ETV Bharat / bharat

ಆಡಿಯೋ ವೈರಲ್​ ಕೇಸ್​ : ಅಕ್ರಮಗಳ ವಿರುದ್ಧ ಕ್ರಮಕೈಗೊಳ್ಳಲು ಚುನಾವಣಾ ಆಯೋಗ ಸೂಚನೆ

author img

By

Published : Apr 29, 2023, 9:00 PM IST

ಚಾಮರಾಜನಗರ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿಗೆ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಕರೆ ಮಾಡಿ ಆಮಿಷವೊಡ್ಡಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆದ ಬೆನ್ನಲ್ಲೇ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ಅಕ್ರಮಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಸೂಚಿಸಿದೆ.

ec-asks-karnataka-poll-machinery-to-remain-vigilant-against-attempts-to-influence-voters-candidates
ವೈರಲ್​ ಆಡಿಯೋ : ಅಕ್ರಮಗಳ ವಿರುದ್ಧ ಕ್ರಮಕೈಗೊಳ್ಳಲು ಚುನಾವಣಾ ಆಯೋಗ ಸೂಚನೆ

ನವದೆಹಲಿ : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳಿಗೆ ಮತ್ತು ಮತದಾರರಿಗೆ ಲಂಚ ನೀಡುವ ಅಥವಾ ಬೆದರಿಕೆ ಹಾಕುವ ಪ್ರಯತ್ನಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಗೆ ನಿರ್ದೇಶನ ನೀಡಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರ ಕಣ್ಗಾವಲು ಇರಿಸುವಂತೆ ಸೂಚಿಸಿದೆ.

ಚಾಮರಾಜನಗರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರು ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ತಮ್ಮ ಉಮೇದುವಾರಿಕೆಯನ್ನು ವಾಪಸ್​ ಪಡೆಯಲು ಹಣ ಮತ್ತು ಸರ್ಕಾರಿ ವಾಹನ ನೀಡುವುದಾಗಿ ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆದ ಬೆನ್ನಲ್ಲೇ ಚುನಾವಣಾ ಆಯೋಗ ಕ್ರಮಕೈಗೊಳ್ಳಲು ಸೂಚಿಸಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಚಾಮರಾಜನಗರ ಪೊಲೀಸ್​​ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ 171ಇ, 171ಎಫ್​​ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಚಾಮರಾಜನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಸ್ವಾಮಿ ಅಲಿಯಾಸ್ ಆಲೂರು ಮಲ್ಲು ಅವರಿಗೆ ಸಚಿವ ಸೋಮಣ್ಣ ಕರೆ ಮಾಡಿ, ನಾಮಪತ್ರ ವಾಪಸ್​ ಪಡೆಯುವಂತೆ ಅಮಿಷವೊಡ್ಡಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರು, ವೈರಲ್​ ಆಗಿರುವ ಆಡಿಯೋಗೂ ನನಗೂ ಯಾವುದೇ ಸಂಬಂಧ ಇಲ್ಲ. ನನ್ನ ಬಗ್ಗೆ ಅವರಿಗೆ ಯಾವುದೇ ವಿಚಾರವೂ ಸಿಗುತ್ತಿಲ್ಲ. ಅದಕ್ಕೆ ವಿರೋಧಿಗಳು ಈ ರೀತಿ ಮಾಡುತ್ತಿದ್ದಾರೆ. ನಾನು ಯಾವುದೋ ನಾಯಿ ನರಿಗಳ ಮಾತಿಗೆ ಪ್ರತಿಕ್ರಿಯಿಸುವ ಪರಿಸ್ಥಿತಿಯಲ್ಲಿ ಇಲ್ಲ. ನಾನು ದಡ್ಡ ಅಲ್ಲ, 45 ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದೇನೆ. ಚುನಾವಣೆ ಮುಗಿದ ಮೇಲೆ ಈ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದ್ದರು.

ಈ ಬಗ್ಗೆ ಟೀಕೆ ಮಾಡಿದ್ದ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ, ಸೋಮಣ್ಣ ಅವರು ಯಾವ ಗೂಟದ ಕಾರು ಕೊಡುತ್ತಾರೋ ಗೊತ್ತಿಲ್ಲ ಎಂದು ಹೇಳಿದ್ದರು. ಆಡಿಯೋದಲ್ಲಿ ಮಾತನಾಡಿರುವ ಭಾಷೆಗಳು ನಮಗೆ ಗೊತ್ತಾಗಲ್ಲ. ಆದರೆ ಇವರ ಇಂತಹ ಮಾತುಗಳಿಂದ ಆತಂಕಕ್ಕೆ ಒಳಗಾಗಿದ್ದಾರೆ ಎಂಬುದು ಸ್ಪಷ್ಟ ಎಂದು ಹೇಳಿದ್ದರು.

ಜೊತೆಗೆ ಈ ಸಂಬಂಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್​ ರಾಜ್ಯ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲಾ, ಚುನಾವಣಾ ಅಕ್ರಮಗಳ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ಜೊತೆಗೆ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ ಮತ್ತು ಸಚಿವ ವಿ. ಸೋಮಣ್ಣ ನಡುವಿನ ಸಂಭಾಷಣೆಯ ಆಡಿಯೋ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.

''ಬಿಜೆಪಿಯ ಹರಕೆಯ ಕುರಿಯಾಗಿರುವ ಸೋಮಣ್ಣ ಎರಡೂ ಕಡೆ ಬಲಿಯಾಗುವ ಭಯದಲ್ಲಿ ವಿಲವಿಲ ಒದ್ದಾಡುತ್ತಿದ್ದಾರೆ!. ಜೆಡಿಎಸ್​ ಅಭ್ಯರ್ಥಿಯಲ್ಲಿ ಕೈಮುಗಿಯುತ್ತೇನೆ ನಾಮಪತ್ರ ವಾಪಸ್ ತಗೊ, ಗೂಟದ ಕಾರು ಕೊಡಿಸುತ್ತೇನೆ ಎಂದು ಬೇಡುತ್ತಾ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ'' ಎಂದು ಕಾಂಗ್ರೆಸ್​ ಟ್ವೀಟ್​ ಮಾಡಿ ಟೀಕಿಸಿತ್ತು.

ಇದನ್ನೂ ಓದಿ : ವೈರಲ್​ ಆಗಿರುವ ಆಡಿಯೋಗೂ ನನಗೂ ಸಂಬಂಧ ಇಲ್ಲ: ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.