ಪರಿಸ್ಥಿತಿಯಲ್ಲಿ ಹರಿಯುತ್ತಿದೆ. ನಾಗಾವ್ ಜಿಲ್ಲೆಯ ಕೊಪಿಲಿ ನದಿ ತೀರದ ಪ್ರದೇಶಗಳಿಗೆ 'ರೆಡ್ ಅಲರ್ಟ್' ಘೋಷಿಸಲಾಗಿದೆ. ಮುಂದಿನ ಐದು ದಿನಗಳಲ್ಲಿ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಉಪ-ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಭಾರಿ /ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಮಿಜೋರಾಂ ಮತ್ತು ತ್ರಿಪುರಾದಲ್ಲಿ ಮೇ 17 ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮೇ 18 ಮತ್ತು 19 ರಂದು ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ಅಸ್ಸಾಂನಲ್ಲಿ ಮಹಾಮಳೆ: ಮೂವರು ಸಾವು, 25 ಸಾವಿರಕ್ಕೂ ಹೆಚ್ಚು ಮಂದಿಗೆ ಸಂಕಷ್ಟ!