ETV Bharat / bharat

ಅವಹೇಳನಕಾರಿ ಹೇಳಿಕೆ: ತಮಿಳುನಾಡಿನಲ್ಲಿ ವಿಎಚ್​ಪಿ ಮಾಜಿ ಮುಖ್ಯಸ್ಥನ ಬಂಧನ

author img

By PTI

Published : Sep 14, 2023, 6:58 PM IST

Updated : Sep 14, 2023, 7:06 PM IST

ಅಂಬೇಡ್ಕರ್ ವಿರುದ್ಧ ಹೇಳಿಕೆ ನೀಡಿದ ವಿಎಚ್​ಪಿ ಮಾಜಿ ಮುಖಂಡನೊಬ್ಬನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ.

Former VHP leader in TN held for remarks against Ambedkar
Former VHP leader in TN held for remarks against Ambedkar

ಚೆನ್ನೈ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್ ನ ರಾಜ್ಯ ಘಟಕದ ಮಾಜಿ ಮುಖ್ಯಸ್ಥ ಆರ್.ಬಿ.ವಿ.ಎಸ್. ಮಣಿಯನ್ ಅವರನ್ನು ಗುರುವಾರ ಮುಂಜಾನೆ ಅವರ ನಿವಾಸದಿಂದ ಬಂಧಿಸಲಾಗಿದೆ. ಅಂಬೇಡ್ಕರ್ ಅವರ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ವಿಎಚ್​ಪಿ ರಾಜ್ಯ ಘಟಕದ ಮಾಜಿ ನಾಯಕನನ್ನು ಮಾಂಬಲಂ ಪೊಲೀಸರು ಮುಂಜಾನೆ 3.30ರ ಸುಮಾರಿಗೆ ಬಂಧಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಬಂಧನವನ್ನು ದೃಢಪಡಿಸಿರುವ ಪೊಲೀಸರು, ಮಣಿಯನ್ ವಿರುದ್ಧ ಎಸ್​ಸಿ / ಎಸ್​ಟಿ ಕಾಯ್ದೆ ಸೇರಿದಂತೆ ಐಪಿಸಿಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಸೆಪ್ಟೆಂಬರ್ 11 ರಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಣಿಯನ್, ಭಾರತೀಯ ಸಂವಿಧಾನವನ್ನು ಕೇವಲ ಓರ್ವ ವ್ಯಕ್ತಿ ರಚಿಸಿಲ್ಲ, ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಸುಮಾರು 300 ಜನ ಸದಸ್ಯರು ಸಿದ್ಧಪಡಿಸಿ ಅಂತಿಮಗೊಳಿಸಿದ್ದಾರೆ ಎಂದು ಹೇಳಿದ್ದರು.

"ಅಂಬೇಡ್ಕರ್ ಅವರೇ ನಮಗೆ ಸಂವಿಧಾನವನ್ನು ನೀಡಿದ್ದಾರೆ ಎಂದು ಕೆಲ ಹುಚ್ಚರು ಹೇಳುತ್ತಾರೆ. ಅವರು ತಮ್ಮ ಬುದ್ಧಿವಂತಿಕೆಯನ್ನು ಒತ್ತೆ ಇಟ್ಟಿದ್ದಾರೆಂದು ತೋರುತ್ತದೆ. ಅಂಬೇಡ್ಕರ್ ತಮ್ಮ ಜಾತಿಗೆ ಸೇರಿದವರಲ್ಲ ಎಂದು ಹೇಳಿದರೆ ಜನರು ಅವರಿಗೆ ಮತ ಹಾಕುವುದನ್ನು ನಿಲ್ಲಿಸುತ್ತಾರೆ. ಎಲ್ಲ ಪಕ್ಷಗಳು ತಮ್ಮ ಬುದ್ಧಿವಂತಿಕೆಯನ್ನು ಒತ್ತೆ ಇಟ್ಟಿವೆ" ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದರು.

ಖ್ಯಾತ ಲೇಖಕರೂ ಆಗಿರುವ ಮಣಿಯನ್, ಅಂಬೇಡ್ಕರ್ ತಿರುಮಾವಲವನ್ ಅವರ ಜಾತಿಗೆ ಸೇರಿದವರೇ ಎಂದು ಪ್ರಶ್ನಿಸಿದರು. "ಅವರು ತಿರುಮಾವಲವನ್ ಜಾತಿಗೆ ಸೇರಿದವರೇ? ನನಗೆ ಹೇಳಿ ... ತಿರುಮಾವಲವನ್ ಒಬ್ಬ ಪರಿಯಾರ್. ಅಂಬೇಡ್ಕರ್ ಒಬ್ಬ ಚಕ್ಕಿಲಿಯಾರ್. ಅಂಬೇಡ್ಕರ್ ನಿಮ್ಮ ಜಾತಿಗೆ ಸೇರಲು ಹೇಗೆ ಸಾಧ್ಯ" ಎಂದು ಅವರು ವಿದುತಲೈ ಚಿರುಥೈಗಲ್ ಕಚ್ಚಿ ಮುಖ್ಯಸ್ಥರನ್ನು ಉದ್ದೇಶಿಸಿ ಪ್ರಶ್ನಿಸಿದರು.

ಜಾತಿಗಳ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಮತ್ತು ಯಾವ ಜಾತಿಯೂ ಭ್ರಾತೃತ್ವವನ್ನು ಎತ್ತಿ ಹಿಡಿಯುವುದಿಲ್ಲ ಎಂದು ಮಣಿಯನ್ ವಾದಿಸಿದ ವಿಡಿಯೋ ವೈರಲ್ ಆಗಿದೆ. ಸಂವಿಧಾನವನ್ನು ರಚಿಸಿದ ಕೀರ್ತಿ ಡಾ. ರಾಜೇಂದ್ರ ಪ್ರಸಾದ್ ಅವರಿಗೆ ಸಲ್ಲಬೇಕೇ ಹೊರತು ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಅವರಿಗೆ ಅಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಈ ವಿಚಾರ ಈಗ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ : I.N.D.I.A ಮೈತ್ರಿಕೂಟದಿಂದ ಸನಾತನ ಧರ್ಮ ನಾಶ ಮಾಡುವ ಹುನ್ನಾರ: ಪ್ರಧಾನಿ ಆರೋಪ

Last Updated : Sep 14, 2023, 7:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.