ETV Bharat / bharat

20 ವರ್ಷಗಳ ಹಿಂದೆ 'ಮೃತಪಟ್ಟಿದ್ದ' ನೌಕಾಪಡೆ ಮಾಜಿ ಸಿಬ್ಬಂದಿ ದೆಹಲಿಯಲ್ಲಿ ಪತ್ತೆ, ತ್ರಿವಳಿ ಕೊಲೆ ಕೇಸಲ್ಲಿ ಬಂಧನ

author img

By ETV Bharat Karnataka Team

Published : Oct 17, 2023, 6:06 PM IST

ಕೊಲೆ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಜೀವಂತವಾಗಿದ್ದರೂ ಸಾವನ್ನಪ್ಪಿದ್ದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದ ನೌಕಾಪಡೆಯ ಮಾಜಿ ಸಿಬ್ಬಂದಿಯನ್ನು ದೆಹಲಿ ಪೊಲೀಸರು ಗುರುತಿಸಿ ಬಂಧಿಸಿದ್ದಾರೆ.

ನೌಕಾಪಡೆ ಮಾಜಿ ಸಿಬ್ಬಂದಿ
ನೌಕಾಪಡೆ ಮಾಜಿ ಸಿಬ್ಬಂದಿ

ನವದೆಹಲಿ: ಮೂವರ ಹತ್ಯೆ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು 20 ವರ್ಷಗಳ ಹಿಂದೆ ಮೃತಪಟ್ಟಿದ್ದಾಗಿ ಬಿಂಬಿಸಿ ನಾಪತ್ತೆಯಾಗಿದ್ದ ಭಾರತೀಯ ನೌಕಾಪಡೆಯ ಮಾಜಿ ಸಿಬ್ಬಂದಿಯನ್ನು ದೆಹಲಿ ಪೊಲೀಸರು ಪತ್ತೆ ಮಾಡಿ ಮಂಗಳವಾರ ಬಂಧಿಸಿದ್ದಾರೆ. ಬಾಲೇಶ್​ಕುಮಾರ್ ಬಂಧಿತ ವ್ಯಕ್ತಿ. ಅಮನ್ ಸಿಂಗ್ ಎಂದು ಹೆಸರು ಬದಲಾಯಿಸಿಕೊಂಡು ಕುಟುಂಬದೊಂದಿಗೆ ವಾಸಿಸುತ್ತಿದ್ದ ಈತನನ್ನು ಅಪರಾಧ ವಿಭಾಗದ ಪೊಲೀಸರು ಸೆರೆ ಹಿಡಿದಿದ್ದಾರೆ.

ಪ್ರಕರಣದ ಹಿನ್ನೆಲೆ: 2004ರಲ್ಲಿ ದೆಹಲಿಯ ಬವಾನಾ ಪ್ರದೇಶದ ನಿವಾಸಿಯಾಗಿದ್ದ ಬಾಲೇಶ್​ಕುಮಾರ್​ ಆಲಿಯಾಸ್​ ಅಮನ್​ಸಿಂಗ್​ ಹಣದ ವಿಚಾರವಾಗಿ ತನ್ನ ಸಂಬಂಧಿಯನ್ನು ಹತ್ಯೆಗೈದು ತಲೆಮರೆಸಿಕೊಂಡಿದ್ದ. ಮೃತ ವ್ಯಕ್ತಿಯ ಪತ್ನಿಯ ಜೊತೆಗೂ ಅಕ್ರಮ ಸಂಬಂಧ ಹೊಂದಿರುವ ಆರೋಪ ಕೂಡ ಈತನ ಮೇಲಿದೆ.

ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಬಾಲೇಶ್​ ಸಹೋದರ ಸುಂದರ್​ಲಾಲ್​ನನ್ನು ಪೊಲೀಸರು ಬಂಧಿಸಿದ್ದರು. ಪೊಲೀಸರಿಂದ ತಪ್ಪಿಸಿಕೊಳ್ಳಲು ಬಾಲೇಶ್​ ರಾಜಸ್ಥಾನಕ್ಕೆ ಟ್ರಕ್​ನಲ್ಲಿ ಪರಾರಿಯಾಗಿದ್ದ. ಈ ವೇಳೆ ತಾನಿದ್ದ ಟ್ರಕ್‌ಗೇ ಬೆಂಕಿ ಹಚ್ಚಿದ್ದ. ಈತನ ಜೊತೆಗೆ ಇದ್ದ ಇಬ್ಬರು ಕೆಲಸಗಾರರು ದುರಂತದಲ್ಲಿ ಸುಟ್ಟು ಹೋಗಿ ಪ್ರಾಣ ಕಳೆದುಕೊಂಡಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ರಾಜಸ್ಥಾನ ಪೊಲೀಸರಿಗೆ ಮೃತ ಇಬ್ಬರಲ್ಲಿ ಬಾಲೇಶ್​ ಕೂಡ ಇದ್ದಾನೆ ಎಂದು ಕುಟುಂಬಸ್ಥರು ಸುಳ್ಳು ಹೇಳಿದ್ದರು. ಪ್ರಮುಖ ಆರೋಪಿ ಮೃತಪಟ್ಟಿದ್ದಾನೆ ಎಂದು ಭಾವಿಸಿ ರಾಜಸ್ಥಾನ ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು.

ಹೆಸರು ಬದಲಿಸಿ ನಕಲಿ ದಾಖಲೆ ಸೃಷ್ಟಿ: ಬೆಂಕಿ ಅನಾಹುತದಲ್ಲಿ ಸಾವನ್ನಪ್ಪಿದ್ದಾಗಿ ಬಿಂಬಿಸಿದ ಬಾಲೇಶ್​ ಪಂಜಾಬ್‌ಗೆ ಪರಾರಿಯಾಗಿದ್ದ. ಬಳಿಕ ತನ್ನ ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಸಾಧಿಸಿದ್ದ. ತನ್ನ ಹೆಸರು ಬದಲಿಸಿಕೊಂಡು, ಅದರಲ್ಲಿ ನಕಲಿ ಗುರುತಿನ ದಾಖಲೆಗಳನ್ನು ಸಂಗ್ರಹಿಸಿದ್ದ. ಆತನ ಹೆಸರನ್ನು ಅಮನ್ ಸಿಂಗ್ ಎಂದು ಬದಲಾಯಿಸಿಕೊಂಡಿದ್ದ.

ಭಾರತೀಯ ನೌಕಾಪಡೆಯ ಮಾಜಿ ಸಿಬ್ಬಂದಿಯಾಗಿದ್ದ ಕಾರಣ, ವಿಮೆಯ ಎಲ್ಲ ಪ್ರಯೋಜನಗಳು ಮತ್ತು ಪಿಂಚಣಿಯನ್ನು ಪತ್ನಿಯೆ ಹೆಸರಿಗೆ ವರ್ಗಾಯಿಸಲಾಗಿತ್ತು. ಅಗ್ನಿ ದುರಂತದಲ್ಲಿ ಸುಟ್ಟು ಹೋಗಿದ್ದ ಟ್ರಕ್ ಅನ್ನು ಆತನ ಸಹೋದರನ ಹೆಸರಿನಲ್ಲಿ ನೋಂದಾಯಿಸಿದ್ದು, ಅದರ ವಿಮೆ ಹಣವನ್ನೂ ಪಡೆದುಕೊಂಡಿದ್ದರು ಎಂದು ಪೊಲೀಸ್​ ತನಿಖೆಯಲ್ಲಿ ಬಹಿರಂಗವಾಗಿದೆ.

ಕೆಲ ದಿನಗಳ ಬಳಿಕ ಬಾಲೇಶ್​, ಪಂಜಾಬ್​ನಿಂದ ಮತ್ತೆ ದೆಹಲಿಗೆ ವಾಪಸ್​ ಆಗಿ ನಜಾಫ್‌ಗಢದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸಲು ಪ್ರಾರಂಭಿಸಿದ್ದ. ಇದರ ಸುಳಿವು ಪಡೆದ ದೆಹಲಿ ಪೊಲೀಸರು ತನಿಖೆ ನಡೆಸಿದಾಗ ಬಾಲೇಶ್​ ಜೀವಂತವಾಗಿದ್ದನ್ನು ಪತ್ತೆ ಮಾಡಿದ್ದಾರೆ. ದಾಳಿ ನಡೆಸಿ ಆತನ ನಿವಾಸದಲ್ಲೇ ಬಂಧಿಸಿದ್ದಾರೆ.

ವಿಚಾರಣೆಯ ವೇಳೆ ಆತ, ಸಂಬಂಧಿಯ ಕೊಲೆ ಮತ್ತು ಬಿಹಾರದ ಇಬ್ಬರು ಕಾರ್ಮಿಕರನ್ನು ಟ್ರಕ್​ನಲ್ಲಿ ದಹಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಇದಲ್ಲದೇ, ಈತನ ವಿರುದ್ಧ 2000ನೇ ಇಸ್ವಿಯಲ್ಲಿ ದೆಹಲಿಯ ಕೋಟಾ ಹೌಸ್‌ನಿಂದ ಬೆಲೆಬಾಳುವ ಪುರಾತನ ವಸ್ತುಗಳನ್ನು ಕದ್ದಿದ್ದ ಆರೋಪ ಕೂಡ ಇದೆ. ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣ ದಾಖಲಾಗಿದೆ.

ಕುಟುಂಬಸ್ಥರ ವಿಚಾರಣೆ: ಬಾಲೇಶ್​ ಪ್ರಕರಣದಲ್ಲಿ ಪತ್ನಿ ಮತ್ತು ಇತರ ಕುಟುಂಬ ಸದಸ್ಯರ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರಲ್ಲಿ ಭಾಗಿಯಾಗಿದ್ದು ಪತ್ತೆಯಾದಲ್ಲಿ ಅವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದರು. ಹರಿಯಾಣದ ಪಾಣಿಪತ್ ಮೂಲದ ಬಾಲೇಶ್ 1981 ರಲ್ಲಿ ಭಾರತೀಯ ನೌಕಾಪಡೆಯಲ್ಲಿ ಸ್ಟೀವರ್ಡ್ ಆಗಿ ಸೇರಿಕೊಂಡಿದ್ದರು. 1996 ರವರೆಗೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇದೀಗ ಆರೋಪಿಗೆ 60 ವರ್ಷ ವಯಸ್ಸಾಗಿದೆ.

ಇದನ್ನೂ ಓದಿ: SC on Same Sex Marriage: ಸಲಿಂಗ ವಿವಾಹಕ್ಕೆ ಯಾವುದೇ ಕಾನೂನು ಮಾನ್ಯತೆಯಿಲ್ಲ.. ಸುಪ್ರೀಂ ಬಹುಮತದ ತೀರ್ಪು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.