ETV Bharat / bharat

ಅಬಕಾರಿ ನೀತಿ ಪ್ರಕರಣ: ಇಂದು ಇಡಿ ಮುಂದೆ ಹಾಜರಾಗಲಿರುವ ದೆಹಲಿ ಸಿಎಂ ಕೇಜ್ರಿವಾಲ್

author img

By PTI

Published : Nov 2, 2023, 8:39 AM IST

Delhi CM Kejriwal to appear before ED: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಗುರುವಾರ) ದೆಹಲಿ ಸಿಎಂ ಕೇಜ್ರಿವಾಲ್ ಅವರು ಇಡಿ ಮುಂದೆ ವಿಚಾರಣೆಗಾಗಿ ಹಾಜರಾಗಲಿದ್ದಾರೆ.

Excise policy case
ಅಬಕಾರಿ ನೀತಿ ಪ್ರಕರಣ: ಇಂದು ಇಡಿ ಮುಂದೆ ಹಾಜರಾಗಲಿರುವ ದೆಹಲಿ ಸಿಎಂ ಕೇಜ್ರಿವಾಲ್

ನವದೆಹಲಿ: ಇಡೀ ದೇಶದ ಗಮನ ಸಳೆದ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ತಿಂಗಳ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಿಬಿಐನಿಂದ (ಕೇಂದ್ರ ತನಿಖಾ ದಳ) ಸುಮಾರು ಒಂಬತ್ತು ಗಂಟೆಗಳ ಕಾಲ ವಿಚಾರಣೆಗೆ ಒಳಗಾಗಿದ್ದರು. ಇದಾದ ಬಳಿಕ ಇಂದು ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆಗೆ ಹಾಜರಾಗಲಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಇಡಿ ಕೇಜ್ರಿವಾಲ್‌ಗೆ ಸಮನ್ಸ್ ನೀಡಿತ್ತು.

ಈ ಪ್ರಕರಣದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಈ ವರ್ಷದ ಫೆಬ್ರವರಿಯಲ್ಲಿ ಸಿಬಿಐ ಬಂಧಿಸಿತ್ತು. ಈ ವಾರದ ಆರಂಭದಲ್ಲಿ ಸಿಸೋಡಿಯಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಪ್ರಕರಣ ಕುರಿತಾಗಿ ಕಳೆದ ಏಪ್ರಿಲ್‌ನಲ್ಲಿ ಸಿಬಿಐ, ಕೇಜ್ರಿವಾಲ್ ಅವರಿಗೆ ಸುಮಾರು 56 ಪ್ರಶ್ನೆಗಳನ್ನು ಕೇಳಿತ್ತು. ''ಈ ಪ್ರಕರಣವನ್ನು ಜಟಿಲಗೊಳಿಸಲಾಗುತ್ತಿದೆ. ಎಎಪಿಯನ್ನು ಮುಗಿಸುವ ಪ್ರಯತ್ನ ನಡೆಯುತ್ತಿದೆ'' ಎಂದು ಕೇಜ್ರಿವಾಲ್ ಈ ಸಂದರ್ಭದಲ್ಲಿ ಗಂಭೀರ ಆರೋಪ ಮಾಡಿದ್ದರು.

ಪ್ರಕರಣದ ಹಿನ್ನೆಲೆ: ಸಿಬಿಐ ಮತ್ತು ಜಾರಿ ನಿರ್ದೇಶನಾಲಯವು ದೆಹಲಿ ಸರ್ಕಾರದ 2021-22ರ ಅಬಕಾರಿ ನೀತಿಯ ಬಗ್ಗೆ ತನಿಖೆ ನಡೆಸುತ್ತಿದೆ. ಈ ನೀತಿ ಅಡಿಯಲ್ಲಿ ಕೆಲವು ಮದ್ಯ ವಿತರಕರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಆರೋಪಿಸಲಾಗಿದೆ. ಆದ್ರೆ, ಇದನ್ನು ಎಎಪಿ ಬಲವಾಗಿ ನಿರಾಕರಿಸಿದೆ.

ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ವರದಿಯ ಆಧಾರದ ಮೇಲೆ, ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಕಳೆದ ವರ್ಷ ಜುಲೈನಲ್ಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ನಡೆದ ಅಕ್ರಮಗಳ ಬಗ್ಗೆ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು.

ಕೋವಿಡ್ 19 ಸಂದರ್ಭದಲ್ಲಿ ಚಿಲ್ಲರೆ ಪರವಾನಗಿದಾರರಿಗೆ 144 ಕೋಟಿ ರೂಪಾಯಿ ಮನ್ನಾ ಮತ್ತು ವಿಮಾನ ನಿಲ್ದಾಣ ವಲಯದ ಯಶಸ್ವಿ ಬಿಡ್‌ದಾರರಿಗೆ 30 ಕೋಟಿ ರೂಪಾಯಿ ಮರುಪಾವತಿ ಸೇರಿದಂತೆ ಹಲವಾರು ಅಕ್ರಮಗಳನ್ನು ವರದಿ ಉಲ್ಲೇಖಿಸಿದೆ. ಅಲ್ಲಿ ಮದ್ಯದಂಗಡಿ ತೆರೆಯಲು ನಿರಾಕ್ಷೇಪಣಾ ಪ್ರಮಾಣಪತ್ರ ನೀಡಲಾಗಿದೆ. ಸಗಟು ಪರವಾನಗಿದಾರರ ಕಮಿಷನ್ ಅನ್ನು 'ಕ್ವಿಡ್ ಪ್ರೋಕೋ'ದ ನಿದರ್ಶನದಲ್ಲಿ ಶೇಕಡಾ 5 ರಿಂದ 12ಕ್ಕೆ ಏರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಯುಪಿ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆಗೆ ಕಸರತ್ತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.