ETV Bharat / bharat

ಮೆಡಿಕಲ್ ಎಮೆರ್ಜೆನ್ಸಿ: ಇಂಡಿಗೋ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

author img

By

Published : Mar 13, 2023, 2:20 PM IST

ಕತಾರ್‌ನ ದೋಹಾಗೆ ತೆರಳಬೇಕಿದ್ದ ಇಂಡಿಗೋ ವಿಮಾನ ಪಾಕಿಸ್ತಾನದ ಕರಾಚಿಯಲ್ಲಿ ಭೂಸ್ಪರ್ಶಿಸಿತು.

Indigo flight
ಇಂಡಿಗೋ ವಿಮಾನ

ಕರಾಚಿ (ಪಾಕಿಸ್ತಾನ​) : ದೆಹಲಿಯಿಂದ ದೋಹಾಗೆ ಪ್ರಯಾಣಿಸುತ್ತಿದ್ದ ಇಂಡಿಗೋ 6E 1736 ವಿಮಾನ ವೈದ್ಯಕೀಯ ತುರ್ತುಪರಿಸ್ಥಿತಿಯ ಕಾರಣದಿಂದಾಗಿ ಪಾಕಿಸ್ತಾನದ ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂ ಸ್ಪರ್ಶ ಮಾಡಿದೆ ಎಂದು ಏರ್‌ಲೈನ್ಸ್ ತಿಳಿಸಿದೆ. ನೈಜೀರಿಯಾದ ಪ್ರಯಾಣಿಕನ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ, ವಿಮಾನ ಲ್ಯಾಂಡಿಂಗ್​ ಆಗುವ ಮೊದಲೇ ಪ್ರಯಾಣಿಕ ಮೃತಪಟ್ಟರು ಎಂದು ಏರ್‌ಲೈನ್ಸ್‌ ತಿಳಿಸಿದೆ.

ಮೃತರನ್ನು ನೈಜೀರಿಯಾ ಮೂಲದ ಅಬ್ದುಲ್ಲಾ(60) ಎಂದು ಗುರುತಿಸಲಾಗಿದೆ. ಘಟನೆ ಸಂಭವಿಸುವ ಮೊದಲೇ ಇಂಡಿಗೋ ಕ್ಯಾಪ್ಟನ್ ಕರಾಚಿ ಏರ್ ಟ್ರಾಫಿಕ್ ಕಂಟ್ರೋಲ್ ಅನ್ನು ಸಂಪರ್ಕಿಸಿ ಮಾನವೀಯ ಆಧಾರದ ಮೇಲೆ ಇಳಿಯಲು ಅನುಮತಿ ಕೋರಿದ್ದರು. ಪಾಕಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರದ ವೈದ್ಯರು(ಸಿಎಎ) ಮತ್ತು ನ್ಯಾಷನಲ್​ ಇನ್​​ಸ್ಟಿಟ್ಯೂಟ್​ ಆಫ್​ ಹೆಲ್ತ್​, ಇಸ್ಲಾಮಾಬಾದ್​(ಎನ್​ಐಎಚ್​) ಪ್ರಯಾಣಿಕನ ಮರಣ ಪ್ರಮಾಣಪತ್ರ ನೀಡಿದೆ.

ಈ ಘಟನೆ ಕುರಿತು ಇಂಡಿಗೋ ಪ್ರತಿಕ್ರಿಯಿಸಿ,"ನಾವು ಈ ಸುದ್ದಿಯಿಂದ ತೀವ್ರ ದುಃಖಿತರಾಗಿದ್ದೇವೆ. ನಮ್ಮ ಪ್ರಾರ್ಥನೆಗಳು ಅವರ ಕುಟುಂಬ ಮತ್ತು ಅವರ ಪ್ರೀತಿಪಾತ್ರರ ಜೊತೆಗಿವೆ. ವಿಮಾನದ ಇತರ ಪ್ರಯಾಣಿಕರನ್ನು ಸಂಬಂಧಿತ ಅಧಿಕಾರಿಗಳ ಸಮನ್ವಯದಲ್ಲಿ ವರ್ಗಾಯಿಸಲು ವ್ಯವಸ್ಥೆ ಮಾಡುತ್ತಿದ್ದೇವೆ"ಎಂದು ಹೇಳಿದೆ. ವೈದ್ಯಕೀಯ ತುರ್ತು ಪರಿಸ್ಥಿತಿಯ ಕಾರಣಕ್ಕೆ ಕರಾಚಿ ವಿಮಾನ ನಿಲ್ದಾಣದಲ್ಲಿ ಏರ್​ ಟ್ರಾಫಿಕ್​ ಕಂಟ್ರೋಲರ್​ ಭಾರತದ ಏರ್​ಲೈನ್ಸ್​ ಪೈಲಟ್​ಗೆ ತುರ್ತು ಲ್ಯಾಂಡಿಂಗ್​ಗೆ ಅನುಮತಿ ನೀಡಲಾಯಿತು ಎಂದು ಪಾಕಿಸ್ತಾನ ನಾಗರಿಕ ವಿಮಾನ ಪ್ರಾಧಿಕಾರದ ವಕ್ತಾರರು ತಿಳಿಸಿದರು.

ಈ ಹಿಂದಿನ ಘಟನೆ: ಕಳೆದ ವರ್ಷದ ಮೇ ತಿಂಗಳಿನಲ್ಲಿ ದೆಹಲಿಯಿಂದ ದೋಹಾಗೆ ಹೊರಟಿದ್ದ ಕತಾರ್ ವಿಮಾನ ತಾಂತ್ರಿಕ ದೋಷದಿಂದ ಇದೇ ಕರಾಚಿ ವಿಮಾಣ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಕ್ಯೂಆರ್​ 579 ಎಂಬ ಕತಾರ್​ ಏರ್​ವೇಸ್‌ ವಿಮಾನದಲ್ಲಿ 100 ಮಂದಿ ಪ್ರಯಾಣಿಕರಿದ್ದರು.

ಇದನ್ನೂ ಓದಿ :ಮುಂಬೈ ಕರಾವಳಿಯಲ್ಲಿ ನೌಕಾಪಡೆಯ ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ, ಮೂವರು ಸಿಬ್ಬಂದಿ ರಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.