ETV Bharat / bharat

Explained: ಈ ವರ್ಷ ಹೆಚ್ಚಿನ ಆರ್ಥಿಕ ಬೆಳವಣಿಗೆ ಕಷ್ಟಸಾಧ್ಯ.. ಆರ್ಥಿಕ ತಜ್ಞರು ನೀಡಿದ ಕಾರಣಗಳೇನು?

author img

By

Published : Mar 12, 2023, 8:37 PM IST

ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಈ ವರ್ಷ ಆರ್ಥಿಕ ಅಭಿವೃದ್ಧಿ ದರವನ್ನು ಶೇ.7ರಷ್ಟು ಊಹಿಸಿದೆಯಾದರೂ, ಕೋವಿಡ್​ ಸಾಂಕ್ರಾಮಿಕ ರೋಗದಿಂದಾಗಿ ಇದನ್ನು ಸಾಧಿಸುವುದು ಕಷ್ಟ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

explained-why-its-difficult-to-achieve-high-economic-growth-this-year
Explained: ಈ ವರ್ಷ ಹೆಚ್ಚಿನ ಆರ್ಥಿಕ ಬೆಳವಣಿಗೆ ಕಷ್ಟ... ಯಾಕೆ ?

ನವದೆಹಲಿ : ಆರ್ಥಿಕ ಅಭಿವೃದ್ಧಿ ದರ (ಜಿಡಿಪಿ)ವು ದೇಶದ ಆರ್ಥಿಕತೆಯನ್ನು ಅಳೆಯುವ ಒಂದು ಸಾಧನವಾಗಿದೆ. ಸರಳವಾಗಿ ಹೇಳಬೇಕೆಂದರೆ ಜಿಡಿಪಿ ಎಂದರೆ ಒಂದು ದೇಶದಲ್ಲಿ ನಿರ್ದಿಷ್ಟ ಅವಧಿಯಲ್ಲಿ ಉತ್ಪಾದಿಸುವ ಮತ್ತು ಮಾರಾಟವಾಗುವ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ಮೊತ್ತ ಎಂದು ಹೇಳಬಹುದು. ಇಂದು ಅನೇಕ ಕಾರಣಗಳಿಂದ ನಮ್ಮ ದೇಶದ ಆರ್ಥಿಕ ಬೆಳವಣಿಗೆ ಮಂದಗತಿಯಿಂದ ಸಾಗುತ್ತಿದೆ. ​​ ಮಂದಗತಿಯ ಆರ್ಥಿಕತೆಯಿಂದಾಗಿ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯು ಶೇ. 5ಕ್ಕಿಂತ ಕೆಳಗೆ ಇಳಿದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಶೇ.7ರಷ್ಟು ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿರುವುದು, ಅತ್ಯಂತ ವೇಗದ ಆರ್ಥಿಕ ಬೆಳವಣಿಗೆ ದರಗಳಲ್ಲಿ ಒಂದಾಗುತ್ತದೆ.

ಭಾರತದ ಪ್ರಮುಖ ಅಂಕಿ ಅಂಶಗಳ ಸಂಸ್ಥೆಯಾದ ರಾಷ್ಟ್ರೀಯ ಅಂಕಿ ಅಂಶ ಕಚೇರಿ (NSO) ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ (ಏಪ್ರಿಲ್ 2022-ಮಾರ್ಚ್ 2023) ಜಿಡಿಪಿ ಬೆಳವಣಿಗೆಯು ಶೇ.7ರಷ್ಟು ಇರುತ್ತದೆ ಎಂದು ಹೇಳಿದೆ. ಆದರೆ ಕೆಲ ಆರ್ಥಿಕ ಸೂಚಕಗಳು ಇದು ಕೇವಲ ಆಶಾವಾದಿ ಮೌಲ್ಯಮಾಪನವಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಇನ್ನು ಇದಕ್ಕೆ ಹಲವು ಕಾರಣಗಳನ್ನು ನೀಡಲಾಗಿದೆ.

ನಮ್ಮ ಆರ್ಥಿಕತೆಯು ಹಣದ ಬೇಡಿಕೆ ಮತ್ತು ಪೂರೈಕೆಯ ಮೇಲೆ ಅವಲಂಬಿತವಾಗಿದೆ. ಆದರೆ ಕಳೆದ ಹಲವು ತಿಂಗಳುಗಳಿಂದ ದೇಶದ ಪೂರಕ ಬೆಳವಣಿಗೆಗೆ ಪ್ರಮುಖ ಕಾರಣವಾಗಿರುವ ಬೇಡಿಕೆಯಲ್ಲಿ ಕುಸಿತ ಕಂಡುಬಂದಿದೆ. ಎರಡನೆಯದಾಗಿ, ದೇಶದಿಂದ ವಿದೇಶಗಳಿಗೆ ಮಾಡಲಾಗುವ ರಫ್ತುಗಳು. ಕಳೆದ ವರ್ಷದ 400 ಶತಕೋಟಿ ಡಾಲರ್​ ರಫ್ತಿನ ಗುರಿಯನ್ನು ಮುಟ್ಟಲು ಸಾಧ್ಯವಾಗಿದ್ದ ಆರ್ಥಿಕತೆಗೆ ಈ ವರ್ಷ ಜಾಗತಿಕ ಆರ್ಥಿಕ ಚಟುವಟಿಕೆಯಲ್ಲಿನ ಮಂದಗತಿಯ ಕಾರಣದಿಂದಾಗಿ ರಫ್ತಿನಲ್ಲೂ ಹಿನ್ನಡೆ ಸಾಧಿಸುವಂತಾಗಿದೆ.

ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಭೀತಿ : ಇದಲ್ಲದೆ ಭಾರತದ ಪ್ರಮುಖ ವ್ಯಾಪಾರದ ಪಾಲುದಾರ ಅಮೆರಿಕ ಆರ್ಥಿಕ ಹಿಂಜರಿತಕ್ಕೆ ಒಳಗಾಗುವ ಭೀತಿಯನ್ನು ಎದುರಿಸುತ್ತಿದೆ. ಈ ಹಿನ್ನಲೆ ಯುಎಸ್​ನ ಫೆಡರಲ್ ರಿಸರ್ವ್​ ಬ್ಯಾಂಕ್​ಗಳು ಆರ್ಥಿಕ ಹಿಂಜರಿತವನ್ನು ತಡೆಯಲು ಹಣದ ಪೂರೈಕೆ ನಿಯಂತ್ರಿಸಲು ಮುಂದಾಗಿದೆ. ನಾಲ್ಕು ದಶಕಗಳಲ್ಲಿ ಕಾಣದ ಹಣದುಬ್ಬರವನ್ನು ಅಮೆರಿಕ ಎದುರಿಸುತ್ತಿದ್ದು, ಇದರಿಂದಾಗಿ ಆಹಾರ ಮತ್ತು ಇಂಧನಗಳ ಬೆಲೆಯಲ್ಲಿ ಏರಿಕೆ ಕಂಡಿದೆ.

ಇನ್ನು, ಭಾರತದಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಆರ್​​ಬಿಐ ಕಳೆದ ಮೇ ತಿಂಗಳಿನಲ್ಲಿ ವಿಮಾದರಗಳನ್ನು ಏರಿಕೆ ಮಾಡಿದೆ. 1934ರ ಆರ್‌ಬಿಐ ಕಾಯಿದೆಯ ಸೆಕ್ಷನ್​ 45ZA ಅಡಿಯಲ್ಲಿ, ಗ್ರಾಹಕ ಹಣದುಬ್ಬರವನ್ನು ಕೇಂದ್ರ ಸರ್ಕಾರವು ನಿಗದಿಪಡಿಸಿದ ಗುರಿಯೊಳಗೆ ಶೇ. 4ರಷ್ಟು ಹೆಚ್ಚು ಮತ್ತು ಶೇ. 2ರಷ್ಟು ನಿಯಂತ್ರಣ ಹೊಂದಲು ಆರ್​ಬಿಐ ಬಾಧ್ಯತೆ ಹೊಂದಿದೆ.

ಹಣದುಬ್ಬರ ನಿಯಂತ್ರಣಕ್ಕೆ ರಿಸರ್ವ್ ಬ್ಯಾಂಕ್​​ ಹಣದ ಪೂರೈಕೆಯನ್ನು ನಿಯಂತ್ರಿಸಿದ್ದು, ಇದು ವ್ಯವಹಾರಗಳಿಗೆ ಮತ್ತು ವ್ಯಕ್ತಿಗಳಿಗೆ ಹಣ ಪಡೆಯುವುದನ್ನು ದುಬಾರಿಗೊಳಿಸಿದೆ. ಜೊತೆಗೆ ಇದು ಜನರ ಖರೀದಿಯ ನಡವಳಿಕೆಯ ಮೇಲೆ ಪರಿಣಾಮಗಳನ್ನು ಬೀರುತ್ತಿದೆ. ರಾಷ್ಟ್ರೀಯ ಅಂಕಿ ಅಂಶ ಸಂಸ್ಥೆಯು ಈ ವರ್ಷದ ವಾರ್ಷಿಕ ಬೆಳವಣಿಗೆಯನ್ನು ಶೇ.7ರಷ್ಟು ಎಂದು ಊಹಿಸಿದೆಯಾದರೂ, ಕೋವಿಡ್​​ ಸೋಂಕಿನ ನಂತರ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯನ್ನು ಹೋಲಿಸುವುದು ಕಷ್ಟಕರವಾಗಿದೆ ಎಂದು ಹೇಳಿದೆ.

ಅರ್ಥಶಾಸ್ತ್ರಜ್ಞರ ಪ್ರಕಾರ, ದೇಶದಲ್ಲಿನ ಆರ್ಥಿಕ ಚಟುವಟಿಕೆಯನ್ನು ನಿರ್ಣಯಿಸಲು ಸಾಂಕ್ರಾಮಿಕ ಪೂರ್ವದ ಅಂಕಿಅಂಶಗಳೊಂದಿಗೆ ಪ್ರಸ್ತುತ ಬೆಳವಣಿಗೆಯ ಅಂಕಿ ಅಂಶಗಳನ್ನು ವಿಶ್ಲೇಷಿಸುವುದು ಉತ್ತಮ ಮಾರ್ಗವಾಗಿದೆ. ಉದಾಹರಣೆಗೆ, 2019-2020ರ ಮೂರನೇ ತ್ರೈಮಾಸಿಕದಲ್ಲಿ ಮತ್ತು 2022-23ರ ಮೂರನೇ ತ್ರೈಮಾಸಿಕದಲ್ಲಿ ಸಂಯೋಜಿತ ವಾರ್ಷಿಕ ಬೆಳವಣಿಗೆ ದರವನ್ನು (CAGR) ಶೇ. 3.7ರಷ್ಟು ಎಂದು ನಿರ್ಣಯಿಸಲಾಗಿದೆ. ಇದು 2016-17ರ ಮೂರನೇ ತ್ರೈಮಾಸಿಕದಲ್ಲಿ ಶೇ. 5.4ರಷ್ಟು ಮತ್ತು 2019-20ರ ಮೂರನೇ ತ್ರೈಮಾಸಿಕದಲ್ಲಿ ಅವಧಿಯಲ್ಲಿ 170 ಅಂಕಗಳ ಕುಸಿತದಿಂದಾಗಿ ಶೇ1.7 ರಷ್ಟು ದಾಖಲಿಸಿತ್ತು.

ಕೈಗಾರಿಕಾ ವಲಯ ದುರ್ಬಲ ಚೇತರಿಕೆ : ವಲಯವಾರು ಆರ್ಥಿಕ ಬೆಳವಣಿಗೆಯನ್ನು ನಾವು ಗಮನಿಸುತ್ತ ಹೋದರೆ ಇದು ಗಣನೀಯವಾಗಿ ಬದಲಾಗುತ್ತಿರುತ್ತದೆ. ಉದಾಹರಣೆಗೆ, 2019-20ರ ಮೂರನೇ ತ್ರೈಮಾಸಿಕದಿಂದ 2020-23ರ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಉದ್ಯಮದ ಸಂಯೋಜಿತ ವಾರ್ಷಿಕ ಬೆಳವಣಿಗೆಯನ್ನು ಶೇ. 4.4ರಷ್ಟು ಎಂದು ನಿರ್ಣಯಿಸಲಾಗಿದೆ. ಇದು ಕೊರೊನಾ ಸಾಂಕ್ರಾಮಿಕ ರೋಗ ಬರುವುದಕ್ಕಿಂತ 2016-17ರಿಂದ 2019-20ರ ಮೂರನೇ ತ್ರೈಮಾಸಿಕದಲ್ಲಿ ಶೇ. 3.2ರಷ್ಟು ಇತ್ತು.

ಇನ್ನು, ಉದ್ಯಮದ ಬಹುತೇಕ ಎಲ್ಲಾ ಉಪ ವಲಯಗಳಲ್ಲಿ ಉತ್ತಮ ಅಭಿವೃದ್ಧಿ ಕಂಡುಬಂದಿದ್ದರೂ, ಎನ್ಎಸ್​ಓ ಊಹಿಸಿದಂತೆ ಜಿಡಿಪಿಯನ್ನು ಶೇ. 7ರಿಂದ 8ಕ್ಕೆ ತೆಗೆದುಕೊಂಡು ಹೋಗಲು ಬೇಕಾದ ಅಗತ್ಯ ಬೆಳವಣಿಗೆ ಮಟ್ಟಕ್ಕಿಂತ ಕಡಿಮೆ ಇದೆ.

ಸೇವಾ ವಲಯ ಇನ್ನೂ ಚೇತರಿಸಿಕೊಂಡಿಲ್ಲ : ಭಾರತದ ಆರ್ಥಿಕತೆ ಪ್ರಮುಖ ಭಾಗವಾಗಿರುವ ಸೇವಾ ವಲಯವು ಕೋವಿಡ್​ ಹೊಡೆತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ವೇಗವಾಗಿ ಬೆಳೆಯುತ್ತಿರುವ ಸೇವಾ ವಲಯವು ಕೋವಿಡ್ ಸಾಂಕ್ರಾಮಿಕ ರೋಗದ ಹೊಡೆತದಿಂದ ಹಿಂದೆ ಬಿದ್ದಿದೆ.

ಕೋವಿಡ್‌ನ ಮೂರು ವರ್ಷಗಳಲ್ಲಿ, 2019-20ರ ಮೂರನೇ ತ್ರೈಮಾಸಿಕದಲ್ಲಿ ಮತ್ತು 2022-23ರ ಮೂರನೇ ತ್ರೈಮಾಸಿಕದಲ್ಲಿ ಶೇ.4 ರಷ್ಟು ಸಂಯೋಜಿತ ವಾರ್ಷಿಕ ಬೆಳವಣಿಗೆಯ ದರ ಹೊಂದಿತ್ತು. ಆದರೆ ಇದು 2016-17ರ ಮೂರನೇ ತ್ರೈಮಾಸಿಕದಿಂದ 2019-20ರ ಮೂರನೇ ತ್ರೈಮಾಸಿಕದ ಸಂಯೋಜಿತ ವಾರ್ಷಿಕಕ್ಕಿಂತ 260 ಬೇಸಿಸ್ ಪಾಯಿಂಟ್‌ಗಳಿಂದ (2.6%) ಕಡಿಮೆಯಾಗಿದೆ ಎಂದು ಹೇಳಿದೆ.

ಕೃಷಿ ವಲಯ ಮತ್ತು ಗ್ರಾಮೀಣ ಆರ್ಥಿಕತೆಗೆ ಹೊಡೆತ : ಭಾರತೀಯರಿಗೆ ಜೀವನೋಪಾಯವನ್ನು ನೀಡುವ ಕೃಷಿ ಕ್ಷೇತ್ರವು ಈ ವರ್ಷ ಬಿಸಿಗಾಳಿಯಿಂದಾಗಿ ಸಂಕಷ್ಟವನ್ನು ಎದುರಿಸುವ ಸಾಧ್ಯತೆ ಇದೆ. ದೇಶದ ಕೆಲವು ಭಾಗಗಳಲ್ಲಿ ಈಗಾಗಲೇ ಕಳೆದ ತಿಂಗಳು ಬೆಚ್ಚಗಿನ ವಾತಾವರಣದಿಂದ ದೇಶದಲ್ಲಿ ಗೋಧಿ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದರಿಂದಾಗಿ ಆಹಾರ ಪೂರೈಕೆಯಲ್ಲೂ ಏರಿಳಿತ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.

ಭಾರತದ ಹವಾಮಾನ ಇಲಾಖೆಯು ಮಾರ್ಚ್ ಮತ್ತು ಮೇ ತಿಂಗಳಲ್ಲಿ ವಾತಾವರಣದಲ್ಲಿ ಬಿಸಿ ಗಾಳಿ ಬೀಸುವ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ. ಇದು ಕೃಷಿ ಕ್ಷೇತ್ರದಲ್ಲಿನ ಉತ್ಪಾದಕತೆ ಮೇಲೆ ಪರಿಣಾಮ ಬೀರಬಹುದು. ಎನ್​​ಎಸ್​ಓ ಪ್ರಸಕ್ತ ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಕೃಷಿ ಬೆಳವಣಿಗೆಯನ್ನು ಶೇ. 4.3ರಷ್ಟು ಅಂದಾಜಿಸಿದೆ. ಆದರೆ ಬಿಸಿ ಗಾಳಿ ಪರಿಸ್ಥಿತಿಯು ನಾಲ್ಕನೇ ತ್ರೈಮಾಸಿಕ ಮತ್ತು ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ. ಇದು ಆಹಾರದ ಉತ್ಪಾದಕತೆ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ : ಅಮೆರಿಕ ಇತಿಹಾಸದಲ್ಲಿ 2ನೇ ಅತಿದೊಡ್ಡ ಬ್ಯಾಂಕ್ ವೈಫಲ್ಯ..' ಸಿಲಿಕಾನ್ ವ್ಯಾಲಿ ಬ್ಯಾಂಕ್' ಮುಚ್ಚಲು ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.