ETV Bharat / bharat

ಏಕನಾಥ್​ ಶಿಂಧೆ ನೇತೃತ್ವದ ಬಣವೇ ನಿಜವಾದ ಶಿವಸೇನೆ: ಉದ್ಧವ್​ ಕೈ ಜಾರಿದ ಬಿಲ್ಲು-ಬಾಣ

author img

By

Published : Feb 17, 2023, 7:21 PM IST

Updated : Feb 17, 2023, 8:00 PM IST

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ನೇತೃತ್ವದ ಬಣವೇ ನಿಜವಾದ ಶಿವಸೇನೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

Etv Bharat
Etv Bharat

ನವದೆಹಲಿ: ಮಹಾರಾಷ್ಟ್ರ ರಾಜಕಾರಣದಲ್ಲಿ ಉದ್ಧವ್​ ಠಾಕ್ರೆಗೆ ಭಾರಿ ಹಿನ್ನಡೆಯಾಗಿದೆ. ಏಕನಾಥ್​ ಶಿಂಧೆ ಬಣವನ್ನು ನಿಜವಾದ ಶಿವಸೇನೆ ಎಂದು ಕೇಂದ್ರ ಚುನಾವಣಾ ಆಯೋಗ ಗುರುತಿಸಿ, ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಹಂಚಿಕೆ ಮಾಡಿ ಆದೇಶಿಸಿದೆ.

ಕಳೆದ ವರ್ಷ ಶಿವಸೇನೆ ನಾಯಕ ಏಕನಾಥ್​ ಶಿಂಧೆ ಬಂಡಾಯದಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿ ಎದ್ದಿತ್ತು. ಶಿವಸೇನೆ, ಕಾಂಗ್ರೆಸ್​, ಎನ್​ಸಿಪಿ ಮೈತ್ರಿಕೂಟದ ಮಹಾ ವಿಕಾಸ ಆಘಾಡಿ ಸರ್ಕಾರದ ವಿರುದ್ಧ ಶಿಂಧೆ ಸೇರಿದಂತೆ ಸುಮಾರು 50 ಶಾಸಕರು ಬಂಡಾಯದ ಬಾವುಟ ಹಾರಿಸಿದ್ದರು. ಇದರಿಂದ 2022ರ ಜೂನ್​ 29ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್​ ರಾಜೀನಾಮೆ ನೀಡಿದ್ದರು. ಮತ್ತೊಂದೆಡೆ, ಏಕನಾಥ್​ ಶಿಂಧೆ ಬಿಜೆಪಿ ಜೊತೆಗೂಡಿ ಸರ್ಕಾರ ರಚನೆ ಮಾಡಿದ್ದರು.

ಈ ಮೂಲಕ ಶಿವಸೇನೆ ಪಕ್ಷ ಇಬ್ಭಾಗಗೊಂಡಿತ್ತು. ಉದ್ಧವ್​ ಮತ್ತು ಶಿಂಧೆ ನಡುವೆ ಮೂಲ ಶಿವಸೇನೆ ಯಾವುದು ಎಂಬ ಕಿತ್ತಾಟ ಆರಂಭವಾಗಿತ್ತು. ನವೆಂಬರ್​ನಲ್ಲಿ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಶಿವಸೇನೆಯ ಮೂಲ ಚಿಹ್ನೆಯಾದ ಬಿಲ್ಲು ಮತ್ತು ಬಾಣದ ಗುರುತನ್ನು ಯಾವುದೇ ಬಣ ಬಳಸದಂತೆ ಸೂಚಿಸಲಾಗಿತ್ತು. ಎರಡು ಬಣಗಳಿಗೂ ಪ್ರತ್ಯೇಕವಾದ ಚಿಹ್ನೆಯನ್ನು ಹಂಚಿಕೆ ಮಾಡಲಾಗಿತ್ತು. ಆಗ ಶಿಂಧೆ ಬಣವು ಎರಡು ಕತ್ತಿ ಮತ್ತು ಗುರಾಣಿ ಚಿಹ್ನೆ ಪಡೆದಿದ್ದರೆ, ಉದ್ಧವ್ ಠಾಕ್ರೆ ಬಣವು ಪ್ರಜ್ವಲಿಸುವ ಜ್ಯೋತಿಯ ಚಿಹ್ನೆಯನ್ನು ಹೊಂದಿತ್ತು.

ಆಯೋಗ ಹೇಳಿದ್ದೇನು?: ಇದೀಗ ಚಿಹ್ನೆಗಾಗಿ ನಡೆದ ಸುದೀರ್ಘ ಹೋರಾಟದ ನಂತರ ಚುನಾವಣಾ ಆಯೋಗವು 78 ಪುಟಗಳ ಆದೇಶ ಹೊರಡಿಸಿದೆ. ಹಾಲಿ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಬಣಕ್ಕೆ ಮೂಲ ಚಿಹ್ನೆ ಎಂದರೆ, ಬಿಲ್ಲು ಮತ್ತು ಬಾಣದ ಚಿಹ್ನೆ ಹಂಚಿಕೆ ಮಾಡಿದೆ. ಇತ್ತ, ಉದ್ಧವ್ ಠಾಕ್ರೆ ಬಣಕ್ಕೆ ಪ್ರಜ್ವಲಿಸುವ ಜ್ಯೋತಿಯ ಚಿಹ್ನೆಯನ್ನು ಮುಂಬರುವ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳು ಮುಗಿಯುವವರೆಗೆ ಇರಿಸಿಕೊಳ್ಳಲು ಅನುಮತಿಸಿದೆ.

2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ 55 ವಿಜೇತ ಶಿವಸೇನೆ ಅಭ್ಯರ್ಥಿಗಳು ಏಕನಾಥ್ ಶಿಂಧೆ ಅವರನ್ನು ಬೆಂಬಲಿಸಿರುವುದರಿಂದ ಶೇ.76ರಷ್ಟು ಮತಗಳು ಶಿಂಧೆ ಪರವಾಗಿವೆ. ಉದ್ಧವ್ ಠಾಕ್ರೆ ಬಣದ ಶಾಸಕರ ಪರವಾಗಿ ಶೇ.23.5ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ತ್ರಿಸದಸ್ಯ ಆಯೋಗವು ಸರ್ವಾನುಮತದ ಆದೇಶದಲ್ಲಿ ತಿಳಿಸಿದೆ.

ಸಂಜಯ್ ರಾವುತ್​ ಕಿಡಿ: ಉದ್ಧವ್​ ಠಾಕ್ರೆ ಬಣದಿಂದ ಬಿಲ್ಲು-ಬಾಣದ ಚಿಹ್ನೆ ಕೈ ಜಾರಿದ ಬೆನ್ನಲ್ಲೇ ಆ ಬಣದ ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ಏಕನಾಥ್​ ಶಿಂಧೆ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸಿರುವುದು ಪ್ರಜಾಪ್ರಭುತ್ವದ ಕೊಲೆ ಎಂದು ಸಂಜಯ್​ ರಾವುತ್ ದೂರಿದ್ದಾರೆ. ಅಲ್ಲದೇ, ನಮ್ಮ ಪಕ್ಷವು ಜನರ ಮುಂದೆ ಹೋಗುತ್ತದೆ. ಆಯೋಗದಿಂದ ಈ ತೀರ್ಮಾನವನ್ನು ನಾವು ನಿರೀಕ್ಷಿಸಿದ್ದೆವು ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಉದ್ಧವ್​ ಕೈತಪ್ಪುತ್ತಾ ಶಿವಸೇನೆ ಚುಕ್ಕಾಣಿ.. ಸದಸ್ಯ ಬಲ ಸಾಬೀತಿಗೆ ಚುನಾವಣಾ ಆಯೋಗ ಸೂಚನೆ

Last Updated : Feb 17, 2023, 8:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.