ನವದೆಹಲಿ : ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿಪಕ್ಷದ ನಾಯಕ ಹಾಗೂ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ರೌಸ್ ಅವೆನ್ಯೂ ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಈ ಆದೇಶವನ್ನು ಪ್ರಶ್ನಿಸಿ ಮನೀಶ್ ಸಿಸೋಡಿಯಾ ಅವರು ಸುಪ್ರೀಂ ಕೋರ್ಟ್‌ಗೆ ಮೆಟ್ಟಿಲೇರಿದ್ದಾರೆ.
ದೆಹಲಿ ಸರ್ಕಾರದ ಅಬಕಾರಿ ನೀತಿ ಮದ್ಯ ಹಗರಣಕ್ಕೆ ಸಂಬಂಧಿಸಿದ ಸಿಬಿಐ ಮತ್ತು ಇಡಿ ಎರಡೂ ಪ್ರಕರಣಗಳಲ್ಲಿ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್ ಆದೇಶವನ್ನು ಸಿಸೋಡಿಯಾ ಪ್ರಶ್ನಿಸಿ ಗುರುವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜುಲೈ 3ರಂದು ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿ ಜಾಮೀನು ನೀಡಿಲ್ಲ. ಕಾರಣ ನೀವು ರಾಜ್ಯದಲ್ಲಿ ಪ್ರಬಲ ಹುದ್ದೆಯಲ್ಲಿದ್ದು, ಜೈಲಿನಿಂದ ಹೊರಬಂದು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಹೇಳಿ ಆದೇಶ ಹೊರಡಿಸಿತ್ತು.
ಮತ್ತೊಂದೆಡೆ, ಸಿಸೋಡಿಯಾ ಅವರ ಕಾನೂನು ತಂಡ ಅವರನ್ನು ಅಮಾನುಷವಾಗಿ ನಡೆಸಿಕೊಳ್ಳಲಾಗಿದೆ ಎಂದು ಆರೋಪ ಮಾಡಿದ ನಂತರ ದೆಹಲಿ ಪೊಲೀಸರು ಸಿಸೋಡಿಯಾ ಅವರನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತ್ರ ಹಾಜರುಪಡಿಸಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ಗುರುವಾರ ಬೆಳಗ್ಗೆ ರೋಸ್ ಅವೆನ್ಯೂ ನ್ಯಾಯಾಲಯವು ತಿರಸ್ಕರಿಸಿದೆ. ಪರಿಣಾಮಕಾರಿ ವಿಚಾರಣೆಗೆ ದೈಹಿಕವಾಗಿ ಹಾಜರಾಗಲು ಸಿಸೋಡಿಯಾ ಅವರಿಗೆ ಹಕ್ಕಿದೆ. ನ್ಯಾಯಾಲಯಕ್ಕೆ ಹಾಜರಾಗುವ ಹಕ್ಕನ್ನು ಮೊಟಕುಗೊಳಿಸಬಾರದು ಎಂದು ಸಿಸೋಡಿಯಾ ಪರ ವಕೀಲರು ವಾದಿಸಿದರು. ಇದಕ್ಕೆ ನ್ಯಾಯಾಲಯ ಸಮ್ಮತಿ ನೀಡಿದೆ.
ಐದು ತಿಂಗಳಿಂದ ಜೈಲಿನಲ್ಲಿರುವ ಸಿಸೋಡಿಯಾ : ದೆಹಲಿ ಅಬಕಾರಿ ನೀತಿ 2021-22ರ ರಚನೆ ಮತ್ತು ಅನುಷ್ಠಾನದಲ್ಲಿ ಸಾಕಷ್ಟು ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ. ಅಲ್ಲದೇ, ಸಾಕಷ್ಟು ವಿವಾದ ಸೃಷ್ಟಿಯಾದ ಬೆನ್ನಲ್ಲೇ ಈ ನೀತಿಯನ್ನು ಸರ್ಕಾರ ರದ್ದು ಮಾಡಿತ್ತು. ಸದ್ಯ ಈ ಸಂಬಂಧ ಕೇಂದ್ರೀಯ ತನಿಖಾ ದಳ (ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಪ್ರತ್ಯೇಕ ತನಿಖೆ ನಡೆಸುತ್ತಿವೆ. ಹಲವಾರು ಸುತ್ತಿನ ವಿಚಾರಣೆಯ ನಂತರ ಸಿಬಿಐ ಫೆಬ್ರವರಿ 26 ರಂದು ಸಿಸೋಡಿಯಾ ಅವರನ್ನು ಬಂಧಿಸಿತ್ತು. ಇದರ ಬಳಿಕ ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಮಾರ್ಚ್ 9 ರಂದು ಇಡಿ ಸಹ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಪ್ರಸ್ತುತ ಇಡಿ ಪ್ರಕರಣದಲ್ಲಿ 5 ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ನಡುವೆ ಸಿಸೋಡಿಯಾ ಅವರ ಪತ್ನಿಯನ್ನು ಭೇಟಿಯಾಗಲು ಒಂದು ದಿನ ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ ಹೈಕೋರ್ಟ್ ವಿನಾಯಿತಿ ನೀಡಿತ್ತು. ನಂತರ ಕಳೆದ ತಿಂಗಳು ದೆಹಲಿ ಪೊಲೀಸರ ಬಿಗಿ ಭದ್ರತೆಯಲ್ಲಿ ಪತ್ನಿಯನ್ನು ಭೇಟಿಯಾಗಿದ್ದರು. ಈ ವೇಳೆ ಅವರ ಪತ್ನಿ ಸೋಶಿಯಲ್ ಮೀಡಿಯಾದಲ್ಲಿ ಪತ್ರವೊಂದನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : ಅಬಕಾರಿ ನೀತಿ ಹಗರಣ ಪ್ರಕರಣ: ಸಿಸೋಡಿಯಾಗೆ ಜೂನ್ 2ರವರೆಗೆ ನ್ಯಾಯಾಂಗ ಬಂಧನ