ETV Bharat / bharat

ನ್ಯಾಯಾಲಯಕ್ಕೆ ಪ್ರತಿಯೊಂದು ಪ್ರಕರಣವೂ ಮುಖ್ಯ: ಸಿಜೆಐ ಡಿ.ವೈ.ಚಂದ್ರಚೂಡ್

author img

By

Published : Feb 5, 2023, 9:57 AM IST

ಸುಪ್ರೀಂ ಕೋರ್ಟ್​ಗೆ ದೊಡ್ಡ ಅಥವಾ ಸಣ್ಣ ಪ್ರಕರಣ ಅಂತಾ ಇಲ್ಲ. ಪ್ರತಿಯೊಂದು ಪ್ರಕರಣವೂ ಮುಖ್ಯ ಎಂದು ಸಿಜೆಐ ಡಿ.ವೈ.ಚಂದ್ರಚೂಡ್ ಹೇಳಿದರು.

CJI Chandrachud
ಸಿಜೆಐ ಚಂದ್ರಚೂಡ್

ನವದೆಹಲಿ: ಎಲ್ಲರಿಗೂ ನ್ಯಾಯ ದೊರೆಯುವಂತೆ ಮಾಡಲು ಸುಪ್ರೀಂ ಕೋರ್ಟ್ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ. ನ್ಯಾಯಾಲಯಕ್ಕೆ ದೊಡ್ಡ ಅಥವಾ ಸಣ್ಣ ಪ್ರಕರಣಗಳು ಅಂತೇನಿಲ್ಲ. ಪ್ರತಿಯೊಂದು ಪ್ರಕರಣವೂ ಮುಖ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಶನಿವಾರ ಅಭಿಪ್ರಾಯಪಟ್ಟರು.

ಭಾರತದ ಸುಪ್ರೀಂ ಕೋರ್ಟ್ ಸ್ಥಾಪನೆಯಾಗಿ 73 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಜೆಐ, "ಉನ್ನತ ನ್ಯಾಯಾಲಯವು ಸಾಂವಿಧಾನಿಕ ಕರ್ತವ್ಯಗಳು, ಕಟ್ಟುಪಾಡುಗಳು ಮತ್ತು ಕಾರ್ಯಗಳನ್ನು ನಿರ್ವಹಿಸುತ್ತದೆ. ಪ್ರತಿದಿನ ಕೋರ್ಟ್‌ನಲ್ಲಿ ನೂರಾರು ಪ್ರಕರಣಗಳು ವಿಚಾರಣೆಗೆ ಬರುತ್ತಿದ್ದು, ತ್ವರಿತ ವಿಲೇವಾರಿಗೆ ನ್ಯಾಯಾಧೀಶರು ಮತ್ತು ರಿಜಿಸ್ಟ್ರಾರ್ ಸಿಬ್ಬಂದಿ ಅಪಾರ ಶ್ರಮವಹಿಸುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ 12,471 ಪ್ರಕರಣಗಳನ್ನು ಕೋರ್ಟ್ ವಿಲೇವಾರಿ ಮಾಡಿದೆ. ಮಾರ್ಚ್ 23, 2020 ಮತ್ತು ಅಕ್ಟೋಬರ್ 30, 2022 ರ ನಡುವೆ ವಿಡಿಯೋ ಕಾನ್ಫರೆನ್ಸ್​​ ಮೂಲಕ 3.37 ಲಕ್ಷ ಪ್ರಕರಣಗಳನ್ನು ಆಲಿಸಲಾಗಿದೆ. ನಾಗರಿಕರ ಕುಂದುಕೊರತೆಗಳ ಬಗ್ಗೆ ವಿಚಾರಣೆ ನಡೆಸುವಾಗ ನ್ಯಾಯಾಲಯವು ಸರಳ ಸಾಂವಿಧಾನಿಕ ಬಾಧ್ಯತೆಯನ್ನು ನಿರ್ವಹಿಸುತ್ತದೆ" ಎಂದರು.

ಇದನ್ನೂ ಓದಿ: ಪ್ರಾದೇಶಿಕ ಭಾಷೆಗಳಲ್ಲಿಯೂ ಸುಪ್ರೀಂ ಕೋರ್ಟ್‌ ತೀರ್ಪು: ಸಿಜೆಐ ಅಭಿಪ್ರಾಯ ಶ್ಲಾಘಿಸಿದ ಪ್ರಧಾನಿ ಮೋದಿ

ಜನರ ನ್ಯಾಯಾಲಯ: "ಸರ್ವೋಚ್ಚ ನ್ಯಾಯಾಲಯವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಜಾಪ್ರಭುತ್ವದ ಸೇವೆ ಸಲ್ಲಿಸುತ್ತಿದೆ. ಇದು ನಿಜ ಅರ್ಥದಲ್ಲಿ 'ಜನರ ನ್ಯಾಯಾಲಯ'. ಸುಪ್ರೀಂ ಕೋರ್ಟ್‌ನ ನ್ಯಾಯಶಾಸ್ತ್ರದ ವಿಧಾನ ವಿಕಸನಗೊಳ್ಳುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ, ಖಾಸಗಿತನದ ಹಕ್ಕು, ಲೈಂಗಿಕ ಮತ್ತು ಸಂತಾನೋತ್ಪತ್ತಿ ಆಯ್ಕೆಗಳಂತಹ ಮೂಲಭೂತ ಹಕ್ಕುಗಳನ್ನು ಗುರುತಿಸುವ, ರಕ್ಷಿಸುವ ಗುರುತರ ತೀರ್ಪುಗಳನ್ನು ಕೋರ್ಟ್‌ ನೀಡಿದೆ" ಎಂದು ಹೇಳಿದರು.

ಲಿಂಗ ಸಮಾನತೆಯ ಪ್ರತಿಪಾದಕ: "ನಮ್ಮ ನ್ಯಾಯಾಲಯವು ಲಿಂಗ ಸಮಾನತೆಯ ಪ್ರಬಲ ಪ್ರತಿಪಾದಕನಾಗಿ ಹೊರಹೊಮ್ಮಿದೆ. ಮಾತ್ರವಲ್ಲ, ಮಾನವ ಹಕ್ಕುಗಳ ಚೌಕಟ್ಟಿನೊಳಗೆ ಕ್ರಿಮಿನಲ್ ನ್ಯಾಯದ ಆಡಳಿತದ ಸಂಪರ್ಕವನ್ನು ಖಾತ್ರಿಪಡಿಸುತ್ತಿದೆ. ಅದು ಉತ್ತರಾಧಿಕಾರದ ಕಾನೂನುಗಳ ವ್ಯಾಖ್ಯಾನ ಅಥವಾ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಪ್ರವೇಶವನ್ನು ಭದ್ರಪಡಿಸುತ್ತದೆ. ಕ್ರಿಮಿನಲ್ ನ್ಯಾಯದ ಆಡಳಿತವು ಮಾನವ ಹಕ್ಕುಗಳ ಚೌಕಟ್ಟಿನಿಂದ ಬೇರ್ಪಟ್ಟಿಲ್ಲ ಎಂಬುದನ್ನು ನ್ಯಾಯಾಲಯ ಖಚಿತಪಡಿಸಿದೆ" ಎಂದರು.

ಮೂಲಭೂತ ಹಕ್ಕುಗಳು ರಕ್ಷಕ: "ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಲು ಸುಪ್ರೀಂ ಕೋರ್ಟ್ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಕಾನೂನನ್ನು ಮಾನವೀಯಗೊಳಿಸಲು ಮತ್ತು ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ರಕ್ಷಕನಾಗಿ ಕೋರ್ಟ್‌ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತಿದೆ" ಎಂದು ಸಿಜೆಐ ಚಂದ್ರಚೂಡ್ ಹೇಳಿದರು.

"ಸುಪ್ರೀಂ ಕೋರ್ಟ್‌ನ ಇತಿಹಾಸವು ಭಾರತೀಯ ಜನರ ದೈನಂದಿನ ಜೀವನ ಹೋರಾಟಗಳ ಇತಿಹಾಸವಾಗಿದೆ" ಎಂದು ಸಿಜೆಐ ಹೇಳಿದರು. 73ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಿಂಗಾಪುರದ ಮುಖ್ಯ ನ್ಯಾಯಮೂರ್ತಿ ಸುಂದರೇಶ್ ಮೆನನ್ ಅವರು, "ಬದಲಾಗುತ್ತಿರುವ ಜಗತ್ತಿನಲ್ಲಿ ನ್ಯಾಯಾಂಗದ ಪಾತ್ರ" ಕುರಿತು ಮಾತನಾಡಿದರು. ಭಾರತ ಗಣರಾಜ್ಯವಾದ ಎರಡು ದಿನಗಳ ನಂತರ ಅಂದರೆ ಜನವರಿ 28, 1950 ರಂದು ಸುಪ್ರೀಂ ಕೋರ್ಟ್ ಅಸ್ತಿತ್ವಕ್ಕೆ ಬಂದಿತ್ತು.

ಇದನ್ನೂ ಓದಿ: 'ಸಂವಿಧಾನದ ಆತ್ಮಕ್ಕೆ ಧಕ್ಕೆ ಬರದಂತೆ ಬದಲಾದ ಕಾಲಕ್ಕನುಗುಣವಾಗಿ ವಿಶ್ಲೇಷಿಸುವುದೇ ನ್ಯಾಯಾಧೀಶರ ಕೌಶಲ್ಯ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.